ಸ್ವಾತಿ ಬ್ಯಾಡಗಿ
ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನ ಆಸ್ಪತ್ರೆಯೊಂದರ ಶುಶ್ರೂಷಕಿ ಸ್ವಾತಿ ಬ್ಯಾಡಗಿ(22) ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಕುಮಾರಪಟ್ಟಣ ಠಾಣೆ ಪೊಲೀಸರು, ಕೃತ್ಯ ಎಸಗಿದ್ದ ಮೂವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ರಟ್ಟೀಹಳ್ಳಿ ತಾಲ್ಲೂಕಿನ ಮಾಸೂರಿನ ನಿವಾಸಿ ಸ್ವಾತಿ ಬ್ಯಾಡಗಿ ಅವರನ್ನು ಮಾರ್ಚ್ 3ರಂದು ಕೊಲೆ ಮಾಡಲಾಗಿತ್ತು. ರಾಣೆಬೆನ್ನೂರು ತಾಲ್ಲೂಕಿನ ಪತ್ತೇಪುರ ಬಳಿ ತುಂಗಭದ್ರಾ ನದಿಯಲ್ಲಿ ಮಾರ್ಚ್ 6ರಂದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಪೋಷಕರು ನೀಡಿದ್ದ ದೂರಿನಡಿ ತನಿಖೆ ಕೈಗೊಂಡಿದ್ದ ಪೊಲೀಸರು, ಸ್ವಾತಿ ಅವರ ಸ್ನೇಹಿತರಾದ ಹಿರೇಕೆರೂರು ತಾಲ್ಲೂಕಿನ ಹಳೇ ವೀರಾಪುರದ ನಯಾಜ್ ಇಮಾಮ್‌ಸಾಬ್ ಬೆಣ್ಣಿಗೇರಿ (28), ಮಾಸೂರಿನ ದುರ್ಗಾಚಾರಿ ಬಸವರಾಜಚಾರಿ ಬಡಿಗೇರ (25) ಹಾಗೂ ವಿನಾಯಕ ನಾಗಪ್ಪ ಪೂಜಾರ(27) ಅವರನ್ನು ಬಂಧಿಸಿದ್ದರು.
ಮೂವರನ್ನೂ ವಿಚಾರಣೆ ನಡೆಸಿದ್ದ ಪೊಲೀಸರು, ಹಲವು ಪುರಾವೆಗಳನ್ನು ಸಂಗ್ರಹಿಸಿ 250 ಪುಟಗಳ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಸದ್ಯದಲ್ಲೇ ವಿಚಾರಣೆ ಸಹ ಆರಂಭವಾಗಲಿದೆ.
ಹೋರಿ ಹಬ್ಬದ ಸ್ನೇಹ: ‘ಓದಿನಲ್ಲಿ ಜಾಣೆಯಾಗಿದ್ದ ಸ್ವಾತಿ, ಹೋರಿ ಬೆದರಿಸುವ ಹಬ್ಬದ ಮೇಲೂ ಒಲುವು ಹೊಂದಿದ್ದರು. ಎಲ್ಲಿಯಾದರೂ ಹೋರಿ ಹಬ್ಬ ನಡೆದರೆ ಹೋಗಿ ಬರುತ್ತಿದ್ದರು. ಈ ಹಬ್ಬದ ಮೂಲಕವೇ ಅವರಿಗೆ ಮೊದಲಿಗೆ ಆರೋಪಿಗಳಾದ ದುರ್ಗಾಚಾರಿ ಹಾಗೂ ವಿನಾಯಕ ಪರಿಚಯವಾಗಿತ್ತು. ತದನಂತರ, ಹೋರಿ ಹಬ್ಬದಲ್ಲೇ ಪ್ರಮುಖ ಆರೋಪಿ ನಯಾಜ್ ಸ್ನೇಹಿತನಾಗಿದ್ದ’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.
