ADVERTISEMENT

‘ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಿ’

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರಿಂದ ನಗರದಲ್ಲಿ ಬೈಕ್‌ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 15:57 IST
Last Updated 17 ಡಿಸೆಂಬರ್ 2020, 15:57 IST
ಹಾವೇರಿ ನಗರದಲ್ಲಿ ಗುರುವಾರ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಬಿ.ಸಿ.ಪಾಟೀಲ ಅವರು ರೈತ ಮುಖಂಡರೊಂದಿಗೆ ಚರ್ಚಿಸಿದರು  –ಪ್ರಜಾವಾಣಿ ಚಿತ್ರ 
ಹಾವೇರಿ ನಗರದಲ್ಲಿ ಗುರುವಾರ ರೈತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬಂದ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಬಿ.ಸಿ.ಪಾಟೀಲ ಅವರು ರೈತ ಮುಖಂಡರೊಂದಿಗೆ ಚರ್ಚಿಸಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ‘ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿದ್ದು, ಮೆಕ್ಕೆಜೋಳ ಬೆಳೆ ಚೆನ್ನಾಗಿದೆ. ಕೂಡಲೇ ‘ಮೆಕ್ಕೆಜೋಳ ಖರೀದಿ ಕೇಂದ್ರ’ವನ್ನು ತೆರೆದುಕೇಂದ್ರ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಬೆಂಬಲಬೆಲೆ (ಎಂ.ಎಸ್‌.ಪಿ) ₹1860ರ ದರದಲ್ಲಿ ಖರೀದಿಸಬೇಕು’ ಎಂದು ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ ಮತ್ತು ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ‍್ಯಾಲಿ ನಡೆಸಿ, ನಂತರ ಪ್ರತಿಭಟನೆ ನಡೆಸಿದರು.

ಬೆಲೆ ಕುಸಿತದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ರಕ್ಷಣೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳದ್ದು. ಆದರೆ, ಎಪಿಎಂಸಿ ಕಾಯ್ದೆ ಜಾರಿಗೆ ತರುವ ಮೂಲಕ ರೈತರ ಹಿತವನ್ನು ಸರ್ಕಾರ ಬಲಿ ಕೊಟ್ಟಿದೆ. ಎಪಿಎಂಸಿಗಳಲ್ಲಿ ನೋಂದಣಿ ಇಲ್ಲದೆ ನೇರವಾಗಿ ಹಳ್ಳಿಗಳಿಗೆ ಬಂದ ವ್ಯಾಪಾರಸ್ಥರು ‘ಎ’ ದರ್ಜೆಯ ಧಾನ್ಯವನ್ನು ಖರೀದಿಸಿ, ‘ಬಿ’ ಮತ್ತು ‘ಸಿ’ ದರ್ಜೆಯ ಕಾಳುಗಳನ್ನು ಖರೀದಿಸದಿದ್ದರೆ ರೈತರ ಗತಿಯೇನು ಎಂದು ಸಮಸ್ಯೆ ತೋಡಿಕೊಂಡರು.

ADVERTISEMENT

ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಗೆ ಕೇಂದ್ರ ಸರ್ಕಾರ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದೆ. ರೈತರ ಮೇಲೆ ಪೊಲೀಸರು ಜಲಫಿರಂಗಿ, ಲಾಠಿ ಪ್ರಯೋಗ, ಅಶ್ರುವಾಯು ಸಿಡಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ದಬ್ಬಾಳಿಕೆ ಮಾಡಲಾಗುತ್ತಿದೆ. ಇದನ್ನು ಜಿಲ್ಲಾ ರೈತ ಸಂಘ ಬಲವಾಗಿ ಖಂಡಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ವಿದ್ಯುತ್‌ ವಿತರಣೆಯನ್ನು ಖಾಸಗಿಯವರಿಗೆ ಕೊಡಲು ಹುನ್ನಾರ ನಡೆಸಿದೆ. ಹಾವೇರಿ ಜಿಲ್ಲೆಯ ಸುಮಾರು 1.30 ಲಕ್ಷ ರೈತರು ಪಂಪ್‌ಸೆಟ್‌ ಹೊಂದಿದ್ದು, ಜಿಲ್ಲೆಯಲ್ಲಿ ಶೇ 75ರಷ್ಟು ವಿದ್ಯುತ್‌ ಕೃಷಿಗೆ ಬಳಕೆಯಾಗುತ್ತಿದೆ. ವಿದ್ಯುತ್‌ ಖಾಸಗೀಕರಣದಿಂದ ರೈತರ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಸುವ ಸಾಧ್ಯತೆಗಳಿವೆ. ಇದರಿಂದ ದೇಶದ ಆಹಾರ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಹಾನಗಲ್‌ನಿಂದ ಹುಬ್ಬಳ್ಳಿಯವರೆಗೆ ಹೆದ್ದಾರಿಯಲ್ಲಿ ಸಮರ್ಪಕ ಅಂಡರ್‌ ಪಾಸ್‌ ವ್ಯವಸ್ಥೆಯಿಲ್ಲ. ಜಿ.ಎಚ್‌.ಕಾಲೇಜು ಹಿಂಭಾಗ, ಮೋಟೆಬೆನ್ನೂರು, ಛತ್ರ ಗ್ರಾಮದ ಬಳಿ ಅಂಡರ್‌ಪಾಸ್‌ ಇಲ್ಲದೆ ರೈತರ ಚಕ್ಕಡಿಗಳು ಹೋಗುವುದು ದುಸ್ತರವಾಗಿದೆ ಎಂದು ಒತ್ತಾಯಿಸಿದರು.

ರೈತ ಮುಖಂಡರಾದ ಮಹಮ್ಮದ್‌ಗೌಡ ಪಾಟೀಲ, ಶಿವಬಸಪ್ಪ ಗೋವಿ, ಮರಿಗೌಡ ಪಾಟೀಲ, ರುದ್ರಗೌಡ ಕಾಡನಗೌಡ್ರ, ಪ್ರಭುಗೌಡ ಬ.ಪ್ಯಾಟಿ, ಶಂಕ್ರಪ್ಪ ಶಿರಗಂಬಿ, ದಿಳ್ಳೆಪ್ಪ ಮಣ್ಣೂರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.