ರಾಣೆಬೆನ್ನೂರು: ನೊಂದ ಮನಸ್ಸಿಗೆ ಸಂಗೀತ, ಗಾಯನ ಒಂದು ಆಹ್ಲಾದಕರ ಅನುಭವ. ಕಾಕಿ ಜನಸೇವಾ ಸಂಸ್ಥೆಯು ಕಳೆದ 7 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಜಾನಪದ ಸೇರಿದಂತೆ ಸಾಮೂಹಿಕ ವಿವಾಹ, ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಯುವಕರಿಗೆ ಸಾಂಸ್ಕೃತಿಕ ಪ್ರತಿಭೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕರೋಕೆ ಸ್ಟುಡಿಯೋ ನಿರ್ಮಿಸಿದ್ದು ಶ್ಲಾಘನೀಯ ಎಂದು ನಗರದ ಗಣ್ಯ ವರ್ತಕ ಎಂ.ಎಸ್.ಅರಕೇರಿ ಹೇಳಿದರು.
ನಗರದ ಹುಣಸೀಕಟ್ಟಿ ರಸ್ತೆಯ ಕಾಕಿ ಲೇಔಟ್‌ನಲ್ಲಿರುವ ಜೇಸಿವಾಣಿ ಅರಮನೆಯಲ್ಲಿ ಶುಕ್ರವಾರ ಕಾಕಿ ಶ್ರೀನಿವಾಸ ಹೈಟೆಲ್ ಕರೋಕೆ ಸ್ಟುಡಿಯೋ ಉದ್ಘಾಟನೆ ಮತ್ತು ಪಿಯು ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಕರೋಕೆ ಸ್ಪರ್ಧೆ ಯುವ ನಾಗಶ್ರೀ -2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಕ್ಷೇತ್ರದಲ್ಲಿ ಕಲಿಕೆ ಎನ್ನುವುದು ನಿರಂತರ, ಯಾವುದೇ ರೀತಿಯ ಅಧ್ಯಯನ ಮಾಡುವಾಗ ಅದರ ಸೂಕ್ಷ್ಮತೆ ತಿಳಿದುಕೊಳ್ಳುವುದು ಅತಿ ಮುಖ್ಯ ಎಂದರು.
ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಾನಪದ ಕಲಾವಿದ ಕೆ.ಸಿ.ನಾಗರಜ್ಜಿ ಮಾತನಾಡಿ, ಮನಸ್ಸಿನ ಆರೋಗ್ಯಕ್ಕೆ ಸಂಗೀತ ಉತ್ತಮ, ಪಾಠದ ಜತೆಗೆ ಸಂಗೀತ ಅಭ್ಯಾಸ ಮಾಡುವುದರಿಂದ ಜ್ಞಾಪಕ ಶಕ್ತಿಯನ್ನು ವೃದ್ಧಿಗೊಳಿಸಬಹುದು. ಅನೇಕ ವರ್ಷಗಳ ಕಾಲದ ಇತಿಹಾಸವನ್ನು ಹೊಂದಿರುವ ಸಂಗೀತ ಕ್ಷೇತ್ರ ಉಳಿಯಬೇಕಾದರೆ ಇಂದಿನ ಯುವ ಪೀಳಿಗೆಗೆ ಸಂಗೀತದಲ್ಲಿರುವ ನಾನಾ ಪ್ರಕಾರಗಳನ್ನು ಪರಿಚಯಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಕಾಕಿ ಜನಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ ಕಾಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ತಂದೆ, ತಾಯಿ ಮತ್ತು ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಜನಸೇವೆ ಮಾಡುತ್ತಿದ್ದೇವೆ. ಯುವಕರನ್ನು ಸಂಗೀತದತ್ತ ಸೆಳೆಯಲು ಕರೋಕೆ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಗೀತ ಕ್ಷೇತ್ರದಲ್ಲಿ ಕಲಿಕೆ ಎನ್ನುವುದು ನಿರಂತರವಾದದ್ದು, ಯಾವುದೇ ರೀತಿಯ ಅಧ್ಯಯನ ಮಾಡುವಾಗ ಅದರ ಸೂಕ್ಷ್ಮತೆಯನ್ನು ತಿಳಿದುಕೊಳ್ಳುವುದು ಅತಿ ಮುಖ್ಯ ಎಂದರು.
ಲಿಂಗದಹಳ್ಳಿ ವೀರಭದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿರ್ಣಾಯಕರಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜಾನಪದ ಕಲಾವಿದೆ ಕೆ.ಸಿ.ನಾಗರಜ್ಜಿ, ಕೆ.ಎಸ್.ನಾಗರಾಜ, ಎಫ್.ಎಚ್.ಗಚ್ಚಿನಮಠ, ವೀಣಾ ಕಾಮಟೆ ಅವರು ನಿರ್ಣಾಯಕರಾಗಿದ್ದರು.
ಹನುಮಂತಪ್ಪ ಕಾಕಿ, ರೂಪಾ ಎಸ್.ಕಾಕಿ, ವೆಂಕಟೇಶ ಕಾಕಿ, ಲಕ್ಷ್ಮಿ ಕಾಕಿ, ಹನುಮಂತಪ್ಪ ಅಮಾಸಿ, ಬ್ರಹ್ಮಕುಮಾರಿ ಆಶ್ರಮದ ಮಾಲತೀಜಿ, ನಿತ್ಯಾನಂದ ಕುಂದಾಪುರ, ನಿವೃತ್ತ ಉಪನ್ಯಾಸಕ ಶಿವಾನಂದ ಬಗಾದಿ, ಲಕ್ಷ್ಮೀ ಹುರಕಡ್ಲಿ ರವಿಕುಮಾರ ಪಾಟೀಲ, ಪ್ರಭುಲಿಂಗಪ್ಪ ಹಲಗೇರಿ, ಜೇಸಿ ಕಾರ್ಯದರ್ಶಿ ಇಮ್ನಾನ್ ಐರಣಿ, ಕುಮಾರ ಬೆಣ್ಣಿ, ಪ್ರಭು ಯಳೇಹೊಳಿ, ಕೊಟ್ರೇಶ ಯಮ್ಮಿ, ಶಿವಕುಮಾರ ಜಾಧವ, ಹಾಗೂ ಕಾಕಿ ಜನಸೇವಾ ಸಂಸ್ಥೆಯ ಪದಾಧಿಕಾರಿಗಳು ಮತ್ತು ಜೇಸಿ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
50ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
ರಾಜ್ಯಮಟ್ಟದ ಕರೋಕೆ ಗಾಯನ ಸ್ಪರ್ಧೆಯಲ್ಲಿ 50ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಅರ್ಪಿತಾ (ಹರಿಹರ )- ಪ್ರಥಮ ₹25 ಸಾವಿರ ಶ್ರೇಯಾ ಬಣಕಾರ- ದ್ವಿತೀಯ ₹ 15 ಸಾವಿರ ಮಹ್ಮದ್ ಚೌಧರಿ- ತೃತೀಯ ಬಹುಮಾನ ₹10 ಸಾವಿರ ಮತ್ತು ದಾವಣಗೆರೆಯ ಚಿರಂತನ- ಚತುರ್ಥ ಬಹುಮಾನ ₹ 5 ಸಾವಿರ ಮತ್ತು ಸುನೀಲ್ ಎಲ್ ಜಿ- ಸಮಾಧಾನಕರ ಬಹುಮಾನ ₹5 ಸಾವಿರ ಜೊತೆಗೆ ಎಲ್ಲರಿಗೂ ಪಾರಿತೋಷಕ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.