ADVERTISEMENT

‘ದೇಶಕ್ಕೆ ಮೋದಿ, ಕ್ಷೇತ್ರಕ್ಕೆ ಉದಾಸಿ’

ನಿರಂತರ 8 ಕಿ.ಮೀ.ಗೂ ಅಧಿಕ ಪಾದಯಾತ್ರೆ; ಮತಯಾಚಿಸಿದ ಬಿಜೆಪಿ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 15:18 IST
Last Updated 21 ಏಪ್ರಿಲ್ 2019, 15:18 IST
ಲೋಕಭಾ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನವಾದ ಭಾನುವಾರ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪಾದಯಾತ್ರೆ ಮೂಲಕ ಮತಯಾಚಿಸಿದರು 
ಲೋಕಭಾ ಚುನಾವಣೆಯ ಬಹಿರಂಗ ಪ್ರಚಾರದ ಅಂತಿಮ ದಿನವಾದ ಭಾನುವಾರ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪಾದಯಾತ್ರೆ ಮೂಲಕ ಮತಯಾಚಿಸಿದರು    

ಹಾವೇರಿ: ನಗರದ ಪುರಸಿದ್ಧೇಶ್ವರ ಗುಡಿಯಿಂದ ಸಿಂಧಗಿ ಮಠ ತನಕ ಸುಮಾರು 8 ಕಿ.ಮೀ.ಗೂ ಅಧಿಕ ಪಾದಯಾತ್ರೆಯ ಮೂಲಕ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ, ಇವಿಎಂನಲ್ಲಿ ಮೂರನೇ ಕ್ರಮಾಂಕದ ಕಮಲಕ್ಕೆ ಮತ ನೀಡುವ ಮೂಲಕ ನನ್ನನ್ನು ಮೂರನೇ ಬಾರಿ ಆಯ್ಕೆ ಮಾಡಿ. ದೇಶಕ್ಕಾಗಿ ಮತ್ತೊಮ್ಮೆ ಮೋದಿಯನ್ನು ನೀಡಿ. ಕ್ಷೇತ್ರ ಹಾಗೂ ದೇಶ ಸೇವೆಗೆ ನಾನು ಸದಾ ಬದ್ಧನಾಗಿರುತ್ತೇನೆ ಎಂದು ಬಹಿರಂಗ ಪ್ರಚಾರಕ್ಕೆ ತೆರೆ ಎಳೆದರು.

ಪುರಸಿದ್ದೇಶ್ವರ ಗುಡಿಯಿಂದ ಕಾಯಿಪಲ್ಯೆ ಮಾರುಕಟ್ಟೆ, ಅಕ್ಕಿಪೇಟೆ, ಮೇಲಿನ ಪೇಟೆ, ಕಲ್ಲುಮಂಟಪ, ಎಂ.ಜಿ. ರಸ್ತೆ, ವಿದ್ಯಾನಗರ, ಬಸವೇಶ್ವರ ನಗರ, ಮಲ್ಲಾನ್ ಕೆರೆ, ಸುಭಾಸ್‌ ವೃತ್ತ ಮೂಲಕ ಸಿಂಧಗಿ ಮಠಕ್ಕೆ ನಡೆದುಕೊಂಡು ಬಂದರು. ರಸ್ತೆಯುದ್ದಕ್ಕೂ ಅಭಿಮಾನಿಗಳ ಜೈ ಕಾರ, ಮೋದಿ ಪರ ಘೋಷಣೆ, ಖ್ಯಾತ ಸಿನಿಮಾ ಟ್ಯೂನ್‌ಗೆ ಪ್ರಚಾರದ ಸಾಹಿತ್ಯ ಹಾಕಿದ ಹಾಡುಗಳು, ಮೋದಿ ಮುಖವಾಡಗಳು, ಪಕ್ಷದ ಧ್ವಜ, ಕೇಸರಿ ಶಾಲುಗಳು ಮೆರುಗು ನೀಡಿದವು.

ದೇಶಕ್ಕಾಗಿ ಮೋದಿ, ಕ್ಷೇತ್ರಕ್ಕಾಗಿ ಉದಾಸಿ, ದೇಶ ಆಳ್ತಾರಾ ಮೋದಿ, ಮತ್ತೆ ಬರ್ತಾರಾ ಉದಾಸಿ, ಹಾವೇರಿ ಕಾ ರಾಜಾ, ನಮ್ಮ ಸೇನಾಧಿಪತಿ, ದೇಶ ಉಳಿಸಲು ಮತದಾನ ಮಾಡಿ... ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.

ADVERTISEMENT

‘ಹಿಂದಿನ ಎರಡು ಬಾರಿಯೂ ಸಿಂಧಗಿ ಮಠದ ಮುಂಭಾಗದಲ್ಲಿ ಪ್ರಚಾರದ ಕೊನೆಯ ಭಾಷಣ ಮಾಡಿದ್ದೇನೆ. ಬಳಿಕ ಸಂಸತ್ತಿನಲ್ಲಿ ದನಿ ಎತ್ತಿದ್ದೇನೆ. ಈ ಬಾರಿಯೂ ಆಶೀರ್ವಾದ ಮಾಡಿ ಎಂದ ಉದಾಸಿ, ಮೊದಲ ಹಂತದ ಅಭಿವೃದ್ಧಿ ಅಡಿಪಾಯ ಹಾಕಿದ್ದೇವೆ. ಎರಡು ಮತ್ತು ಮೂರನೇ ಹಂತದ ಅಭಿವೃದ್ಧಿಗಾಗಿ ಮತ ಹಾಕಿ.ಎಲ್ಲರೂ ಒಳ್ಳೆಯವರಾಗಿರೋಣ, ಎಲ್ಲರಿಗೂ ಒಳ್ಳೆಯದು ಮಾಡೋಣ ಎಂದರು.

ಬಹಿರಂಗ ಪ್ರಚಾರ ಅಂತ್ಯಗೊಳಿಸಿದ ಬಳಿಕ, ಸಿಂಧಗಿ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪೂಜಾ ವಿಧಿ ಪೂರೈಸಿದ ಅರ್ಚಕರು, ‘ಇಷ್ಟಾರ್ಥ ಸಿದ್ದಿಸಲಿ’ ಎಂದು ಹರಸಿದರು.

ರೇವತಿ ಉದಾಸಿ, ಶಾಸಕ ನೆಹರು ಓಲೇಕಾರ, ನಿರಂಜನ ಹೇರೂರ, ಸಿದ್ದರಾಜ ಕಲಕೋಟಿ, ವಿಜಯಕುಮಾರ್ ಚಿನ್ನಿಕಟ್ಟಿ, ಸಂತೋಷ ಆಲದಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.