‘ಸ್ವಾತಿಯವರ ಸ್ನೇಹಿತರಾದ ದುರ್ಗಾಚಾರಿ ಹಾಗೂ ವಿನಾಯಕ ಸಹ ನಯಾಜ್‌ನ ಸ್ನೇಹಿತರು. ಮಾಸೂರು ಬಳಿಯ ಮಳಿಗೆಯೊಂದರಲ್ಲಿಯೇ ನಯಾಜ್ ಕೆಲಸ ಮಾಡುತ್ತಿದ್ದ. ಹೀಗಾಗಿ, ಎಲ್ಲಿಯಾದರೂ ಹೋರಿ ಹಬ್ಬ ನಡೆದರೆ ನಾಲ್ವರು ಒಟ್ಟಿಗೆ ಹೋಗಿ ಬರುತ್ತಿದ್ದರು. ನಯಾಜ್ ಹಾಗೂ ಸ್ವಾತಿ, ಆರಂಭದಲ್ಲಿ ಸ್ನೇಹಿತರಾಗಿದ್ದರು. ಮೊಬೈಲ್ ನಂಬರ್ ಬದಲಾಯಿಸಿಕೊಂಡು ಮಾತನಾಡಲಾರಂಭಿಸಿದ್ದರು. ದಿನ ಕಳೆದಂತೆ ಇಬ್ಬರ ನಡುವೆ ಪ್ರೀತಿ ಹುಟ್ಟಿಕೊಂಡಿತ್ತು’ ಎಂಬ ಅಂಶವೂ ಇದೆ.
ಮದುವೆ ಆಗು ಎಂದಿದ್ದಕ್ಕೆ ಹತ್ಯೆ:
‘ನಯಾಜ್ ಹಾಗೂ ಸ್ವಾತಿ, ಧರ್ಮ ಬೇರೆ ಬೇರೆ ಎಂಬುದು ಗೊತ್ತಿದ್ದರೂ ಪರಸ್ಪರ ಒಪ್ಪಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಹಲವೆಡೆ ಒಟ್ಟಿಗೆ ಸುತ್ತಾಡಿದ್ದರು. ಇದರ ನಡುವೆಯೇ ನಯಾಜ್‌ಗೆ ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥವಾಗಿತ್ತು. ಈ ಸಂಗತಿ ಗೊತ್ತಾಗುತ್ತಿದ್ದಂತೆ ಸ್ವಾತಿ, ‘ನಾನು ನಿನ್ನನ್ನು ಬಹಳ ಪ್ರೀತಿಸುತ್ತಿದ್ದೇನೆ. ನೀನು ನನ್ನನ್ನು ಮದುವೆಯಾಗಬೇಕು’ ಎಂಬುದಾಗಿ ಪಟ್ಟು ಹಿಡಿದಿದ್ದರು’ ಎಂಬ ಮಾಹಿತಿ ಪಟ್ಟಿಯಲ್ಲಿದೆ.
‘ಮದುವೆಗೆ ನಯಾಜ್ ಒಪ್ಪಿರಲಿಲ್ಲ. ಇದೇ ಸಂಗತಿಯನ್ನು ಸ್ನೇಹಿತರಾದ ದುರ್ಗಾಚಾರಿ ಹಾಗೂ ವಿನಾಯಕನಿಗೆ ತಿಳಿಸಿದ್ದ. ಮೂವರು ಸೇರಿ ಸ್ವಾತಿಯನ್ನು ನೇರವಾಗಿ ಭೇಟಿಯಾಗಿ ಮಾತುಕತೆ ನಡೆಸಲು ಮುಂದಾಗಿದ್ದರು’ ಎಂಬ ಸಂಗತಿ ಪಟ್ಟಿಯಲ್ಲಿದೆ.
‘ಸ್ವಾತಿ ಅವರನ್ನು ರಟ್ಟೀಹಳ್ಳಿಗೆ ಕರೆಸಿದ್ದ ನಯಾಜ್, ಬಾಡಿಗೆ ಕಾರಿನಲ್ಲಿ ರಾಣೆಬೆನ್ನೂರಿನಲ್ಲಿರುವ ಸುವರ್ಣ ಉದ್ಯಾನಕ್ಕೆ ಕರೆದೊಯ್ದಿದ್ದ. ಅದೇ ಉದ್ಯಾನಕ್ಕೆ ದುರ್ಗಾಚಾರಿ ಹಾಗೂ ವಿನಾಯಕ, ಮತ್ತೊಂದು ಕಾರಿನಲ್ಲಿ ಬಂದಿದ್ದರು. ಅಲ್ಲಿಯೂ ಮಾತಿನ ಚಕಮಕಿ ನಡೆದಿತ್ತು. ನಂತರ, ನಾಲ್ವರು ಸೇರಿಕೊಂಡು ರಟ್ಟೀಹಳ್ಳಿಯ ಕಬ್ಬಿಣಕಂತಿಮಠ ಬಳಿಯ ಪಾಳು ಬಿದ್ದ ತರಳಬಾಳು ಶಾಲೆಗೆ ಹೋಗಿದ್ದರು. ಮದುವೆ ವಿಚಾರಕ್ಕೆ ಅಲ್ಲಿಯೂ ಗಲಾಟೆ ಶುರುವಾಗಿತ್ತು.’
