ADVERTISEMENT

ಹಾವೇರಿ | 'ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ'

ಸೌಲಭ್ಯ ಕೋರಿ 13 ಲಕ್ಷ ಅರ್ಜಿ: ಕಾರ್ಮಿಕ ಸಚಿವ ಸಂತೋಷ ಲಾಡ್‌

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:22 IST
Last Updated 24 ಸೆಪ್ಟೆಂಬರ್ 2025, 4:22 IST
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕಾರ್ಮಿಕ ಸಚಿವ ಸಂತೋಷ ಲಾಡ್‌ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕಾರ್ಮಿಕ ಕಲ್ಯಾಣ ಮಂಡಳಿ ಸಿಇಒ ಭಾರತಿ ಡಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಶಾಸಕ ಬಸವರಾಜ ಶಿವಣ್ಣನವರ, ಕಾರ್ಮಿಕ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಿದ್ದೀನ್‌ ಇದ್ದಾರೆ
ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕಾರ್ಮಿಕ ಸಚಿವ ಸಂತೋಷ ಲಾಡ್‌ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕಾರ್ಮಿಕ ಕಲ್ಯಾಣ ಮಂಡಳಿ ಸಿಇಒ ಭಾರತಿ ಡಿ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಶಾಸಕ ಬಸವರಾಜ ಶಿವಣ್ಣನವರ, ಕಾರ್ಮಿಕ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್‌ ಮೊಹಿದ್ದೀನ್‌ ಇದ್ದಾರೆ   

ಹಾವೇರಿ: ರಾಜ್ಯದಲ್ಲಿ 1.8 ಕೋಟಿ ಅಸಂಘಟಿತ ಕಾರ್ಮಿಕರಿದ್ದು ಅಂತಹ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಮೂಲಸೌಕರ್ಯ ನೀಡುವುದರ ಮೂಲಕ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ಹಿರೇಕೆರೂರು ಪಟ್ಟಣದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವೇ ನೇರವಾಗಿ ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಅಲ್ಲಿರುವ ನಗರ ವಾಸಿಗಳು ಹಾಗೂ ನೌಕರರ ಸಂಘಟನೆಯ ಜೊತೆಗೆ ಮಾತನಾಡಿ ಅವರ, ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಹೊಸ ಯೋಜನೆಗಳನ್ನು ರೂಪಿಸಲು ಅನುಕೂಲವಾಗುವಂತೆ ಮುಖ್ಯಮಂತ್ರಿ ನಿರ್ದೇಶಿಸಿದ್ದಾರೆ ಎಂದರು.

ಬೇರೆ ಬೇರೆ ಸೌಲಭ್ಯಗಳ ಅಡಿಯಲ್ಲಿ ಹೊಸ 13 ಲಕ್ಷ ಅರ್ಜಿಗಳು ಬಂದಿದ್ದು, ಅದರಲ್ಲಿ 6 ಲಕ್ಷ ಅರ್ಜಿಗಳು ವಿವಿಧ ಸೇವೆಗಳ ಸೌಲಭ್ಯ ಪಡೆಯಲು ಬಂದಿವೆ. 7 ಲಕ್ಷ ಅರ್ಜಿಗಳು ವಿದ್ಯಾರ್ಥಿ ವೇತನದ ಅರ್ಜಿಗಳಾಗಿವೆ. ಇವೆಲ್ಲ ಅರ್ಜಿಗಳನ್ನು ಕೂಲಂಕಶವಾಗಿ ಪರಿಶೀಲನೆ ಮಾಡಿ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಸರ್ಕಾರ ಜಾರಿಗೆ ತಂದಿರುವ ಐದು ಮಹತ್ತರ ಗ್ಯಾರಂಟಿ ಯೋಜನೆಗಳಿಂದ ಇಲಾಖೆಯ ಆರ್ಥಿಕತೆಗೆ ಯಾವುದೇ ಸಮಸ್ಯೆಯಾಗಿಲ್ಲ. ಸರ್ಕಾರವು ಸಾರಿಗೆ ಮಂಡಳಿ ಜೊತೆಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದು, ಇದರಿಂದ ಸಾರಿಗೆ ಅನುದಾನ ಮತ್ತು ಸರ್ಕಾರದ ಅನುದಾನ ಸೇರಿ ರಾಜ್ಯದಲ್ಲಿರುವ ವಾಣಿಜ್ಯ ಪರವಾನಗಿ ಹೊಂದಿರುವ ಎಲ್ಲ ಖಾಸಗಿ ವಾಹನ ಚಾಲಕರು, ನಿರ್ವಾಹಕರು ಗ್ಯಾರೇಜ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 35 ಲಕ್ಷ ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ನೀಡಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದರು.

ಆನ್‍ಲೈನ್ ಪ್ಲಾಟ್‍ಫಾರ್ಮ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ಲಿಪ್‌ಕಾರ್ಟ್‌, ಅಮೆಜಾನ್ ಇತರೆ ಕಾರ್ಮಿಕ ವರ್ಗದವರಿಗೂ ಹಾಗೂ ಮನೆ ಕೆಲಸಗಾರರು ಕಾರ್ಮಿಕ ಕಾರ್ಡ್ ಸೌಲಭ್ಯ ನೀಡಿ ಸಾಮಾಜಿಕ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ, ಹಿರೇಕೆರೂರು ಶಾಸಕ ಯು.ಬಿ. ಬಣಕಾರ್ ಇದ್ದರು.

