ADVERTISEMENT

ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರ | ಉಪ ಚುನಾವಣೆ: ಜಿಲ್ಲಾಡಳಿತ ಸಜ್ಜು

ಆಗಸ್ಟ್–ಸೆಪ್ಟೆಂಬರ್‌ನಲ್ಲಿ ದಿನಾಂಕ ಘೋಷಣೆ ಸಾಧ್ಯತೆ

ಸಂತೋಷ ಜಿಗಳಿಕೊಪ್ಪ
Published 16 ಜುಲೈ 2024, 5:47 IST
Last Updated 16 ಜುಲೈ 2024, 5:47 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

ಹಾವೇರಿ: ನೂತನ ಸಂಸದ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ತೆರೆಮರೆಯಲ್ಲಿ ತಯಾರಿ ಶುರುವಾಗಿದೆ. ಮತಯಂತ್ರಗಳ ಪರಿಶೀಲನೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕೆಲಸ ಆರಂಭವಾಗಿದೆ.

‘ಮತದಾನಕ್ಕೆ ಅಗತ್ಯವಿರುವ ಮತಯಂತ್ರಗಳನ್ನು ಪರೀಕ್ಷಿಸಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ’ ಎಂಬುದಾಗಿ ರಾಜ್ಯ ಚುನಾವಣೆ ಆಯೋಗ, ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಅದರನ್ವಯ ಅಧಿಕಾರಿಗಳು, ಮತಯಂತ್ರಗಳ ಪರೀಕ್ಷೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.

ADVERTISEMENT

ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ 241 ಮತಗಟ್ಟೆಗಳನ್ನು ಜಿಲ್ಲಾಡಳಿತ ಗುರುತಿಸಿ ಪಟ್ಟಿ ಸಿದ್ಧಪಡಿಸಿದೆ. ಮತಗಟ್ಟೆಗಳಲ್ಲಿ ತಲಾ ಎರಡು ಮತಯಂತ್ರಗಳನ್ನು ಇರಿಸಲು ತೀರ್ಮಾನಿಸಲಾಗಿದ್ದು, ಇದಕ್ಕೆ ಅಗತ್ಯವಿರುವ 482 ಮತಯಂತ್ರಗಳನ್ನು ಈಗಾಗಲೇ ಹೊಂದಿಸಿಟ್ಟುಕೊಳ್ಳಲಾಗಿದೆ. ಜುಲೈ 8ರಿಂದ 10ರವರೆಗೆ ಮತಯಂತ್ರಗಳ ಪ್ರಥಮ ಹಂತದ ಪರಿಶೀಲನಾ ಕಾರ್ಯ ನಡೆದಿದ್ದು ಈ ಕಾರ್ಯಕ್ಕೆ ಹಾಜರಾಗಿದ್ದ ರಾಜಕೀಯ ಪಕ್ಷದ ಪ್ರತಿನಿಧಿಗಳು ಅವುಗಳ ಕಾರ್ಯನಿರ್ವಣೆ ಬಗ್ಗೆ ಅಣಕು ಮತದಾನದ ಮೂಲಕ ತಿಳಿದುಕೊಂಡರು.

‘ಮುಂದಿನ ಆರು ತಿಂಗಳ ಅವಧಿಯೊಳಗೆ ಉಪ ಚುನಾವಣೆ ನಡೆಯಬೇಕು. ಹೀಗಾಗಿ, ಆಗಸ್ಟ್‌ ಅಥವಾ ಸೆಪ್ಟೆಂಬರ್‌ ತಿಂಗಳಿನಲ್ಲಿ ಉಪಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ ಇದೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಗ್ಗಾವಿ–ಸವಣೂರು ಸೇರಿದಂತೆ ರಾಜ್ಯದ ಮೂರು ಕಡೆಗಳಲ್ಲಿ ಏಕಕಾಲದಲ್ಲಿ ಉಪ ಚುನಾವಣೆ ನಡೆಯಲಿದೆ. ಆಯಾ ಜಿಲ್ಲಾಡಳಿತ ಅಧಿಕಾರಿಗಳಿಗೆ, ಉಪ ಚುನಾವಣೆ ಬಗ್ಗೆ ಆಯೋಗದ ಅಧಿಕಾರಿಗಳು ಈಗಾಗಲೇ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಅವುಗಳ ಅನ್ವಯ ಜಿಲ್ಲಾಡಳಿತ ಅಧಿಕಾರಿಗಳು, ಪ್ರಕ್ರಿಯೆ ಆರಂಭಿಸಿದ್ದಾರೆ.

ಪಟ್ಟಿ ಪರಿಷ್ಕರಣೆ, ಸಂಖ್ಯೆಯಲ್ಲಿ ವ್ಯತ್ಯಾಸ:

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶಿಗ್ಗಾವಿ– ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ 2,31,151 ಮತದಾರರಿದ್ದರು.   ಉಪ ಚುನಾವಣೆಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುತ್ತಿದ್ದು, ಮತದಾರರ ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸವಾಗುವ ಸಾಧ್ಯತೆ ಇದೆ.

‘ಉಪ ಚುನಾವಣೆ ಸಿದ್ಧತೆ ಬಗ್ಗೆ ಚುನಾವಣಾ ಆಯೋಗದಿಂದ ಕೆಲ ಸೂಚನೆಗಳು ಬಂದಿವೆ. ಅದರಂತೆ ಕೆಲಸ ಶುರು ಮಾಡಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಕೆಲಸವೂ ನಡೆಯುತ್ತಿದೆ’ ಎಂದು ಸವಣೂರು ಉಪ ವಿಭಾಗಾಧಿಕಾರಿ ಮಹ್ಮದ್ ಖಿಜರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತದಾರರ ಪಟ್ಟಿ ಪರಿಷ್ಕರಣೆ ನಂತರ, ಒಟ್ಟು ಮತದಾರರ ಸಂಖ್ಯೆಯಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ಸಾವಿರಕ್ಕಿಂತ ಸ್ವಲ್ಪ ಹೆಚ್ಚು ಅಥವಾ ಸಾವಿರಕ್ಕಿಂತ ತೀರಾ ಕಡಿಮೆಯಾಗಬಹುದು’ ಎಂದು ತಿಳಿಸಿದರು.

ಶಿಗ್ಗಾವಿ–ಸವಣೂರು ವಿಧಾನಸಭಾ ಕ್ಷೇತ್ರದ ಸದ್ಯದ ಅಂಕಿ–ಅಂಶ

ಒಟ್ಟು ಮತದಾರರು; 2,31,151

ಪುರುಷ ಮತದಾರರು; 1,18,478

ಮಹಿಳಾ ಮತದಾರರು; 1,12,666

ಇತರೆ ಮತದಾರರು; 7

85 ವರ್ಷ ಮೇಲ್ಪಟ್ಟ ಮತದಾರರು; 2,828

ಅಂಗವಿಕಲ ಮತದಾರರು; 5,030

ಸೇವಾ ಮತದಾರರು; 144

18 ವರ್ಷದಿಂದ 19 ವರ್ಷದ ಮತದಾರರು: 6,536

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.