ADVERTISEMENT

ಹಾವೇರಿಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪನೆಗೆ ಕ್ರಮ: ಸಿಎಂ ಬೊಮ್ಮಾಯಿ

ಹಾಲಿನ ಡೇರಿ ಮತ್ತು ಯುಎಚ್‌ಟಿ ಹಾಲು ಪ್ಯಾಕಿಂಗ್‌ ಘಟಕಕ್ಕೆ ಸಿಎಂ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 15:30 IST
Last Updated 28 ಆಗಸ್ಟ್ 2021, 15:30 IST
ಹಾವೇರಿ ತಾಲ್ಲೂಕಿನ ಜಂಗಮನಕೊಪ್ಪದಲ್ಲಿ ಶನಿವಾರ ಹಾವೇರಿ ಡೇರಿ ಮತ್ತು ಯುಎಚ್‌ಟಿ ಹಾಲು ಪ್ಯಾಕಿಂಗ್‌ ಘಟಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದರು 
ಹಾವೇರಿ ತಾಲ್ಲೂಕಿನ ಜಂಗಮನಕೊಪ್ಪದಲ್ಲಿ ಶನಿವಾರ ಹಾವೇರಿ ಡೇರಿ ಮತ್ತು ಯುಎಚ್‌ಟಿ ಹಾಲು ಪ್ಯಾಕಿಂಗ್‌ ಘಟಕಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದರು    

ಹಾವೇರಿ: ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸುವ ಸಂಬಂಧ ‘ಮದರ್‌ ಡೇರಿ’ ಅವರೊಂದಿಗೆ ಮಾತುಕತೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಸೌಲಭ್ಯವೂ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಜಂಗಮನಕೊಪ್ಪದ ಕೆಎಂಎಫ್ ಘಟಕದಲ್ಲಿ ನೂತನ ಡೇರಿ ಹಾಗೂ ಯುಹೆಚ್‍ಟಿ ಹಾಲು ಪ್ಯಾಕಿಂಗ್ ಘಟಕದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.

₹90 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಯುಎಚ್‌ಟಿ ಘಟಕ 18 ತಿಂಗಳಲ್ಲಿ ಕಾರ್ಯಾರಂಭಗೊಳ್ಳಲಿದೆ. ಇಲ್ಲಿ 2 ಲಕ್ಷ ಲೀಟರ್‌ ಹಾಲನ್ನು ಸಂಸ್ಕರಿಸಿ, ಪ್ಯಾಕಿಂಗ್‌ ಮಾಡಿ ಬೇರೆ ರಾಜ್ಯಗಳಿಗೂ ಮಾರಾಟ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು. ಹಾಲು ಉತ್ಪಾದಕರಿಗೆ ಹೆಚ್ಚಿನ ದರವನ್ನು ಕೊಡುತ್ತೇವೆ. ರೈತರು ಎಮ್ಮೆ ಮತ್ತು ಹಸುಗಳನ್ನು ಖರೀದಿಸಿ ಹೆಚ್ಚು ಹಾಲು ಉತ್ಪಾದನೆ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

20 ಲಕ್ಷ ಮಕ್ಕಳಿಗೆ ಪ್ರಯೋಜನ:

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಒಂದು ಗಂಟೆ ಅವಧಿಯಲ್ಲಿ ರೈತರ ಮಕ್ಕಳಿಗೆ ಶಿಷ್ಯವೇತನ ಘೋಷಿಸಿದೆ. ಈ ಮಹತ್ವಾಕಾಂಕ್ಷೆಯ ಈ ಯೋಜನೆಗೆ ಸೆ.5ರಂದು ಕೇಂದ್ರ ಕೃಷಿ ಸಚಿವರು ಚಾಲನೆ ನೀಡುವರು. ಇದಕ್ಕಾಗಿ ಒಂದು ಸಾವಿರ ಕೋಟಿ ಮೀಸಲಿಡಲಾಗಿದೆ. 20 ಲಕ್ಷ ಮಕ್ಕಳಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದರು.

