ADVERTISEMENT

ಹಾವೇರಿ | ಸಿದ್ಧಚಕ್ರ ಆರಾಧನೆ: ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:00 IST
Last Updated 12 ಡಿಸೆಂಬರ್ 2025, 5:00 IST
ಹಾವೇರಿ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸಿದ್ಧಚಕ್ರ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ಜೀನಬಿಂಬಗಳ ಸಮೇತ ಭವ್ಯ ಮೆರವಣಿಗೆ ನಡೆಯಿತು
ಹಾವೇರಿ ರಜನಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸಿದ್ಧಚಕ್ರ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ಜೀನಬಿಂಬಗಳ ಸಮೇತ ಭವ್ಯ ಮೆರವಣಿಗೆ ನಡೆಯಿತು   

ಹಾವೇರಿ: ಇಲ್ಲಿಯ ರಜನಿ ಸಭಾಂಗಣದಲ್ಲಿ ಸಿದ್ಧಚಕ್ರ ಆರಾಧನಾ ಮಹೋತ್ಸವ ಆರಂಭವಾಗಿದ್ದು, ಮೊದಲ ದಿನವಾದ ಗುರುವಾರ ನಗರದಲ್ಲಿ ಜೀನಬಿಂಬಗಳ ಸಮೇತ ಭವ್ಯ ಮೆರವಣಿಗೆ ನಡೆಯಿತು.

ನಗರದಲ್ಲಿರುವ ಜಿನ ಮಂದಿರದಿಂದ ರಜನಿ ಸಭಾಂಗಣದ ವರೆಗೂ ಚರ್ಯಾಶಿರೋಮಣಿ ವಿದಿತಸಾಗರಜಿ ಮಹಾರಾಜರ ಸಾನ್ನಿಧ್ಯದಲ್ಲಿ ಮೆರವಣಿಗೆ ಸಾಗಿತು. 29 ಜಿನ ಬಿಂಬಗಳನ್ನು ಭಕ್ತರು ಹೊತ್ತು ಸಾಗಿದರು. ನಾಲ್ಕು ರಥಗಳಲ್ಲಿ ಸೌಧರ್ಮ ಇಂದ್ರ–ಇಂದ್ರಾಣಿಯರು, ಧನ ಪತಿ ಕುಬೇರ, ಮೈನಾ ಸುಂದರಿ, ಅಷ್ಟಕ ಕನ್ನಿಕೆಯರು ಸಾಗಿದರು. ಶ್ರಾವಕ– ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ರಜನಿ ಸಭಾಂಗಣದಲ್ಲಿ ಮೆರವಣಿಗೆ ಸಮಾಪ್ತಗೊಂಡಿತು. ನಂತರ, ಸಭಾಂಗಣದಲ್ಲಿ ಭಗವಂತರ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ, ಅರಿಶಿಣ ಕಾರ್ಯ, ಸುರಗಿ, ಮೆಹೆಂದಿ ಕಾರ್ಯಕ್ರಮ ಜರುಗಿತು.

ADVERTISEMENT

ಸಕಲ ಜೀವಿಗಳ ಸುಖಶಾಂತಿಗೆ ಮಹೋತ್ಸವ: ‘ಜಗತ್ತಿನಲ್ಲಿ ಶಾಂತಿ ನೆಲೆಸಲು ಹಾಗೂ ಭೂಮಿ ಮೇಲಿರುವ ಸಕಲ ಜೀವಿಗಳ ಸುಖ-ಶಾಂತಿಗಾಗಿ ಪ್ರಾರ್ಥಿಸಿ ಸಿದ್ಧಚಕ್ರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಹಾವೇರಿಯ ರಜನಿ ಸಭಾಂಗಣದಲ್ಲಿ ಡಿ. 11ರಿಂದ ಡಿ. 21ರವರೆಗೆ ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸವ ಜರುಗಲಿದೆ’ ಎಂದು ಚರ್ಯಾಶಿರೋಮಣಿ ವಿದಿತಸಾಗರಜಿ ಮಹಾರಾಜರು ತಿಳಿಸಿದರು.

‘ಸಂಸಾರವು ದುಃಖಮಯ ಹಾಗೂ ಶರೀರವು ರೋಗಮಯವಾಗಿದೆ. ಎಂಟು ಕರ್ಮಗಳಿಂದ ಮುಕ್ತರಾದಾಗ ಮಾತ್ರ ಶಾಶ್ವತ ಸುಖ ಪ್ರಾಪ್ತವಾಗುತ್ತದೆ. ಜೈನ್ ಧರ್ಮದ ಆಚರಣೆಗಳಲ್ಲಿ ಸಿದ್ಧಚಕ್ರ ಆರಾಧನೆ ಶ್ರೇಷ್ಠವಾಗಿದೆ. ಹೀಗಾಗಿ, ಎಂಟು ಕರ್ಮಗಳ ನಿರ್ಜರ ಮಾಡಲು ಹಾಗೂ ಭಗವಂತನಿಗಾಗಿ ಆರಾಧನೆ ಮಾಡಲಾಗುತ್ತದೆ. ಸಿದ್ಧಚಕ್ರ ಆರಾಧನೆ ಮಾಡುವುದು ಶ್ರಾವಕ ಮತ್ತು ಶ್ರಾವಕಿಯರ ಬಹುದಿನಗಳ ಸಂಕಲ್ಪವಾಗಿತ್ತು. ಯೋಗಾ–ಯೋಗದಿಂದ ಅದು ಈಗ ನೆರವೇರುತ್ತಿದೆ’ ಎಂದು ಹೇಳಿದರು.

ಪ್ರತಿಷ್ಠಾಚಾರ್ಯರಾದ ಸದಲಗಾದ ಮಾಣಿಕ ಶ್ರೀಪಾಲ ಚಂದಗಡೆ ಮಾತನಾಡಿ, ‘ಡಿ. 11ರಿಂದ 21ರ ವರೆಗೆ 9 ದಿನಗಳ ಆರಾಧನೆ ನಡೆಯಲಿದೆ. ಜೈನ್ ಧರ್ಮದಲ್ಲಿ ಆರಾಧನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಯ ಶ್ರಾವಕ ಮತ್ತು ಶ್ರಾವಕಿಯರು, ಶ್ವೇತವರ್ಣ ಹಾಗೂ ಕೇಸರಿ ವಸ್ತ್ರಗಳನ್ನು ಧರಿಸಿ ಆರಾಧನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯವರೆಗೆ ವಿಶೇಷ ಪೂಜೆಗಳು, ಮಧ್ಯಾಹ್ನ 2.30 ಗಂಟೆಗೆ ಸಭಾ ಕಾರ್ಯಕ್ರಮ, ಸಂಜೆ ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

ಸಿದ್ಧಚಕ್ರ ಆರಾಧನಾ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಕಾರ್ಯದರ್ಶಿ ಎಸ್.ಎ. ವಜ್ರಕುಮಾರ, ಭರತ ಹಜಾರಿ, ಚಂದ್ರನಾಥ ಕಳಸೂರ, ಸಂಜೀವ ಇಂಡಿ, ಮದನಕುಮಾರ ಶೆಟ್ಟರ್, ವಿಮಲ ಬೋಗಾರ, ಭೂಪಾಲ ಹೊಳಗಿ, ಮಹಾವೀರ ಹಜಾರಿ, ಶ್ರೀಧರ ವರೂರ, ಮಂಜು ಬಾಳಕ್ಕನವರ, ಅರಿಹಂತ ಕಳಸೂರ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.