ADVERTISEMENT

ಹಾವೇರಿ: ಸಂತರ ನಾಡಿನಲ್ಲಿ ಭಯದ ಕಾರ್ಮೋಡ

* ಶಿಗ್ಗಾವಿಯಲ್ಲಿ ಹೆಚ್ಚಾದ ಅಪರಾಧ ಕೃತ್ಯಗಳು * ಆಸ್ತಿ ವ್ಯಾಜ್ಯ, ಬಡ್ಡಿ ದಂಧೆ, ಜೂಜು, ಮದ್ಯ ಅಕ್ರಮ ಮಾರಾಟ

ಸಂತೋಷ ಜಿಗಳಿಕೊಪ್ಪ
Published 15 ಆಗಸ್ಟ್ 2025, 4:35 IST
Last Updated 15 ಆಗಸ್ಟ್ 2025, 4:35 IST
ಕೊಲೆಗೆ ಯತ್ನ ನಡೆದ ಶಿಗ್ಗಾವಿ ಹಳೇ ಬಸ್‌ ನಿಲ್ದಾಣ ರಸ್ತೆಯಲ್ಲಿರುವ ಆರೋಪಿ ಮಹ್ಮದ್ ಸಲೀಂ ಶೇಕ್‌ನ ಬಟ್ಟೆ ಅಂಗಡಿ
ಕೊಲೆಗೆ ಯತ್ನ ನಡೆದ ಶಿಗ್ಗಾವಿ ಹಳೇ ಬಸ್‌ ನಿಲ್ದಾಣ ರಸ್ತೆಯಲ್ಲಿರುವ ಆರೋಪಿ ಮಹ್ಮದ್ ಸಲೀಂ ಶೇಕ್‌ನ ಬಟ್ಟೆ ಅಂಗಡಿ   

ಹಾವೇರಿ: ‘ಸಂತರ ನಾಡು’ ಎಂದೇ ಖ್ಯಾತಿ ಪಡೆದಿರುವ ಶಿಗ್ಗಾವಿ, ಇತ್ತೀಚಿನ ದಿನಗಳಲ್ಲಿ ನಾನಾ ಅಪರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಿದೆ. ಹಾಡಹಗಲೇ ಮಚ್ಚು–ಲಾಂಗ್‌ ಹಿಡಿದು ಹಲ್ಲೆ ಮಾಡುತ್ತಿರುವ ದುಷ್ಕರ್ಮಿಗಳಿಂದಾಗಿ, ಸ್ಥಳೀಯರು ಭಯಭೀತಗೊಂಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶಿಗ್ಗಾವಿ, ಅಭಿವೃದ್ಧಿಯತ್ತ ಸಾಗುತ್ತಿದೆ. ಹೊಸ ಬಡಾವಣೆ ಹಗೂ ಉದ್ಯಮಗಳು ತಲೆ ಎತ್ತುತ್ತಿವೆ. ಜಿಲ್ಲೆಯ ಇತರೆ ತಾಲ್ಲೂಕಿಗೆ ಹೋಲಿಸಿದರೆ, ಶಿಗ್ಗಾವಿ ತಾಲ್ಲೂಕಿನಲ್ಲಿ ವಾಣಿಜ್ಯ ಚಟುವಟಿಕೆಗಳು ಚುರುಕುಗೊಂಡಿವೆ.

ಶಿಗ್ಗಾವಿ ಪಟ್ಟಣ ಹಾಗೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿದೆ. ತೀವ್ರತರ ಪ್ರಕರಣಗಳು ಮಾತ್ರ ಠಾಣೆ ಮೆಟ್ಟಿಲೇರುತ್ತಿವೆ. ಉಳಿದ ಪ್ರಕರಣಗಳು, ಸ್ಥಳೀಯ ಮಟ್ಟದಲ್ಲೇ ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುತ್ತಿವೆ.

ADVERTISEMENT

ಆಸ್ತಿ ವ್ಯಾಜ್ಯ, ಬಡ್ಡಿ ದಂಧೆ, ಜೂಜು, ಮದ್ಯ ಅಕ್ರಮ ಮಾರಾಟದಂಥ ಚಟುವಟಿಕೆಗಳು ಎಗ್ಗಿಲ್ಲದೇ ನಡೆದಿವೆ. ತೆರೆಮರೆಯಲ್ಲಿ ಗಾಂಜಾ ಮಾರಾಟ ಹಾಗೂ ಸೇವನೆಯೂ ನಡೆಯುತ್ತಿದೆ. ಇತ್ತೀಚೆಗೆ ದುಂಡಶಿ ಬಳಿ ಅರಣ್ಯ ಪ್ರದೇಶದಲ್ಲಿ ಪೆಂಡಾಲ್ ಹಾಕಿ ಜೂಜು ಆಡಿಸುತ್ತಿದ್ದವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದರು. ಆದರೆ, ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಕೃತ್ಯಗಳಿಗೆ ಸಂಪೂರ್ಣ ಲಗಾಮು ಹಾಕಲು ಸಾಧ್ಯವಾಗುತ್ತಿಲ್ಲ.