ಆ.30ರಂದು ತಜ್ಞರ ಸಭೆ ನಡೆಸಿ ಶಾಲೆಗಳ ಪುನರಾರಂಭ ಹಾಗೂ ಕೋವಿಡ್ ಸಂಭಾವ್ಯ ಮೂರನೇ ಅಲೆ ತಡೆಯ ಕ್ರಮಗಳ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು.

ಜವಳಿ ಪಾರ್ಕ್‌ ಸ್ಥಾಪನೆ:

ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಉದ್ಯೋಗ ಸೃಜನೆಯ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ. ದೆಹಲಿಯ ಮೆಗಾ ಟೆಕ್ಸ್‌ಟೈಲ್‌ ಪಾರ್ಕಿಗೆ ಭೇಟಿ ನೀಡಲಾಗಿದೆ. ಅದೇ ಮಾದರಿಯಲ್ಲಿ ಉದ್ಯೋಗ ಸೃಜನೆಯ ಕ್ರಮವಾಗಿ ಶಿಗ್ಗಾವಿ, ಸವಣೂರ, ಹಿರೇಕೆರೂರು, ಬ್ಯಾಡಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ, ಹಾವೇರಿಯಲ್ಲಿ ಈಗಾಗಲೇ ಯೋಜಿಸಲಾದ ಸುಮಾರು ಒಂದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣಕ್ಕೆ ವೇಗ ನೀಡಲಾಗುವುದು ಎಂದರು.

ನಿತ್ಯ 5 ಲಕ್ಷ ಜನರಿಗೆ ಲಸಿಕೆ:

ಕೋವಿಡ್ ನಿರ್ವಹಣೆಯಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮುಂದಿನ ತಿಂಗಳು ರಾಜ್ಯಕ್ಕೆ ಸುಮಾರು ಒಂದು ಕೋಟಿ ಡೋಸ್ ಲಸಿಕೆ ನಿರೀಕ್ಷಿಸಲಾಗುತ್ತಿದೆ. ಈಗಾಗಲೇ 80 ಲಕ್ಷ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ಪ್ರತಿದಿನ 5 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅಕ್ಟೋಬರ್ ಹೊತ್ತಿಗೆ ರಾಜ್ಯದ ಪ್ರತಿಯೊಬ್ಬರಿಗೂ ಮೊದಲ ಡೋಸ್ ಲಸಿಕೆ ಪೂರ್ಣಗೊಳಿಸುವ ಗುರಿ ಇದೆ. ನಗರದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ ಲಸಿಕೆ ನೀಡಲು ವಿಶೇಷ ಕಾರ್ಯಾಚರಣೆ ನಡೆಸಲಾಗುವುದು ಎಂದರು.

ಕೃಷಿ ಸಚಿವ ಬಿ.ಸಿ. ಪಾಟೀಲ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ, ಶಾಸಕ ನೆಹರು ಓಲೇಕಾರ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ, ನಿರ್ದೇಶಕರು ಇದ್ದರು.

‘ಪ್ರತ್ಯೇಕ ಡಿಸಿಸಿ ಬ್ಯಾಂಕ್‌ಗೆ ಕ್ರಮ’

‘ಕೇಂದ್ರ ಹಣಕಾಸು ಸಚಿವರ ಜತೆ ಚರ್ಚೆ ಮಾಡಿದ್ದೇನೆ. ಅವರು ಆರ್‌ಬಿಐನೊಂದಿಗೆ ಮಾತುಕತೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ 5–6 ಹೊಸ ಜಿಲ್ಲೆಗಳಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆಗೆ ಚಾಲನೆ ಸಿಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾಮಗಾರಿ ನಡೆದಿದ್ದು ಮುಂಬರುವ 18 ತಿಂಗಳಲ್ಲಿ ಆಡಳಿತ ಮತ್ತು ಬೋಧನಾ ವಿಭಾಗ ಪೂರ್ಣಗೊಳಿಸಿ, ಎಂಬಿಬಿಎಸ್ ಪ್ರವೇಶ ಪ್ರಾರಂಭಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.