ADVERTISEMENT

ಹಾವೇರಿ | ಬೀದಿ ನಾಯಿ ಸ್ಥಳಾಂತರ: ನ. 29ರ ಗಡುವು

ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆ, ಸುಪ್ರೀಂಕೋರ್ಟ್ ಆದೇಶ ಪಾಲನೆಗೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 4:15 IST
Last Updated 22 ನವೆಂಬರ್ 2025, 4:15 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ಅಧ್ಯಕ್ಷತೆಯಲ್ಲಿ ‘ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ’ ಸಭೆ ಬುಧವಾರ ನಡೆಯಿತು
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ಅಧ್ಯಕ್ಷತೆಯಲ್ಲಿ ‘ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ’ ಸಭೆ ಬುಧವಾರ ನಡೆಯಿತು   

ಹಾವೇರಿ: ‘ಜಿಲ್ಲೆಯಲ್ಲಿರುವ ಬೀದಿನಾಯಿಗಳ ಹಾವಳಿ ತಡೆಗೆ ಸ್ಥಳೀಯ ಸಂಸ್ಥೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟು ಬೀದಿ ನಾಯಿಗಳಿವೆ ? ಎಂಬುದರ ಬಗ್ಗೆ ಅಂಕಿ–ಅಂಶ ಸಿದ್ಧಪಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ನ. 29ರೊಳಗಾಗಿ ಎಲ್ಲ ಬೀದಿ ನಾಯಿಗಳನ್ನು ಹಿಡಿದು ನಿಗದಿಪಡಿಸಿದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ‘ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ’ ಸಭೆಯಲ್ಲಿ ಮಾತನಾಡಿದರು.

‘ಬೀದಿ ನಾಯಿಗಳ ಹಾವಳಿ ತಡೆಗಾಗಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಆದೇಶದ ಮಾರ್ಗಸೂಚಿಗಳ ಅನ್ವಯ ಅಧಿಕಾರಿಗಳು ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಬೀದಿನಾಯಿಗಳು ಯಾರ ಮೇಲಾದರೂ ದಾಳಿ ಮಾಡಿ ಗಾಯಗೊಳಿಸಿದರೆ, ಅದಕ್ಕೆ ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಮೈದಾನಗಳು, ಉದ್ಯಾನಗಳು, ಬಸ್ ನಿಲ್ದಾಣಗಳು, -ಡಿಪೊ, ರೈಲು ನಿಲ್ದಾಣ ಹಾಗೂ ಇತರೆ ಸಾರ್ವಜನಿಕ ಸ್ಥಳಗಳಲ್ಲಿರುವ ಬೀದಿನಾಯಿಗಳನ್ನು ಸ್ಥಳಾಂತರ ಮಾಡಬೇಕು. ಸಾರ್ವಜನಿಕ ಸಂಸ್ಥೆಯವರು ತಮ್ಮ ಸಂಸ್ಥೆಯ ಪ್ರದೇಶದೊಳಗೆ ಬೀದಿ ನಾಯಿಗಳು ಪ್ರವೇಶಿಸದಂತೆ ಬೇಲಿ ಹಾಕುವ ಜವಾಬ್ದಾರಿ ಹೊಂದಿರುತ್ತಾರೆ. ಸಂಸ್ಥೆಯ ಆವರಣದಲ್ಲಿ ಬೀದಿ ನಾಯಿಗಳಿಂದ ಸಾರ್ವಜನಿಕರು ತೊಂದರೆಯಾದರೆ, ಸಂಬಂಧಪಟ್ಟ ಸಂಸ್ಥೆಯವರ ಮೇಲೆ ಕ್ರಮ ಜರುಗಿಸಲಾಗುವುದು’ ಎಂದರು.

‘ಸ್ಥಳೀಯ ಸಂಸ್ಥೆಯವರು ಬೀದಿನಾಯಿಗಳ ಸ್ಥಳಾಂತರ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜಿಲ್ಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಕುರಿತು ಸಹಾಯವಾಣಿ ಸ್ಥಾಪಿಸಿ, ಜನರ ದೂರುಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.