‘ನನ್ನ ಜೀವನವನ್ನು ನೀನೇ ಹಾಳು ಮಾಡಿದ್ದಿಯಾ? ಈಗ ಬೇರೆ ಮದುವೆಯಾಗುತ್ತಿದ್ದಿಯಾ? ಅದಕ್ಕೆ ನಾನು ಆಸ್ಪದ ನೀಡುವುದಿಲ್ಲ. ನೀನು ನನ್ನನ್ನೇ ಮದುವೆಯಾಗಬೇಕು’ ಎಂದು ಸ್ವಾತಿ ಪಟ್ಟು ಹಿಡಿದಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು, ಸಂಚಿನಂತೆ ಕುತ್ತಿಗೆಗೆ ಟವಲ್‌ನಿಂದ ಬಿಗಿದು ಉಸಿರುಗಟ್ಟಿಸಿ ಕೊಂದಿದ್ದರು. ನಂತರ, ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಕೂಸಗಟ್ಟಿ ನಂದಿಗುಡಿ ಗ್ರಾಮದ ಬಳಿಯ ತುಂಗಭದ್ರಾ ನದಿಗೆ ಎಸೆದಿದ್ದರು. ಅದೇ ಶವ ತೇಲಿಕೊಂಡು ಪತ್ತೇಪುರ ಬಳಿ ಹೋಗಿತ್ತು’ ಎಂಬ ಮಾಹಿತಿ ಆರೋಪ ಪಟ್ಟಿಯಲ್ಲಿದೆ.
‘ಸ್ವಾತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಲಾಗಿದೆ. ಕೃತ್ಯಕ್ಕೆ ಪ್ರಮುಖ ಪುರಾವೆಗಳು ಲಭ್ಯವಾಗಿವೆ. ಎಲ್ಲವನ್ನೂ ನ್ಯಾಯಾಲಯಕ್ಕೆ ನೀಡಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಡಿಎನ್‌ಎ ಹೋಲಿಕೆ
ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಸ್ವಾತಿ ಮೃತದೇಹ ಪತ್ತೆಯಾಗಿತ್ತು. ಇದೊಂದು ಅಪರಿಚಿತ ಶವವೆಂದು ತಿಳಿದಿದ್ದ ಪೊಲೀಸರು, ಮರಣೋತ್ತರ ಪರೀಕ್ಷೆ ಮಾಡಿಸಿ ತಾವೇ ಅಂತ್ಯಸಂಸ್ಕಾರ ನೆರವೇರಿಸಿದ್ದರು. ವಿಷಯ ತಿಳಿದ ಸಂಬಂಧಿಕರು, ಪೊಲೀಸರ ಕ್ರಮವನ್ನು ಖಂಡಿಸಿದ್ದರು.
‘ನದಿಯಲ್ಲಿ ಸಿಕ್ಕ ಶವ, ಸ್ವಾತಿಯವರದ್ದಾ ? ಎಂಬುದನ್ನು ಪತ್ತೆ ಮಾಡಲು ಡಿಎನ್‌ಎ ಪರೀಕ್ಷೆ ಅಗತ್ಯವಿತ್ತು. ಹೀಗಾಗಿ, ತಾಯಿಯ ಡಿಎನ್‌ಎ ಮಾದರಿಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ಬಂದಿದ್ದು, ಇಬ್ಬರಿಗೂ ಹೋಲಿಕೆಯಾಗಿದೆ. ಈ ಮಾಹಿತಿಯೂ ಆರೋಪ ಪಟ್ಟಿ ಜೊತೆಗಿದೆ’ ಎಂದು ಪೊಲೀಸರು ಹೇಳಿದರು.
ಸ್ವಾತಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಕೃತ್ಯಕ್ಕೆ ಹಲವು ಪುರಾವೆಗಳು ಲಭ್ಯವಾಗಿವೆ. ನಿಗದಿತ ಸಮಯದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.ಲಕ್ಷ್ಮಣ ಶಿರಕೋಳ, ಹೆಚ್ಚುವರಿ ಎಸ್‌ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.