‘ನಕಲಿ ಕಾರ್ಡ್‌ ತಡೆಗೆ ಹೊಸ ಆ್ಯಪ್‌’ ‘

ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಟ್ಟು 45 ಲಕ್ಷ ಕಾರ್ಮಿಕರು ಕಾರ್ಮಿಕ ಕಾರ್ಡ್‌ಗಳನ್ನು ಹೊಂದಿದ್ದಾರೆ. ಕಳೆದ ವರ್ಷದಲ್ಲಿ 39 ಲಕ್ಷ ಹೊಸ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೂ ಒಟ್ಟು 2.93 ಲಕ್ಷ ಕಾರ್ಮಿಕರು ಕಾರ್ಡ್‌ಗಳನ್ನು ಹೊಂದಿದ್ದಾರೆ. ರಾಜ್ಯದಲ್ಲಿ ಶೇಕಡ 60ರಿಂದ 70ರಷ್ಟು ಕಾರ್ಡ್‌ಗಳು ನಕಲಿ ಕಾರ್ಡ್‌ಗಳಾಗಿವೆ. ಅಂತಹ ನಕಲಿ ಕಾರ್ಡ್‌ ತಡೆಯಲು ಹೊಸ ಆ್ಯಪ್‌ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.  ನಕಲಿ ಕಾರ್ಡ್‌ಗಳನ್ನು ತಡೆಗಟ್ಟಲು ಕಾರ್ಮಿಕ ಸಂಘಟನೆಯ ಪಾತ್ರ ಮಹತ್ವದ್ದಾಗಿದ್ದು ಅವರು ಸಲಹೆ ಸೂಚನೆ ಹಾಗೂ ಸಹಾಯದಿಂದ ಅವುಗಳನ್ನು ತಡೆಹಿಡಿಯಲು ಸಾಧ್ಯ. ಕಾರ್ಮಿಕ ಕಾರ್ಯನಿರ್ವಹಿಸುವ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಯು ಖುದ್ದು ಭೇಟಿ ನೀಡಿ ಪರಿಶೀಲನೆ ಮಾಡಿ ನೈಜ ಕಾರ್ಮಿಕರನ್ನು ಗುರುತಿಸಿ ಹೊಸ ಕಾರ್ಡ್ ವಿತರಿಸಲಿದ್ದಾರೆ ಎಂದರು.

ಕನಿಷ್ಠ ವೇತನ ಸೌಲಭ್ಯಕ್ಕೆ ಕಾರ್ಮಿಕರ ಮನವಿ

ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್‌ ಅವರಿಗೆ ವಿವಿಧ ಕಟ್ಟಡ ಕಾರ್ಮಿಕ ಸಂಘಟನೆಗಳು ಶಿಶುಪಾಲನಾ ಕೇಂದ್ರ ವಿದ್ಯಾರ್ಥಿ ವೇತನ ಹಾಸ್ಟೆಲ್ ಕೆಲಸಗಾರರಿಗೆ ಹಾಗೂ ಅಕ್ಷರ ದಾಸೋಹ ಕಾರ್ಮಿಕರಿಗೆ ಕನಿಷ್ಠ ವೇತನ ಸೌಲಭ್ಯ ಹಾಗೂ ಕಾರ್ಮಿಕರಿಗೆ ಮನೆ ನಿರ್ಮಾಣದ ಕುರಿತ ಬೇಡಿಕೆಗಳನ್ನು ಇಟ್ಟವು. ‘ಕೆಲಸ ಮಾಡುವ ಮಹಿಳೆಯು ಕೆಲಸದ ಸಮಯದಲ್ಲಿ ತನ್ನ ಮಗುವನ್ನು ಶಿಶುಪಾಲನಾ ಕೇಂದ್ರದಲ್ಲಿ ಬಿಟ್ಟು ಕೆಲಸ ಮಾಡಲು ಹೋಗಬೇಕು. ಇದು ಶಿಶುಪಾಲನಾ ಕೇಂದ್ರದ ಮುಖ್ಯ ಉದ್ದೇಶ. ಈ ಶಿಶುಪಾಲನಾ ಕೇಂದ್ರದಲ್ಲಿ ಸರ್ಕಾರ ಪ್ರತಿ ಮಗುವಿನ ಮೇಲೆ ₹30 ಖರ್ಚು ಮಾಡುತ್ತಿದ್ದು ನೈಜ ಕಾರ್ಮಿಕರು ಇದರ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ’ ಎಂದು ಸಚಿವರು ಹೇಳಿದರು.  ಕಟ್ಟಡ ಕಾರ್ಮಿಕರು ಸರ್ಕಾರದಿಂದ ಕಾರ್ಮಿಕರಿಗೆ ಮನೆ ಮಂಜೂರು ಮಾಡಿಕೊಡುವಂತೆ ಸಂಘಟನೆಗಳ ಪದಾಧಿಕಾರಿಗಳು ಸಚಿವರಲ್ಲಿ ಬೇಡಿಕೆ ಇಟ್ಟಾಗ ‘ಕಟ್ಟಡ ಕಾರ್ಮಿಕರಿಗೆ ಮನೆ ಕೊಡಬೇಕಾದರೆ ಮೊದಲು ಸರ್ಕಾರ ಮಟ್ಟದಲ್ಲಿ ಯೋಜನೆ ರೂಪಿಸಿಕೊಂಡು ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.