ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ 30 ವಿದ್ಯಾರ್ಥಿಗಳು ವಂಚಿತ

ಗೈರು ಹಾಜರಿ, ಹೋಂ ವರ್ಕ್‌ ಮಾಡಿಲ್ಲ ಎಂಬ ಕಾರಣಕ್ಕೆ ಸಿಗದ ‘ಪ್ರವೇಶಪತ್ರ’

ರಾಜೇಂದ್ರ ನಾಯಕ
Published 13 ಜುಲೈ 2021, 20:31 IST
Last Updated 13 ಜುಲೈ 2021, 20:31 IST
ಪರೀಕ್ಷೆಯಿಂದ ವಂಚಿತರಾದ ಹಾವೇರಿ ಜಿಲ್ಲೆಯ ಚಿಕ್ಕೇರೂರಿನ ಮಹಾತ್ಮಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು
ಪರೀಕ್ಷೆಯಿಂದ ವಂಚಿತರಾದ ಹಾವೇರಿ ಜಿಲ್ಲೆಯ ಚಿಕ್ಕೇರೂರಿನ ಮಹಾತ್ಮಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು   

ಹಂಸಭಾವಿ (ಹಾವೇರಿ): ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರವೇಶ ಪತ್ರ ಸಿಗದೇ ಚಿಕ್ಕೇರೂರಿನ ಮಹಾತ್ಮಗಾಂಧಿ ಪ್ರೌಢ
ಶಾಲೆಯ 30 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗಿದ್ದಾರೆ.

ಜುಲೈ 19 ಮತ್ತು 22ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಬರೆಯಲು ಈ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಂಡು ಉತ್ಸುಕರಾಗಿದ್ದರು. ಆದರೆ, ಪ್ರವೇಶ ಪತ್ರ ಸಿಗದಿರುವುದು ಇವರಿಗೆ ಬರಸಿಡಿಲು ಬಡಿದಂತಾಗಿದೆ.

ಶಾಲೆಯ ಒಟ್ಟು 64 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಬಂದಿದೆ. 28 ವಿದ್ಯಾರ್ಥಿಗಳಿಗೆ ಪರೀಕ್ಷೆ ಅರ್ಜಿ ನಮೂನೆ ತುಂಬುವ ಬಗ್ಗೆ ಶಿಕ್ಷಕರು ಮಾಹಿತಿಯನ್ನೇ ಕೊಟ್ಟಿರಲಿಲ್ಲ. ಇಬ್ಬರು ವಿದ್ಯಾರ್ಥಿಗಳು ಅರ್ಜಿ ನಮೂನೆ ತುಂಬಲು ಪರೀಕ್ಷಾ ಶುಲ್ಕವನ್ನು ಕಟ್ಟಿದ್ದರು. ಆದರೂ ಈ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ಬಂದಿಲ್ಲ.

ADVERTISEMENT

ಪ್ರವೇಶಪತ್ರ ಬಾರದೇ ಇರುವ ಬಗ್ಗೆ ವಿದ್ಯಾರ್ಥಿಗಳ ಪೋಷಕರು ಶಾಲೆಗೆ ಹೋಗಿ ಗಲಾಟೆ ಮಾಡಿದ ಕಾರಣ, ಮುಖ್ಯ ಶಿಕ್ಷಕ ಶಿವಾನಂದ ಉಜ್ಜಕ್ಕನವರ ಅವರು ಬೆಂಗಳೂರಿನ ಪರೀಕ್ಷಾ ಮಂಡಳಿಗೆ ಹೋಗಿ ಬಂದಿದ್ದರೂ, ಪ್ರಯೋಜನವಾಗಿಲ್ಲ.

‘ನಾವು ಶಿಕ್ಷಕರು ಹೇಳಿದ ಎಲ್ಲ ಹೋಂವರ್ಕ್‌ ಮಾಡಿದ್ದೇವೆ. ಆದರೆ, ಶಾಲಾ ಮುಖ್ಯಶಿಕ್ಷಕರು ನಾವು ಸರಿಯಾಗಿ ತರಗತಿಗೆ ಹಾಜರಾಗಿಲ್ಲ ಎಂದು ಪ್ರವೇಶಪತ್ರ ಅರ್ಜಿ ತುಂಬಿಲ್ಲ. ಇದರಿಂದ ನಮ್ಮ ಭವಿಷ್ಯದ ಗತಿಯೇನು?’ ಎಂದು
ಪರೀಕ್ಷೆಯಿಂದ ವಂಚಿತಳಾದ ವಿದ್ಯಾರ್ಥಿನಿ ನಿಖಿತಾ ಪಾಟೀಲ ಅಳಲು ತೋಡಿಕೊಂಡಳು.

‘ನಮ್ಮ ಮಗನ ಪರೀಕ್ಷೆ ಅರ್ಜಿ ತುಂಬಲು ಹಣ ನೀಡಿದ್ದೇನೆ. ಆದರೆ ಶಾಲೆಯಲ್ಲಿ ಅದನ್ನು ತುಂಬದೇ ಹಾಗೇ ಇಟ್ಟುಕೊಂಡಿದ್ದಾರೆ. ಈಗ ಪರೀಕ್ಷೆ ಬರೆಯಲು ಅವಕಾಶ ಸಿಗದೆ ನನ್ನ ಮಗ ದುಃಖಿತನಾಗಿದ್ದಾನೆ. ಶಿಕ್ಷಕರ ಯಡವಟ್ಟಿನಿಂದಾಗಿ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದೆ’ ಎಂದು ಪರೀಕ್ಷೆಯಿಂದ ವಂಚಿತ
ನಾದ ವಿದ್ಯಾರ್ಥಿ ಭುವನ್ ವಂಟಿಕರ್ ತಂದೆ ಶಂಕರ್ ಆಕ್ರೋಶ ವ್ಯಕ್ತಪಡಿಸಿದರು.

‘ವಿದ್ಯಾರ್ಥಿಗಳು ಸರಿಯಾಗಿ ಹೋಂವರ್ಕ್‌ ಮಾಡಿಲ್ಲ ಹಾಗೂ ಅವರ ಹಾಜರಾತಿ ಕೊರತೆಯೂ ಇದೆ. ಹೀಗಾಗಿ ಇವರಿಗೆ ಮುಂದಿನ ಬಾರಿ ಪರೀಕ್ಷೆಗೆ ಅವಕಾಶ ನೀಡಲಾಗುವುದು’ ಎಂದು ಶಾಲೆಯ ಮುಖ್ಯಶಿಕ್ಷಕಶಿವಾನಂದ ಉಜ್ಜಕ್ಕನವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.