ADVERTISEMENT

ಹಾವೇರಿ: ಕೇಂದ್ರದ ವಿರುದ್ಧ ಸಿಐಟಿಯು ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 12:42 IST
Last Updated 26 ನವೆಂಬರ್ 2020, 12:42 IST
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ಗುರುವಾರ ಸಿಐಟಿಯು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು 
ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರ ಬೆಂಬಲಿಸಿ ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ಗುರುವಾರ ಸಿಐಟಿಯು ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು    

ಹಾವೇರಿ: ಕೇಂದ್ರ ಸರ್ಕಾರದ ರೈತ, ಕಾರ್ಮಿಕ ಹಾಗೂ ಜನವಿರೋಧಿ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ, ಸಿಐಟಿಯು ವತಿಯಿಂದ ಗುರುವಾರ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಯಿತು.

ಕೇಂದ್ರ ಬಿಜೆಪಿ ಸರ್ಕಾರವು ಯಾವುದೇ ಕಾನೂನುಗಳನ್ನು ಜಾರಿಗೊಳಿಸುವ ಮೊದಲು ಅದಕ್ಕೆ ಸಂಬಂಧಪಟ್ಟ ಸಮುದಾಯದವರ ಜೊತೆ ಚರ್ಚಿಸದೆ, ಸರ್ವಾಧಿಕಾರಿ ಪ್ರವೃತ್ತಿಯನ್ನು ಪಾಲಿಸುತ್ತಿರುವುದು ಅತ್ಯಂತ ಖಂಡನೀಯ. ಸರ್ಕಾರ ಕೋವಿಡ್-19 ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳ ಗೈರು ಹಾಜರಿಯಲ್ಲಿ ಮೂರು ಕಾರ್ಮಿಕರ ಹಿತಕ್ಕೆ ಧಕ್ಕೆ ತರುವಂತಹ ಕಾರ್ಮಿಕ ಸಂಹಿತೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದೆ ಎಂದು ಸಿಐಟಿಯು ಮುಖಂಡರು ಟೀಕಿಸಿದರು.

‘ಕೊರೊನಾ ವಾರಿಯರ್ಸ್’ಗಳಾದ ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು, ಅಂಗನವಾಡಿ, ಆಶಾ ನೌಕರರು ತಮ್ಮ ಪ್ರಾಣವನ್ನೇ ಅಪಾಯಕ್ಕೆ ಒಡ್ಡಿ ಸ್ಥಳೀಯ ಸಮೀಕ್ಷೆಗಳನ್ನು ನಡೆಸುವಂತೆ ಒತ್ತಡ ಹೇರಲಾಗುತ್ತಿದೆ. ಅವರಿಗೆ ಭರವಸೆ ನೀಡಿದ್ದ ಹಣಕಾಸು ಮತ್ತು ವಿಮಾ ಸೌಲಭ್ಯಗಳನ್ನು ನೀಡದೇ ಬೇಜವಾಬ್ದಾರಿಯಾಗಿ ಸರ್ಕಾರ ವರ್ತಿಸುತ್ತಿದೆ. ಬಂಡವಾಳಶಾಹಿಗಳು ಸಾಂಕ್ರಾಮಿಕ ರೋಗದ ಸಂದರ್ಭ ಪ್ರತಿ ದಿನವೂ ತಮ್ಮ ಮಾರುಕಟ್ಟೆಯ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ, ರೈತ-ವಿರೋಧಿ ಮತ್ತು ರಾಷ್ಟ್ರ ವಿರೋಧಿ ಎಂದು ಬಲವಾಗಿ ಖಂಡಿಸುತ್ತದೆ.ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟವು ರೈತರ ಹೋರಾಟಕ್ಕೆ ಎಲ್ಲಾ ರೀತಿಯಲ್ಲೂ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸುತ್ತದೆ ಎಂದು ಘೋಷಿಸುತ್ತದೆ ಎಂದರು.

ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯದ ಮೀಸಲಾತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಒತ್ತಾಯಿಸಿ ಹಲವಾರು ದಲಿತ ಸಂಘಟನೆಗಳೂ ಮುಷ್ಕರವನ್ನು ಬೆಂಬಲಿಸಿ ಭಾಗವಹಿಸುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯ ಸರ್ಕಾರಕ್ಕೂ ನವೆಂಬರ್ 26ರ ಈ ಮುಷ್ಕರ ಒಂದು ಎಚ್ಚರಿಕೆಯ ಗಂಟೆಯಾಗಲಿದೆ ಎಂದರು.

ಹೊನ್ನಪ್ಪ ಮರೆಮ್ಮನವರ, ವಿನಾಯಕ ಕುರುಬರ, ಜೆ.ಡಿ. ಪೂಜಾರ, ಬಸವರಾಜ ಪೂಜಾರ, ಬಸವರಾಜ ಭೋವಿ, ಅಂದಾನೆಪ್ಪ ಹೆಬಸೂರ, ಶ್ರೀಕಾಂತ ಬಾರ್ಕಿ, ಹೇಮಾ ಅಸಾದಿ, ಹೇಮಾವತಿ ಎಲಿ. ದೊಡ್ಡಪ್ಪ ಬೋಳಕಟ್ಟಿ ಪರಮೇಶ ಪುರದ, ಚಂದ್ರು ಬೆನಕನಹಳ್ಳಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.