ಹಾವೇರಿಯಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಆಶಾಕಿರಣ’ ಯೋಜನೆಯ ಫಲಾನುಭವಿಗಳಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಿದರು. ವಿಧಾನ ಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಇದ್ದಾರೆ
–ಪ್ರಜಾವಾಣಿ ಚಿತ್ರ
ಹಾವೇರಿ: ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿ ಇಲ್ಲಿ ಭಾನುವಾರ ಸರ್ಕಾರದ ಮಹತ್ವಾಕಾಂಕ್ಷೆಯಾದ ‘ಆಶಾಕಿರಣ- ನಿಮ್ಮ ಮನೆ ಬಾಗಿಲಿಗೆ ಕಣ್ಣಿನ ಆರೈಕೆ’ ಎಂಬ ನೂತನ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಈ ಯೋಜನೆಯಡಿ ಮೊದಲ ಹಂತದಲ್ಲಿ ಹಾವೇರಿ, ಕಲಬುರಗಿ, ಚಿಕ್ಕಬಳ್ಳಾಪುರ ಹಾಗೂ ಚಾಮರಾಜನಗರ ಜಿಲ್ಲೆಗಳು, ಎರಡನೇ ಹಂತದಲ್ಲಿ ಚಿತ್ರದುರ್ಗ, ಮಂಡ್ಯ, ರಾಯಚೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮನೆ ಮನೆಗೆ ತೆರಳಿ ಕುಟುಂಬದ ಸದಸ್ಯರ ಕಣ್ಣಿನ ತಪಾಸಣೆ ನಡೆಸಲಾಗುವುದು. ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಿಸುವ ಉದ್ದೇಶವಿದೆ’ ಎಂದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ‘ಆಶಾ ಕಿರಣ ಯೋಜನೆಯಡಿ ರಾಜ್ಯದ 1 ಕೋಟಿಗಿಂತ ಹೆಚ್ಚಿನ ಜನರ ದೃಷ್ಟಿದೋಷಯುಳ್ಳವರ ತಪಾಸಣೆ ಮಾಡಲಾಗಿದೆ. ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಈ ಯೋಜನೆ ಪ್ರಾಯೋಗಿಕ ಜಾರಿಗೆ ಮಾಡಲಾಗಿತ್ತು. 2.5 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. ಮತ್ತೆ ಈ ವರ್ಷ ಗದಗ ಜಿಲ್ಲೆ ಸೇರಿ ಮತ್ತೆ ನಾಲ್ಕು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿ ಮಾಡಲಾಗುವುದು. ಪ್ರತಿ ವರ್ಷ ನಾಲ್ಕು ಜಿಲ್ಲೆಗಳಿಗೆ ಯೋಜನೆ ಜಾರಿಗೊಳಿಸಲಾಗುವುದು’ ಎಂದರು.
‘ಮುಖ್ಯಮಂತ್ರಿಯವರು ಹೊಸ 15 ಜಿಲ್ಲೆಗಳಿಗೆ ಎಂ.ಐ.ಆರ್. ಯಂತ್ರ ನೀಡುತ್ತಾರೆ. ಹಾವೇರಿ ಜಿಲ್ಲೆಗೂ ಸಹ ಸಿಗಲಿದೆ. 800 ಹೊಸ ಡಯಾಲಿಸಿಸ್ ಯಂತ್ರಗಳನ್ನು ಖರೀಸಿದ್ದು, 42 ಹೊಸ ತಾಲ್ಲೂಕುಗಳಿಗೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.