ADVERTISEMENT

ವಾಮಮಾರ್ಗದಿಂದ ಅಧಿಕಾರಕ್ಕೆ ಬಂದ ಬಿಜೆಪಿ

ಮಾಜಿ ಸಚಿವ ಎಚ್‌.ಆಂಜನೇಯ ಆರೋಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 12:07 IST
Last Updated 5 ಡಿಸೆಂಬರ್ 2021, 12:07 IST
ಎಚ್‌.ಆಂಜನೇಯ
ಎಚ್‌.ಆಂಜನೇಯ   

ಹಾವೇರಿ: ‘ರಾಜ್ಯದಲ್ಲಿ ಜನಾದೇಶದಿಂದ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಅನೈತಿಕ ವ್ಯವಸ್ಥೆಯಲ್ಲಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಶಾಸಕರನ್ನು ನಾಯಿ–ನರಿಗಳಂತೆ ಖರೀದಿ ಮಾಡಿ, ಬಾಂಬೆಗೆ ಕರೆದೊಯ್ದು ಸಿನಿಮಾ ಮಾಡಿ, ಅದನ್ನಿಟ್ಟುಕೊಂಡು ಅಧಿಕಾರದ ಗದ್ದುಗೆ ಏರಿದರು’ ಎಂದು ಮಾಜಿ ಸಚಿವ ಎಚ್‌.ಆಂಜನೇಯ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ, ಜನತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ಕೊಳಕು ಮನಸ್ಸಿನವರು ಬಿಜೆಪಿಯವರು. ಜನಪ್ರತಿನಿಧಿಗಳನ್ನೇ ಖರೀದಿ ಮಾಡಿ ಕೆಟ್ಟ ಸಂಪ್ರದಾಯವನ್ನು ರಾಜ್ಯದಲ್ಲಿ ಹುಟ್ಟು ಹಾಕಿದರು. ಅನೈತಿಕ ಸಂಬಂಧ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಸರ್ಕಾರವನ್ನು ‘10% ಸರ್ಕಾರ’ ಎಂದು ಜರಿದಿದ್ದರು. ಆದರೆ, ಗುತ್ತಿಗೆದಾರರೇ ಬಿಜೆಪಿ ಸರ್ಕಾರವನ್ನು ‘40% ಸರ್ಕಾರ’ ಎಂದು ಕರೆದಿದ್ದಾರೆ.ಹಗಲುದರೋಡೆ ಮಾಡುತ್ತಿರುವ ಈ ರೀತಿಯ ಸರ್ಕಾರವನ್ನೇ ನೋಡಿರಲಿಲ್ಲ ಎಂದು ಗುತ್ತಿಗೆದಾರರು ಮೋದಿಗೆ ಪತ್ರ ಬರೆದಿದ್ದಾರೆ.ಆರ್‌ಟಿಜಿಎಸ್‌ ಮೂಲಕ ಲಂಚ ಹೊಡೆದವರು ಬಿಜೆಪಿಯವರು’ ಎಂದು ಆರೋಪಿಸಿದರು.

ADVERTISEMENT

‘ನಮ್ಮ ಕಾಂಗ್ರೆಸ್‌ ಸರ್ಕಾರದಲ್ಲಿ ಯಾವ ಗುತ್ತಿಗೆದಾರನಿಂದಲೂ ನಾವು ಕಮಿಷನ್‌ ಕೇಳುತ್ತಿರಲಿಲ್ಲ. ಕೆಲಸ ಬೇಗ ಮಾಡಿ ಎಂದು ಹೇಳುತ್ತಿದ್ದೆವು. ಈಗ ಗುತ್ತಿಗೆದಾರರು ಶಾಸಕರಿಗೆ ಕೊಡಬೇಕಾದ ದಕ್ಷಿಣೆ ಕೊಟ್ಟು, ನಂತರ ಭೂಮಿಪೂಜೆಗೆ ಹಾರೇಕೋಲು ಹಾಕುವ ಪರಿಸ್ಥಿತಿ ಬಂದಿದೆ’ ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.