ADVERTISEMENT

ಹಾವೇರಿ | ಒಂದೇ ಕುಟುಂಬದ ನಾಲ್ವರಿಂದ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 20:00 IST
Last Updated 14 ಜೂನ್ 2022, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ಯಾಡಗಿ (ಹಾವೇರಿ): ‘ಉಳುಮೆ ಮಾಡುತ್ತಿರುವ ಜಮೀನನ್ನು ಕಿತ್ತು ಕೊಳ್ಳಲು ಹಾವೇರಿ ಶಾಸಕ ನೆಹರು ಓಲೇಕಾರ ಕುಟುಂಬಸ್ಥರು ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ತಾಲ್ಲೂಕಿನ ಶಿಡೇನೂರು ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಮಂಗಳವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಶಿವಾಜಿನಗರ ಕಂದಾಯ ಗ್ರಾಮದ ಪಾಂಡಪ್ಪ ಕಬ್ಬೂರು (70), ಗುರುಶಾಂತಪ್ಪ ಲಮಾಣಿ (72), ಗಂಗವ್ವ ಲಮಾಣಿ (65) ಹಾಗೂ ಹನುಮಂತಪ್ಪ ಬಡಿಗೇರ (41) ಜಮೀನಿನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವರು.

ಈ ಪೈಕಿ ಒಬ್ಬರ ಸ್ಥಿತಿ ಗಂಭೀರ ವಾಗಿದೆ. ಹೆಚ್ಚಿನ ಚಿಕಿತ್ಸೆಗೆ ನಾಲ್ವರನ್ನೂ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.ಹಾವೇರಿ ಎಸ್‌ಪಿ ಹನುಮಂತರಾಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

‘ಶಿಡೇನೂರು ಗ್ರಾಮದಲ್ಲಿ 29 ಕುಟುಂಬಗಳು ಅಕ್ರಮ–ಸಕ್ರಮ ಯೋಜನೆಯಡಿ ತಲಾ 1 ಎಕರೆ 15 ಗುಂಟೆ ಜಮೀನು ಪಡೆದುಕೊಂಡು, ಸಾಗುವಳಿ ಮಾಡಿಕೊಂಡಿದ್ದವು. ಈ ಕುಟುಂಬಗಳು ತಲಾ 15 ಗುಂಟೆ ಜಮೀನು ಬಿಟ್ಟುಕೊಡುವಂತೆ ಶಾಸಕ ನೆಹರು ಓಲೇಕಾರ ಹಾಗೂ ಅವರ ಮಗ ಮಂಜುನಾಥ ಓಲೇಕಾರ ಒತ್ತಾಯಿಸುತ್ತಿದ್ದಾರೆ. ಜಮೀನು ಬಿಟ್ಟುಕೊಡಲು ನಿರಾಕರಿಸಿದ್ದಕ್ಕೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ದು, ಬಿತ್ತನೆಗೆ ಯಾರೂ ಬರದಂತೆ ತಾಕೀತು ಮಾಡಿದ್ದಾರೆ’ ಎಂದು ಕೆಲ ರೈತರು ಆರೋಪಿಸಿದ್ದಾರೆ.

ಎಸ್‌.ಆರ್‌.ಪಾಟೀಲ ಕೈವಾಡ: ಆರೋಪ

ಬ್ಯಾಡಗಿ(ಹಾವೇರಿ):‘ಈ ಘಟನೆಯ ಹಿಂದೆ ಬ್ಯಾಡಗಿಯ ಕಾಂಗ್ರೆಸ್‌ ಮುಖಂಡ ಎಸ್‌.ಆರ್‌.ಪಾಟೀಲ ಅವರ ಕೈವಾಡವಿದೆ. ರೈತರನ್ನು ಕರೆಸಿಕೊಂಡು ಅವರು ಪ್ರಚೋದನೆ ನೀಡಿದ್ದಾರೆ’ ಎಂದು ಶಾಸಕ ನೆಹರು ಓಲೇಕಾರ ಆರೋಪಿಸಿದರು.

ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ‘ನಾನೇ ಶಿಡೇನೂರು ಗ್ರಾಮದ ಕೆಲವು ಕುಟುಂಬಗಳಿಗೆ ಹಿಂದೆ ಜಾಗ ನೀಡಿದ್ದೇನೆ. ನಾನು ಜಮೀನಿನ ಪಟ್ಟಾ ಕೊಟ್ಟಾಗ 18–19 ಕುಟುಂಬಗಳಿದ್ದವು. ಈಗ ಅವರ ಸಂಖ್ಯೆ ಹೆಚ್ಚಿದೆ. ಜತೆಗೆ ಹೆಚ್ಚುವರಿ ಜಾಗ ಒತ್ತುವರಿ ಮಾಡಿದ್ದಾರೆ. ಅದರ ತೆರವಿಗೆ ಗ್ರಾಮಸ್ಥರು ಅವರಿಗೆ ಸೂಚಿಸಿದ್ದಾರೆ’ ಎಂದರು.

‘ನನ್ನ ಪಾತ್ರವಿಲ್ಲ’: ‘ಶಾಸಕ ನೆಹರು ಓಲೇಕಾರ ಕುಟುಂಬದ ಸರ್ವಾಧಿಕಾರಿ ಧೋರಣೆಯಿಂದ ನೊಂದ ಬಡವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಳೆದ ವಾರ ಅವರೆಲ್ಲ ನನ್ನನ್ನು ಭೇಟಿ ಮಾಡಿದಾಗ ತಹಶೀಲ್ದಾರ್ ಬಳಿ ನ್ಯಾಯ ಕೇಳುವಂತೆ ಸಲಹೆ ನೀಡಿದ್ದೆ. ಆತ್ಮಹತ್ಯೆ ಘಟನೆಗೂ ನನಗೂ ಸಂಬಂಧವಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಎಸ್‌.ಆರ್‌.ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.