ADVERTISEMENT

ಹಾವೇರಿ | ಸಂಧಾನ ಸಫಲ; ಧರಣಿ ಕೈಬಿಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 0:06 IST
Last Updated 14 ನವೆಂಬರ್ 2025, 0:06 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಂಧಾನ ಸಭೆಯಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರು ಪಾಲ್ಗೊಂಡಿದ್ದರು.
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಂಧಾನ ಸಭೆಯಲ್ಲಿ ರೈತರು ಮತ್ತು ಕಾರ್ಖಾನೆ ಮಾಲೀಕರು ಪಾಲ್ಗೊಂಡಿದ್ದರು.   

ಹಾವೇರಿ: ಪ್ರತಿ ಟನ್‌ ಕಬ್ಬಿಗೆ ಬೆಲೆ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಮೂರು ಕಾರ್ಖಾನೆಗಳ ಮಾಲೀಕರು ಮತ್ತು ಕಬ್ಬು ಬೆಳೆಗಾರರ ನಡುವೆ ಬುಧವಾರ ತಡರಾತ್ರಿಯವರೆಗೆ ನಡೆದ ಸಂಧಾನ ಸಭೆ ಸಫಲವಾಗಿದೆ. ಮೂರು ದಿನಗಳಿಂದ ನಡೆಸುತ್ತಿದ್ದ ಧರಣಿಯನ್ನು ಕಬ್ಬು ಬೆಳೆಗಾರರು ಹಿಂಪಡೆದಿದ್ದಾರೆ.

ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯಲ್ಲಿ ಪಾಲ್ಗೊಂಡ ಶಿಗ್ಗಾವಿ ತಾಲ್ಲೂಕಿನ ಕೋಣನಕೇರಿಯ ವಿಐಎನ್‌ಪಿ ಕಂಪನಿ ಮಾಲೀಕ ವಿವೇಕ್ ಹೆಬ್ಬಾರ, ‘ಪ್ರತಿ ಟನ್‌ ಕಬ್ಬಿಗೆ ₹2,850 (ಕಟಾವು–ಸಾಗಣೆ ವೆಚ್ಚ ಬಿಟ್ಟು) ನೀಡುತ್ತೇವೆ’ ಎಂದರು.

ಹಾವೇರಿ ತಾಲ್ಲೂಕಿನ ಸಂಗೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನಲ್ಲಿರುವ ಜಿ.ಎಂ. ಶುಗರ್ ಕಂಪನಿಯ ಎರಡೂ ಕಾರ್ಖಾನೆಯ ಮಾಲೀಕರಾದ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಪರವಾಗಿ (ಸಂಗೂರು– ಭೈರನಪಾದ) ಸಭೆಯಲ್ಲಿ ಪಾಲ್ಗೊಂಡ ಬಸವರಾಜ್, ‘ಪ್ರತಿ ಟನ್‌ ಕಬ್ಬಿಗೆ ₹ 2,775 (ಕಟಾವು ಹಾಗೂ ಸಾಗಣೆ ವೆಚ್ಚ ಬಿಟ್ಟು) ನೀಡಲಾಗುವುದು. 20 ಕಿ.ಮೀ. ಒಳಗೆ ಹಾಗೂ 20 ಕಿ.ಮೀ. ದೂರದ ಜಮೀನಿನಲ್ಲಿರುವ ಕಬ್ಬಿಗೆ ದೂರದ ಆಧಾರದಲ್ಲಿ ಬೆಲೆ ಇರಲಿದೆ’ ಎಂದರು.

ADVERTISEMENT

ಎರಡೂ ಕಾರ್ಖಾನೆ ಮಾಲೀಕರ ಭರವಸೆಗೆ ಒಪ್ಪಿದ ರೈತರು, ‘ಸಭೆಯಲ್ಲಿ ಕೊಟ್ಟ ಮಾತಿಗೆ ಮಾಲೀಕರು ಬದ್ಧವಾಗಿರಬೇಕು. ನಿಗದಿತ ಬೆಲೆಯನ್ನು ರೈತರಿಗೆ ಕೊಡಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಯವರು ವಹಿಸಿಕೊಳ್ಳಬೇಕು’ ಎಂದರು. ನಂತರ ಧರಣಿ ಕೈ ಬಿಡುವುದಾಗಿ ಘೋಷಿಸಿದರು.

‘ಕಾರ್ಖಾನೆ ದರಕ್ಕೆ ಒಪ್ಪಿದ್ದೇವೆ. ಸಕ್ಕರೆ ಇಳುವರಿ ಹಾಗೂ ತೂಕದಲ್ಲಿ ಆಗುತ್ತಿರುವ ವಂಚನೆ ತಡೆಯುವಂತೆ ಆಗ್ರಹಿಸಿದ್ದೇವೆ. ಈ ಬೇಡಿಕೆಗಳನ್ನೂ ಈಡೇರಿಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪೂರ ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ್, ಹೆಚ್ಚುವರಿ ಜಿಲ್ಲಾ ಎಸ್‌ಪಿ ಲಕ್ಷ್ಮಣ ಶಿರಕೋಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.