ನೋಡಲ್ ಅಧಿಕಾರಿ ನೇಮಿಸಿ: ‘ಪ್ರತಿಯೊಂದು ವಾರ್ಡ್ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಾಂದ್ರತೆಗೆ ಅನುಗುಣವಾಗಿ ಆಹಾರ ವಿತರಣೆಗೆ ಸ್ಥಳಗಳನ್ನು ಗುರುತಿಸಬೇಕು. ನಿಗದಿತ ಜಾಗದಲ್ಲಿ ಮಾತ್ರ ಆಹಾರ ನೀಡಬೇಕು. ಆಹಾರ ವಿತರಣಾ ತಾಣಗಳನ್ನು ಹೊರತುಪಡಿಸಿ ಇತರೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ಪೂರೈಕೆ ಮಾಡದಂತೆ ಸುಪ್ರೀಂಕೋರ್ಟ್ ಹೇಳಿದೆ. ಈ ಆದೇಶ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಯನ್ನು ನೇಮಿಸಬೇಕು’ ಎಂದು ಸೂಚಿಸಿದರು.

‘ರಾಷ್ಟ್ರ, ರಾಜ್ಯ ಹೆದ್ದಾರಿಗಳಲ್ಲಿ ದಿನದ 24 ಗಂಟೆಯೂ ಗಸ್ತು ತಿರುಗಬೇಕು. ರಸ್ತೆ ಸಂಚಾರಕ್ಕೆ ಅಡಚಣೆ ಉಂಟು ಮಾಡುವ ಬಿಡಾಡಿ ಜಾನುವಾರು ಹಾಗೂ ಬೀದಿನಾಯಿಗಳನ್ನು ಸ್ಥಳಾಂತರಿಸಲು ಸ್ಥಳೀಯ ಪೊಲೀಸ್ ಇಲಾಖೆ, ಪಶುಪಾಲನಾ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ನಗರಾಭಿವೃದ್ದಿ ಇಲಾಖೆ, ಸಾರಿಗೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದರು.

ಲಸಿಕೆ ದಾಸ್ತಾನಿಗೆ ಸೂಚನೆ: ‘ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಎಲ್ಲ ಸಮಯದಲ್ಲಿ ರೇಬಿಸ್ ಲಸಿಕೆ ಸೇರಿ ಇತರೆ ಔಷಧಿಗಳ ದಾಸ್ತಾನು ಇರುವಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಯವರು ಮೇಲಿಂದ ಮೇಲೆ ಪರಿಶೀಲಿಸಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

‘ಎಲ್ಲ ಶಾಲೆ–ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಪ್ರಾಣಿಗಳ ನಡವಳಿಕೆಗಳ ಬಗ್ಗೆ ಹಾಗೂ ಪ್ರಥಮ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಶಿವಯೋಗಿ ಎಲಿ, ಯೋಜನಾ ನಿರ್ದೇಶಕ ಚಂದ್ರಪ್ಪ, ಪಾಲಿಕ್ಲಿನಿಕ್ ಉಪನಿರ್ದೇಶಕ ಜಯಕುಮಾರ ಕಂಕಣವಾಡಿ, ಕಿರಣಕುಮಾರ ಕೊಪ್ಪದ ಹಾಗೂ ಇತರರು ಸಭೆಯಲ್ಲಿದ್ದರು.

ಅಫಿಡ್‌ವಿಟ್ ಸಲ್ಲಿಕೆಗೆ ಸೂಚನೆ’

‘ಸ್ಥಳೀಯ ಸಂಸ್ಥೆಯವರು ಹಾಗೂ ಸಾರ್ವಜನಿಕ ಸಂಸ್ಥೆಯವರು ಬೀದಿನಾಯಿಗಳ ತಡೆಗೆ ಕ್ರಮ ಕೈಗೊಳ್ಳಬೇಕು. ಬೀದಿ ನಾಯಿ ಹಾವಳಿ ತಡೆ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯವರು ಡಿ. 3ರೊಳಗೆ ಜಿಲ್ಲಾಡಳಿತಕ್ಕೆ ಅಫಿಡ್‌ವಿಟ್ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಸೂಚನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.