
ಹಾವೇರಿ: ‘ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಕೇವಲ ಪರೀಕ್ಷಾ ಅಂಕಗಳಿಗಷ್ಟೇ ಸೀಮಿತವಾಗಬಾರದು. ಪಠ್ಯದ ಜೊತೆಯಲ್ಲಿ ಕೌಶಲಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಅಂದಾಗ ಮಾತ್ರ ಭವಿಷ್ಯದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಪಡೆಯಬಹುದು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ನಗರದ ಕಾಗಿನೆಲೆ ರಸ್ತೆಯಲ್ಲಿರುವ ಅನನ್ಯಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಅನನ್ಯೋತ್ಸವ 2026– 12ನೇ ವಾರ್ಷಿಕೋತ್ಸವ’ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ಕಾಲದ ಶಿಕ್ಷಣಕ್ಕೂ ಇಂದಿನ ಕಾಲದ ಶಿಕ್ಷಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಶಾಲೆಗಳು ಅಂಕ ಕೊಡುವ ಕಾರ್ಖಾನೆಗಳಲ್ಲ. ಇಂದಿನ ವಿದ್ಯಾರ್ಥಿಗಳು, ವ್ಯಕ್ತಿತ್ವ ವಿಕಸನ, ನಡವಳಿಕೆ, ಸಂವಹನ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಜೀವನ ನಡೆಸಲು ಅಂಕಗಳು ಮುಖ್ಯವಲ್ಲ. ಪೋಷಕರು ಸಹ ಮಕ್ಕಳ ಸರ್ವಾಂಗೀಣ ಭವಿಷ್ಯಕ್ಕೆ ಗಮನ ಹರಿಸಬೇಕು. ವಿವಿಧತೆಯಲ್ಲಿ ಏಕತೆ ರೂಪದಲ್ಲಿ ಅನನ್ಯಾ ಇಂಟರ್‌ನ್ಯಾಷನಲ್ ಸ್ಕೂಲ್ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.
‘21ನೇ ಶತಮಾನವು ಭಾರತೀಯರ ಶತಮಾನವಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಇಂದು ಯುವಕರಿಂದ ಬದಲಾವಣೆ ಆಗುತ್ತಿದೆ. ಯುವಕರಿಂದಲೇ ಇಂದು ಭಾರತ ಮುಂದಕ್ಕೆ ಹೋಗುತ್ತಿದೆ. ಭ್ರೂಣ ಹತ್ಯೆ, ಲಿಂಗ ತಾರತಮ್ಯ, ಮಹಿಳೆಯರ ಮೇಲೆ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ಸಾಮಾಜಿಕ ಪಿಡುಗುಗಳನ್ನು ತೊಡೆದು ಹಾಕುವಲ್ಲಿ ಯುವಕರ ಪಾತ್ರವೂ ಮುಖ್ಯವಾಗಿದೆ’ ಎಂದು ತಿಳಿಸಿದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹಾಗೂ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ, ಕ್ರೀಡಾ ಹಾಗೂ ಇತರೆ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಲಾಯಿತು. ನಂತರ, ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಂಕರ ಅರ್ಕಸಾಲಿ, ಸಿ.ಡಿ. ಹಾವೇರಿ ವಿದ್ಯಾಸಂಸ್ಥೆಯ ಚೇರ್ಮನ್ ಮಲ್ಲಿಕಾರ್ಜುನ ಹಾವೇರಿ, ಕಾರ್ಯದರ್ಶಿ ಸೌಮ್ಯಾ ಹಾವೇರಿ, ಪ್ರಾಂಶುಪಾಲರಾದ ಸುಮಾ ಬಾಲಕೃಷ್ಣನ್, ಶಿವಶಂಕರ ಮೋಟಗಿ, ಕುರುಬಗೊಂಡ ಸಿಆರ್‌ಪಿ ಶಿವಲೀಲಾ ಪಾಟೀಲ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.