ADVERTISEMENT

ಹಾವೇರಿ: ಆಜಾದ್‌ ನಗರ; ಸಮಸ್ಯೆಗಳ ಆಗರ

ತಿಳವಳ್ಳಿ: ಹದಗೆಟ್ಟ ರಸ್ತೆ, ಚರಂಡಿ ದುರಸ್ತಿಗೆ ನಿವಾಸಿಗಳ ಒಕ್ಕೊರಲ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜುಲೈ 2021, 19:30 IST
Last Updated 6 ಜುಲೈ 2021, 19:30 IST
ಆಜಾದ್ ನಗರದಲ್ಲಿರುವ ಚರಂಡಿ ಸೂಕ್ತ ನಿರ್ವಹಣೆ ಇಲ್ಲದೆ, ಹೂಳು ತುಂಬಿಕೊಂಡಿದೆ 
ಆಜಾದ್ ನಗರದಲ್ಲಿರುವ ಚರಂಡಿ ಸೂಕ್ತ ನಿರ್ವಹಣೆ ಇಲ್ಲದೆ, ಹೂಳು ತುಂಬಿಕೊಂಡಿದೆ    

ತಿಳವಳ್ಳಿ: ಗ್ರಾಮದ 5ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಆಜಾದ್ ನಗರದಲ್ಲಿ ರಸ್ತೆ, ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಈ ನಗರದಲ್ಲಿ ಮುಸ್ಲಿಂ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಇತರೆ ವರ್ಗದ ನೂರಾರು ಕುಟುಂಬಗಳು ವಾಸಿಸುತ್ತಿವೆ. 10 ವರ್ಷಗಳಿಂದ ಇಲ್ಲಿಯವರೆಗೂ ಈ ಪ್ರದೇಶ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವ ಪ್ರಯೋಜನವೂ ಆಗಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಫೈರೋಜ್‌ ಮೂಡಿ.

ಹದಗೆಟ್ಟ ರಸ್ತೆಗಳು:ಇತ್ತೀಚೆಗೆ ಅಲ್ಪಸಂಖ್ಯಾತರ ಅನುದಾನದಲ್ಲಿ 100 ಮೀಟರ್ ಸಿಸಿ ರಸ್ತೆ ನಿರ್ಮಾಣವಾಗಿದೆ. ಆದರೆ ಉಳಿದ ರಸ್ತೆಗಳು ಮಣ್ಣಿನಿಂದ ಕೂಡಿದ್ದು, ಮಳೆಗಾಲದಲ್ಲಿ ಮಳೆಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ಚರಂಡಿಯಾಗಿ ಮಾರ್ಪಟ್ಟಿದೆ. ರಸ್ತೆಯ ತುಂಬೆಲ್ಲ ತಗ್ಗು ದಿಣ್ಣೆಗಳು ನಿರ್ಮಾಣವಾಗಿವೆ. ತ್ಯಾಜ್ಯ ನೀರು ಸಂಗ್ರಹಗೊಳ್ಳುತ್ತಿದೆ. ಮಕ್ಕಳು ಮತ್ತು ವೃದ್ಧರು ಬಿದ್ದು, ಗಾಯಗಳಾದ ಘಟನೆ ನಡೆದಿವೆ.

ADVERTISEMENT

ಚರಂಡಿ ದುರಸ್ತಿಪಡಿಸಿ:ರಸ್ತೆಯ ಎರಡೂ ಬದಿಯಲ್ಲಿ ಇರುವ ಚರಂಡಿಗಳು ಅವ್ಯವಸ್ಥೆಯಿಂದ ಕೂಡಿದ್ದು, ಚರಂಡಿ ನೀರು ಸರಾಗವಾಗಿ ಹರಿಯದೇ ಇರುವುದರಿಂದ ರಸ್ತೆಯ ಮೇಲೆ ಕೊಳಚೆ ನೀರು ನಿಲ್ಲುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸದೇ ಇರುವುದರಿಂದ ಜನರಿಗೆ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ ಎಂದು ನಿವಾಸಿ ನಯಾಜುದ್ದೀನ್ ಸರಖಾಜಿ ಆರೋಪಿಸಿದ್ದಾರೆ.

ಸಾಂಕ್ರಾಮಿಕ ರೋಗದ ಭೀತಿ:ಆಜಾದ್ ನಗರದಲ್ಲಿ ಸ್ವಚ್ಛತೆ ಎನ್ನುವುದು ಮಾಯವಾಗಿದ್ದು, ಗ್ರಾಮ ಪಂಚಾಯ್ತಿಗಳಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಸೊಳ್ಳೆಗಳು ಹೆಚ್ಚಾಗಿರುವುದರಿಂದ ಚಿಕುನ್‌ಗುನ್ಯಾ, ಡೆಂಗಿ, ವಿಷಮಶೀತ ಜ್ವರ ಹಾಗೂ ಮಲೇರಿಯಾದಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕೊರೊನಾ ಕಾಲದಲ್ಲಿ ಕೆಮ್ಮು, ಜ್ವರ ಬಂದರೆ ಅನುಮಾನದಿಂದ ನೋಡುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು.

ಹದಗೆಟ್ಟ ರಸ್ತೆ, ಅಸಮರ್ಪಕ ಚರಂಡಿ ಸಮಸ್ಯೆ ಬಗ್ಗೆ ಕೂಡಲೇ ಗಮನಹರಿಸಬೇಕು. ಬಡಾವಣೆಯಲ್ಲಿ ನೈರ್ಮಲ್ಯ ವಾತಾವರಣ ಸೃಷ್ಟಿಸಲು ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಬೇಕು. ನಾಗರಿಕರ ಸಮಸ್ಯೆಗಳಿಗೆ ಸಂಬಂಧಪಟ್ಟವರು ಕೂಡಲೇ ಸ್ಪಂದಿಸಬೇಕು ಎಂದು ನಿವಾಸಿಗಳು ಆಗ್ರಹಿಸಿದರು.

**

ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಹಾಗೂ ಚರಂಡಿ ದುರಸ್ತಿ ಕೆಲಸ ಆರಂಭಿಸಲಾಗುವುದು.
-ರಾಜು ನಾರಾಯಣಿ, ಪಿಡಿಒ, ತಿಳವಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.