ADVERTISEMENT

ಸೋಯಾಬಿನ್ ಖರೀದಿ ಕೇಂದ್ರ ಆರಂಭಿಸಿ: ಜಿಲ್ಲಾಧಿಕಾರಿ ರಘುನಂದನ ಮೂರ್ತಿ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2022, 16:12 IST
Last Updated 18 ನವೆಂಬರ್ 2022, 16:12 IST
ರಘುನಂದನಮೂರ್ತಿ, ಜಿಲ್ಲಾಧಿಕಾರಿ 
ರಘುನಂದನಮೂರ್ತಿ, ಜಿಲ್ಲಾಧಿಕಾರಿ    

ಹಾವೇರಿ: ಜಿಲ್ಲೆಯ ಹಾವೇರಿ, ಶಿಗ್ಗಾವಿ ಹಾಗೂ ಹಾನಗಲ್ ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಸೋಯಾಬಿನ್ ಉತ್ಪನ್ನ ಖರೀದಿ ಕೇಂದ್ರವನ್ನು ಆರಂಭಿಸುವಂತೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್ಕ್‌ಫೋರ್ಸ್‌ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯಡಿ ಸರ್ಕಾರದ ಮಾನದಂಡಂತೆ ಎಫ್.ಎ.ಕ್ಯೂ ಗುಣಮಟ್ಟ ಹೊಂದಿದ ಸೋಯಾಬಿನ್ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರತಿ ರೈತರಿಂದ ಪ್ರತಿ ಎಕರೆಗೆ 5 ಕ್ವಿಂಟಲ್ ಹಾಗೂ ಪ್ರತಿ ಒಬ್ಬ ರೈತರಿಂದ ಗರಿಷ್ಠ 20 ಕ್ವಿಂಟಲ್ ಖರೀದಿಗೆ ಅವಕಾಶವಿದೆ. ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಬೇಕು ಎಂದು ಸೂಚನೆ ನೀಡಿದರು.

ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿಯಂತೆ ಜಿಲ್ಲೆಯಲ್ಲಿ 11,018 ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆಯಾಗಿದ್ದು, ಹಾವೇರಿ ತಾಲ್ಲೂಕಿನಲ್ಲಿ 3,050 ಹೆಕ್ಟೇರ್, ಶಿಗ್ಗಾವಿ ತಾಲ್ಲೂಕಿನಲ್ಲಿ 3,535 ಹೆಕ್ಟೇರ್ ಹಾಗೂ ಹಾನಗಲ್ ತಾಲ್ಲೂಕಿನಲ್ಲಿ 274 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮೊದಲ ಹಂತದಲ್ಲಿ ಈ ತಾಲ್ಲೂಕುಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ. ಉಳಿದಂತೆ ಬೇಡಿಕೆಗೆ ಅನುಗುಣವಾಗಿ ಇತರ ತಾಲ್ಲೂಕುಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಖರೀದಿ ಕೇಂದ್ರ ಆರಂಭಕ್ಕೆ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.

ADVERTISEMENT

ಬೆಂಬಲ ಬೆಲೆಯಡಿ ಸೋಯಾಬಿನ್ ಖರೀದಿ ಕೇಂದ್ರ ಆರಂಭಿಸಿರುವ ಕುರಿತಂತೆ ವ್ಯಾಪಕ ಪ್ರಚಾರ ನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಸೋಯಾಬಿನ್ ಕಾಳುಗಳನ್ನು ದಾಸ್ತಾನು ಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು ಎಂದು ಸೂಚನೆ ನೀಡಿದರು.

ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೋಯಾಬಿನ್ ಉತ್ಪನ್ನ ಪ್ರತಿ ಕ್ವಿಂಟಲ್‍ಗೆ ₹4,300 ರಂತೆ ಸರ್ಕಾರ ಆದೇಶ ಹೊರಡಿಸಿದೆ. ರೈತರ ನೋಂದಣಿ 45 ದಿನಗಳವರೆಗೆ ಹಾಗೂ ನೋಂದಣಿ ಕಾರ್ಯ ಜೊತೆಯಲ್ಲಿ ಖರೀದಿ ಕಾಲಾವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿ, ಕರ್ನಾಟಕ ರಾಜ್ಯ ಸಹಕಾರಿ ಮಾರಾಟ ಮಂಡಳಿ ನಿಯಮಿತ ಸಂಸ್ಥೆಯ ಮೂಲಕ ಖರೀದಿಸಲು ಆದೇಶಿಸಲಾಗಿದೆ.

ಜಿಲ್ಲೆಯಲ್ಲಿ ಸೋಯಾಬಿನ್ ಉತ್ಪನ್ನ ₹4,550 ರಿಂದ ₹6,317ರವರೆಗೆ ಮಾರಾಟವಾಗುತ್ತಿದೆ. ಎಡಿಎಂ ಅಗ್ರೋ ಪ್ರೈವೇಟ್ ಲಿಮಿಟೆಡ್ ಹಾವೇರಿ ಶಾಖೆ ಪ್ರತಿ ಕ್ವಿಂಟಲ್‍ಗೆ ₹5,765ಗಳಿಗೆ ಖರೀದಿಸುತ್ತಿದೆ. ಸರ್ಕಾರ ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆ ದರಗಳಿಗಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿದೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ತೋಟಗಾರಿಕೆ, ಸಹಕಾರಿ ಸಂಘಗಳ ಉಪನಿಬಂಧಕರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ರಾಜ್ಯ ಉಗ್ರಾಣ ನಿಗಮದ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.