ADVERTISEMENT

ರೈತರಿಗಾಗಿ ಸಹಾಯವಾಣಿ ಆರಂಭಿಸಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2021, 14:05 IST
Last Updated 1 ಜೂನ್ 2021, 14:05 IST
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ಮುಂಗಾರು ಚಟುವಟಿಕೆಗಳು ಆರಂಭಗೊಂಡಿವೆ. ಕೋವಿಡ್ ಸಂದರ್ಭದಲ್ಲಿ ಮುಂಗಾರು ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ರೈತರಿಗೆ ಅಗತ್ಯ ಮಾರ್ಗದರ್ಶನ, ಮಾಹಿತಿ ಹಾಗೂ ನೆರವು ಒದಗಿಸಲು ಕೃಷಿ ಇಲಾಖೆಯಲ್ಲಿ ‘ಸಹಾಯವಾಣಿ’ ಆರಂಭಿಸುವಂತೆ ಕೃಷಿ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚನೆ ನೀಡಿದರು.

ಮುಂಗಾರು ಕೃಷಿ ಚಟುವಟಿಕೆ ಕುರಿತಂತೆ ಜಿಲ್ಲೆಯ ಕೃಷಿ ಅಧಿಕಾರಿಗಳೊಂದಿಗೆ ಮಂಗಳವಾರ ‘ವಿಡಿಯೊ ಸಂವಾದ’ ನಡೆಸಿದ ಅವರು, ಮುಂಗಾರು ಬಿತ್ತನೆ ಬೀಜ, ರಸಗೊಬ್ಬರಗಳ ದಾಸ್ತಾನು ಹಾಗೂ ಪೂರೈಕೆಯ ಮಾಹಿತಿಯನ್ನು ಕೃಷಿ ಜಂಟಿ ನಿರ್ದೇಶಕರಿಂದ ಪಡೆದು, ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗಬಾರದು. ಕೋವಿಡ್ ಮಾರ್ಗಸೂಚಿಯ ಅಡಿಯಲ್ಲಿ ವ್ಯವಸ್ಥಿತ ಮಾರಾಟ ಹಾಗೂ ವಿತರಣೆಗೆ ಕ್ರಮವಹಿಸಿ ಎಂದು ಸಲಹೆ ನೀಡಿದರು.

ಒಂದೊಮ್ಮೆ ಲಾಕ್‍ಡೌನ್ ಮುಂದುವರಿದರೆ ನಿಗಧಿತ ಅವಧಿಯೊಳಗೆ ರಸಗೊಬ್ಬ ಮತ್ತು ಬೀಜಗಳನ್ನು ಖರೀದಿ ಮಾಡಬೇಕಾಗುತ್ತದೆ. ಮುಂಜಾಗ್ರತೆಯಾಗಿ ರೈತರಿಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಿದರು.

ADVERTISEMENT

ಕಳಪೆ ರಸಗೊಬ್ಬರ, ಬೀಜಗಳ ಮಾರಾಟ ಹಾಗೂ ಅನಧಿಕೃತ ದಾಸ್ತಾನು ಮೂಲಕ ಕೃತಕ ಅಭಾವ ಸೃಷ್ಟಿಸುವವರ ಮೇಲೆ ನಿಗಾವಹಿಸಬೇಕು. ಕೃಷಿ ಜಾಗೃತದಳದ ತಂಡ ಮತ್ತಷ್ಟು ಸಕ್ರೀಯವಾಗಿ ಇಂತಹ ಜಾಲಗಳನ್ನು ಪತ್ತೆಹಚ್ಚಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಮಳೆಗಾಲದ ಸಂದರ್ಭದಲ್ಲಿ ತೋಟಗಾರಿಕೆ ಹಾಗೂ ಕೃಷಿ ಬೆಳೆ ಹಾನಿ ಕುರಿತಂತೆ ಸರ್ಕಾರದ ಮಾರ್ಗಸೂಚಿ ಅನುಸಾರ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.