ಹಾಡಹಗಲೇ ಕೊಚ್ಚಿ ಕೊಂದರು: ಶಿಗ್ಗಾವಿಯ ಗುತ್ತಿಗೆದಾರ ಶಿವಾನಂದ ಚನ್ನಬಸಪ್ಪ ಕುನ್ನೂರ ಅವರನ್ನು ಜೂನ್ 24ರಂದು ಹಾಡಹಗಲೇ ಮಾರಕಾಸ್ತ್ರಗಳನ್ನು ಕೊಚ್ಚಿ ಕೊಲೆ ಮಾಡಲಾಯಿತು. ಆಸ್ತಿ ವ್ಯಾಜ್ಯ ಹಾಗೂ ಅಕ್ರಮ ಸಲುಗೆಯ ವಿಚಾರ ಕೊಲೆಯ ಉದ್ದೇಶವಾಗಿತ್ತೆಂದು ಪೊಲೀಸರ ತನಿಖೆಯಿಂದ ಗೊತ್ತಾಗಿತ್ತು.

ಪ್ರಮುಖ ಆರೋಪಿ ನಾಗರಾಜ ಪ್ರಕಾಶ ಸವದತ್ತಿ ಹಾಗೂ ಅಶ್ರಫ್‌ಖಾನ್ ಅಹ್ಮದ್‌ಖಾನ್ ಪಠಾಣನನ್ನು ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು. ಇತರೆ ಆರೋಪಿಗಳಾದ ಸುದೀಪ ಸುಭಾಷ್ ಹರಿಜನ, ಸೂರಜ ಹಾಲೇಶ ಗೌಳಿ, ವಿರೇಶ ಪ್ರಕಾಶ ಮಾವೂರು ಹಾಗೂ ಶ್ರೀಕಾಂತ ಅವರನ್ನೂ ಸೆರೆ ಹಿಡಿದು ಜೈಲಿಗಟ್ಟಿದ್ದಾರೆ.

ತಮ್ಮದೇ ಊರಿನ ಶಿವಾನಂದ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದ  ದೃಶ್ಯ ನೋಡಿದ್ದ ಸ್ಥಳೀಯರು, ನಿಂತಲೇ ಬೆವರಿದ್ದರು. ಕೆಲವರು ಜ್ವರ ಬಂದು ಮಲಗಿದ್ದರು. ಕೊಲೆಯಾದ ಸ್ಥಳವನ್ನು ನೋಡಿದರೆ ಈಗಲೂ ಕೆಲವರು ಬೆಚ್ಚಿ ಬೀಳುತ್ತಿದ್ದಾರೆ.

ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನ: ಶಿವಾನಂದ ಕೊಲೆ ಘಟನೆ ಮರೆಯುವ ಮುನ್ನವೇ, ಆಗಸ್ಟ್ 13ರಂದು ಮತ್ತೊಂದು ಅಪರಾಧ ಕೃತ್ಯ ನಡೆದಿದೆ.

ಶಿವಾನಂದ ಕೊಲೆಯಾಗಿದ್ದ ಸ್ಥಳದಿಂದ ಕೇವಲ 500 ಮೀಟರ್ (ಠಾಣೆಯಿಂದ ಸುಮಾರು 100 ಮೀಟರ್) ದೂರದಲ್ಲಿರುವ ಬಟ್ಟೆ ಅಂಗಡಿಯಲ್ಲಿ ಗಂಗಪ್ಪ ಹೂವಣ್ಣನವರ (32) ಎಂಬುವವರ ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹೊಡೆದು ಕೊಲೆಗೆ ಯತ್ನಿಸಲಾಗಿದೆ. ಕೃತ್ಯ ಎಸಗಿದ್ದ ಆರೋಪಿ ಮಹ್ಮದ್ ಸಲೀಂ ಶೇಕ್‌ನನ್ನು (27) ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹಣಕಾಸಿನ ವ್ಯವಹಾರಕ್ಕಾಗಿ ಕೃತ್ಯ ನಡೆದಿರುವುದು ತನಿಖೆಯಿಂದ ಗೊತ್ತಾಗಿದೆ. ಈ ಘಟನೆ ಸ್ಥಳೀಯರನ್ನು ಮತ್ತಷ್ಟು ಭಯಭೀತಗೊಳಿಸಿದೆ.

