ADVERTISEMENT

ವೇತನ ಪರಿಷ್ಕರಣೆಗೆ ತಿಂಗಳ ಗಡುವು: ಶಶಿಧರ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 17:30 IST
Last Updated 29 ಡಿಸೆಂಬರ್ 2019, 17:30 IST

ಹಾವೇರಿ: ‘ರಾಜ್ಯದಲ್ಲಿ ಕಾನ್‌ಸ್ಟೆಬಲ್‌ ಹುದ್ದೆಯಿಂದ ಡಿವೈಎಸ್ಪಿ ಹುದ್ದೆಯವರೆಗೆ ಇರುವ 87 ಸಾವಿರ ಸಿಬ್ಬಂದಿಯ ವೇತನ ಪರಿಷ್ಕರಣೆಯನ್ನು ತಿಂಗಳೊಳಗಾಗಿ ರಾಜ್ಯ ಸರ್ಕಾರ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದು ಕರ್ನಾಟಕ ಪೊಲೀಸ್‌ ಮಹಾಸಭಾದ ಅಧ್ಯಕ್ಷ ವಿ.ಶಶಿಧರ್‌ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 2012ರಲ್ಲಿ ನೇಮಕವಾದವರ ಮೂಲವೇತನ ಹಾಗೂ2018ರಲ್ಲಿ ನೇಮಕವಾದವರ ಮೂಲವೇತನ₹ 23,500 ಇದೆ. ಅಂದರೆ, 8 ವರ್ಷಗಳಿಂದ ಕಾನ್‌ಸ್ಟೆಬಲ್‌ಗಳ ವೇತನ ಹೆಚ್ಚಳವಾಗಿಲ್ಲ. ಹಾಗಾಗಿ ರಾಘವೇಂದ್ರ ಔರಾದಕರ್‌ ಅವರ ವರದಿಯನ್ನು ಕೂಡಲೇ ಜಾರಿಗೆ ತರಬೇಕು.ಶಿಸ್ತಿನ ನೆಪದಲ್ಲಿ 16ರಿಂದ 18 ಗಂಟೆ ಜೀತದಾಳುಗಳಂತೆ ದುಡಿಸಿಕೊಂಡು, ಸರಿಯಾದ ವೇತನವನ್ನೇ ಕೊಡುತ್ತಿಲ್ಲ. ಹಿರಿಯ ಅಧಿಕಾರಿಗಳ ಬಚ್ಚಲು ಬಾಚಲು ಕಾನ್‌ಸ್ಟೆಬಲ್‌ಗಳನ್ನು ಬಳಸಿಕೊಳ್ಳುತ್ತಾರೆ. ‘ಪೊಲೀಸ್‌ ವರ್ಗಾವಣೆ’ ಎಂಬುದು ದಂಧೆಯಾಗಿದೆ ಎಂದು ಗಂಭೀರ ಆರೋಪ ಮಾಡಿದರು.

‘ಶನಿ ಸಂತಾನ’ಗಳಂತಿರುವ ಐಎಎಸ್‌, ಐಪಿಎಸ್‌ ಅಧಿಕಾರಿಗಳ ಕೈಯಲ್ಲಿ ಕಾರ್ಯಾಂಗ ಸಿಲುಕಿದೆ. ಶಿಸ್ತಿನ ಹೆಸರಿನಲ್ಲಿ ಕೆಳಹಂತದ ಸಿಬ್ಬಂದಿಯನ್ನು ಶೋಷಣೆ ಮಾಡಲಾಗುತ್ತಿದೆ. ಹಾಗಾಗಿ, ಪೊಲೀಸರಲ್ಲಿ ವೇದನೆ, ಆಕ್ರೋಶ ಮಡುಗಟ್ಟಿದ್ದು, ಬೂದಿಮುಚ್ಚಿದ ಕೆಂಡದಂತಿದೆ. ಇವರಿಗೆ ನ್ಯಾಯ ಕೊಡಿಸಲು ಮೂರು ಹಂತಗಳ ಹೋರಾಟ ಕೈಗೊಂಡಿದ್ದೇನೆ. ಮೊದಲನೆಯದಾಗಿ ಡಿಜಿಪಿಗೆ 35 ಸಾವಿರ ಸಿಬ್ಬಂದಿಯಿಂದ ಮನವಿ ಪತ್ರ, ಎರಡನೆಯದಾಗಿ ಸಮಾನ ಮನಸ್ಕ ಹೋರಾಟಗಾರರ ಜತೆ ಒಗ್ಗೂಡಿ ರಾಜ್ಯದಾದ್ಯಂತ ಪ್ರತಿಭಟನೆ, ಮೂರನೆಯದಾಗಿ 35 ಸಾವಿರ ಮಂದಿಯಿಂದ ಹೈಕೋರ್ಟ್‌ನಲ್ಲಿ ಅರ್ಜಿ ಹಾಕಿ ನ್ಯಾಯ ಕೇಳುವುದು’ ಎಂದು ವಿವರಿಸಿದರು.

ADVERTISEMENT

ನಮ್ಮ ಹೋರಾಟದಲ್ಲಿ ನೇರವಾಗಿ 35 ಸಾವಿರ ಮಂದಿ ಗುರುತಿಸಿಕೊಂಡರೆ, ಹಿರಿಯ ಅಧಿಕಾರಿಗಳು ತೆರೆಮರೆಯಲ್ಲಿ ಇದ್ದುಕೊಂಡು ನಮ್ಮನ್ನು ಬೆಂಬಲಿಸುತ್ತಾರೆ. ರಾಜಕಾರಣಿಗಳ ಹಸ್ತಕ್ಷೇಪದಿಂದ ಪೊಲೀಸ್‌ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ‘ವಿಧಾನಸೌಧ ಮುತ್ತಿಗೆ’ ಹಾಕಲು ಸಿದ್ಧವಿದ್ದರೂ, ಸಮಾಜಘಾತುಕ ಶಕ್ತಿಗಳು ಮೇಲುಗೈ ಸಾಧಿಸಬಾರದು ಎಂಬ ಉದ್ದೇಶದಿಂದ ಸುಮ್ಮನಿದ್ದೇವೆ. ನನಗೆ ಭ್ರಷ್ಟಾಚಾರದ ಬಗ್ಗೆ ದೂರು ನೀಡಿದರೆ, ಅಂಥವರನ್ನು ಬೇರು ಸಮೇತ ಕಿತ್ತು ಹಾಕಲು ಸಿದ್ಧನಿದ್ದೇನೆ. ಜನವರಿಯಲ್ಲಿ ‘ಪೊಲೀಸ್‌ ವರ್ಲ್ಡ್‌’ ಪಾಕ್ಷಿಕ ಪತ್ರಿಕೆ ಹೊರತರಲಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಲಿದ್ದೇವೆ’ ಎಂದು ಮಾಹಿತಿ ನೀಡಿದರು.

2016ರಲ್ಲಿ ವೇತನ ಪರಿಷ್ಕರಣೆ ಬಗ್ಗೆ ಧ್ವನಿ ಎತ್ತಿದ್ದಕ್ಕಾಗಿ ನನ್ನ ಮೇಲೆ ದೇಶದ್ರೋಹದ ಆರೋಪ ಹೊರಿಸಿ, ಜೈಲಿಗೆ ಕಳುಹಿಸಲಾಯಿತು. ಈಗ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ನಾನು ಹೊರಗಡೆ ಬಂದಿದ್ದೇನೆ. ಇಂದಿಗೂ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.