‘ಚಂದಾಪುರದ ನಿವಾಸಿ ಗಂಗಪ್ಪ, ‘ಬಾಯ್ಸ್ ಟೆಕ್ಸ್‌ಟೈಲ್ಸ್’ ಬಟ್ಟೆ ಇಟ್ಟುಕೊಂಡಿದ್ದ ಸ್ನೇಹಿತ ಸಲೀಂ ಶೇಕ್‌ಗೆ ಕಷ್ಟಕಾಲದಲ್ಲಿ ₹ 2 ಲಕ್ಷ ಸಾಲ ನೀಡಿದ್ದರು. ಅದನ್ನು ವಾಪಸು ನೀಡದೇ ಸಲೀಂ ಶೇಕ್ ಸತಾಯಿಸುತ್ತಿದ್ದ. ಆಗಸ್ಟ್ 13ರಂದು ಹಣ ವಾಪಸು ಕೊಡುವುದಾಗಿ ಅಂಗಡಿಗೆ ಕರೆಸಿದ್ದ. ಅವಾಗಲೇ ಶಟರ್‌ ಹಾಕಿಸಿ, ಕಣ್ಣಿಗೆ ಖಾರದ ಪುಡಿ ಎರಚಿ ಮಚ್ಚಿನಿಂದ ಹೊಡೆದಿದ್ದ’ ಎಂದು ಪೊಲೀಸರು ಹೇಳಿದರು.

‘ಪ್ರಾಣಭಯದಲ್ಲಿ ಗಂಗಪ್ಪ, ಶಟರ್‌ ತೆಗೆದು ಹೊರಗೆ ಓಡಿ ಬಂದು ಕೂಗಾಡಿದ್ದರು. ಅವರ ಹಿಂದೆಯೇ ಆರೋಪಿ ಮಚ್ಚು ಹಿಡಿದುಕೊಂಡು ಬಂದಿದ್ದ. ಸ್ಥಳೀಯರು ರಕ್ಷಣೆಗೆ ಬರುವಷ್ಟರಲ್ಲಿ ಆರೋಪಿ, ಅಂಗಡಿಯ ಮೆಟ್ಟಿಲು ಬಳಿ ಮಚ್ಚು ಎಸೆದು ಠಾಣೆಗೆ ಬಂದು ಶರಣಾಗಿದ್ದಾನೆ. ಈತ ಹಲವರ ಬಳಿ ಲಕ್ಷಾಂತರ ರೂಪಾಯಿ ಸಾಲ ಮಾಡಿರುವ ಮಾಹಿತಿಯಿದೆ’ ಎಂದು ತಿಳಿಸಿದರು.

‘ಸಾಲ ವಾಪಸು ಕೇಳಿದ್ದಕ್ಕೆ ಗಂಗಪ್ಪನನ್ನು ಕೊಲೆ ಮಾಡಲು ಯೋಚಿಸಿದ್ದೆ. ಖಾರದ ಪುಡಿಯನ್ನು ತಂದಿಟ್ಟುಕೊಂಡಿದ್ದೆ. ಸಿ.ಸಿ.ಟಿ.ವಿ. ಕ್ಯಾಮೆರಾ ಆಫ್‌ ಮಾಡಿದ್ದೆ. ಗಂಗಪ್ಪ ಅಂಗಡಿಗೆ ಬಂದಾಗ ಸಂಚಿನಂತೆ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಗಂಗಪ್ಪ ಆಸ್ಪತ್ರೆಯಲ್ಲಿದ್ದು, ಆತನಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ಹೇಳಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ವ್ಯಾಪಾರಿಗಳು, ‘ಮಚ್ಚು ನೋಡಿ ನಮಗೂ ಗಾಬರಿಯಾಯಿತು. ಕೆಲವರು ಪೊಲೀಸರ ಭಯವೇ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಮೇಲಿಂದ ಮೇಲೆ ಇಂಥ ಘಟನೆಗಳು ನಡೆಯುತ್ತಿವೆ’ ಎಂದರು. 

ಹರೀಶ ಕಮ್ಮಾರ
ಎಲ್‌.ವೈ. ಶಿರಕೋಳ
ಆರೋಪಿ ಮಹ್ಮದ್ ಸಲೀಂ ಶೇಕ್
ಅಪರಾಧಗಳಿಂದ ಸಂತರ ನಾಡಿಗೆ ಕೆಟ್ಟು ಹೆಸರು ಬರುತ್ತಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಅಕ್ರಮ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಬೇಕು
ಹರೀಶ ಕಮ್ಮಾರ ಸ್ಥಳೀಯ ನಿವಾಸಿ
ಶಿಗ್ಗಾವಿಯಲ್ಲಿ ಅಪರಾಧ ಕೃತ್ಯ ಎಸಗಿದವರನ್ನು ತ್ವರಿತವಾಗಿ ಬಂಧಿಸಿ ಕ್ರಮ ಜರುಗಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಹಲವರ ಮೇಲೆ ಕಣ್ಣಿಡಲಾಗಿದೆ
ಎಲ್.ವೈ. ಶಿರಕೋಳ ಹೆಚ್ಚುವರಿ ಎಸ್‌ಪಿ 

ಜನಪ್ರತಿನಿಧಿಗಳ ಹೆಸರು ದುರ್ಬಳಕೆ

ಅಪರಾಧ ಕೃತ್ಯ ಹಾಗೂ ಅಕ್ರಮ ಚಟುವಟಿಕೆ ನಡೆಸುತ್ತಿರುವ ಹಲವರು ಜನಪ್ರತಿನಿಧಿಗಳ ಹೆಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ‘ನಾನು ಶಾಸಕನ ಆಪ್ತ. ನಾನು ಸಚಿವನ ಆಪ್ತ’ ಎಂದು ಹೇಳಿ ಸರ್ಕಾರಿ ಅಧಿಕಾರಿಗಳು ಹಾಗೂ ಪೊಲೀಸರನ್ನೂ ಹೆದರಿಸುವವರು ಹೆಚ್ಚಾಗಿದ್ದಾರೆ. ಇದು ಸಹ ಅಪರಾಧ ಕೃತ್ಯಗಳ ಹೆಚ್ಚಳಕ್ಕೆ ಕಾರಣವಾಗಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ. ‘ಅಕ್ರಮ ಚಟುವಟಿಕೆ ನಡೆಸುತ್ತಿರುವ ಬಹುತೇಕರು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಆಪ್ತರೆಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಜೊತೆಗೆ ಶಾಸಕರ ಜೊತೆಗಿನ ಫೋಟೊ ಇಟ್ಟುಕೊಂಡು ಸ್ಥಳೀಯರನ್ನು ಹೆದರಿಸುತ್ತಿದ್ದಾರೆ. ಈ ವಿಷಯ ಗೊತ್ತಿದ್ದರೂ ಶಾಸಕರು ಮೌನವಾಗಿದ್ದಾರೆ. ಇಂಥ ಅಕ್ರಮ ದಂಧೆಕೋರರ ವಿರುದ್ಧ ಶಾಸಕರೇ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಅಪರಾಧಿಗಳನ್ನು ಮಟ್ಟಹಾಕುವಂತೆ ಪೊಲೀಸರಿಗೆ ಕಠಿಣ ಸಂದೇಶ ನೀಡಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಹುಬ್ಬಳ್ಳಿಯ ಎಂಒಬಿಗಳ ಕರಿನೆರಳು

‘ಹುಬ್ಬಳ್ಳಿಯ ಎಂಒಬಿಗಳು (ಅಪರಾಧ ಹಿನ್ನೆಲೆಯುಳ್ಳವರು) ಶಿಗ್ಗಾವಿಗೆ ಬರುತ್ತಿದ್ದಾರೆ. ತಮ್ಮ ದಂಧೆಗಳನ್ನು ಮಾಡಲು ಸ್ಥಳೀಯರನ್ನು ಬಳಸಿಕೊಳ್ಳುತ್ತಿದ್ದಾರೆ. ಇದರಿಂದಲೇ ಅಪರಾಧ ಕೃತ್ಯಗಳು ನಡೆಯುತ್ತಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ. ‘ಕೆಲ ಹೋಟೆಲ್‌ಗಳು ಹುಬ್ಬಳ್ಳಿ ಎಂಒಬಿಗಳ ತಾಣವಾಗಿವೆ. ತಾಲ್ಲೂಕಿಗೆ ಬರುವ ಎಂಒಬಿಗಳ ಮೇಲೆ ನಿಗಾ ವಹಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.