ADVERTISEMENT

ಮನೆ–ಮನಗಳಲ್ಲಿ ಪ್ರಜ್ವಲಿಸಿದ ರಾಷ್ಟ್ರಾಭಿಮಾನ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಭಾತ್‌ ಪೇರಿಗೆ ಶಾಸಕ ನೆಹರು ಓಲೇಕಾರ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 13:30 IST
Last Updated 13 ಆಗಸ್ಟ್ 2022, 13:30 IST
ಹಾವೇರಿಯಲ್ಲಿ ಶನಿವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು   
ಹಾವೇರಿಯಲ್ಲಿ ಶನಿವಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು      

ಹಾವೇರಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಇಂದಿನಿಂದ ಮೂರು ದಿನಗಳ ಕಾಲ ‘ಹರ್ ಘರ್ ತಿರಂಗಾ’ ಕಾರ್ಯಕ್ರಮದ ಜಾಗೃತಿಗೆ ಹಮ್ಮಿಕೊಂಡಿರುವ ಪ್ರಭಾತ್‌ ಪೇರಿಗೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.

ನಗರದ ಪುರಸಿದ್ದೇಶ್ವರ ದೇವಾಲಯದ ಆವರಣದಿಂದ ಚಾಲನೆಗೊಂಡ ಪ್ರಭಾತ್‌ ಪೇರಿಯಲ್ಲಿ ನಗರದ ವಿವಿಧ ಶಾಲೆಗಳಿಂದ ಆಗಮಿಸಿದ ಸಾವಿರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜ ಹಿಡಿದು ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ ಅಂತಿಮವಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸಮಾವೇಶಗೊಂಡಿತು.

ಸಮವಸ್ತ್ರ ಧರಿಸಿ ಪ್ರತಿಯೊಬ್ಬ ವಿದ್ಯಾರ್ಥಿಯೂ ರಾಷ್ಟ್ರಧ್ವಜ ಹಿಡಿದು ಭಾರತ ಮಾತೆಯ ಉದ್ಘೋಷಗಳೊಂದಿಗೆ ಬೀದಿಗಳಲ್ಲಿ ನದಿಯಂತೆ ಹರಿದರು. ನಗರದ ಒಂದು ಕಿ.ಮೀ. ಉದ್ದಕ್ಕೂ ಅಧಿಕವಾಗಿ ಹರಡಿದ ಸರದಿ ಸಾಲುಗಳಲ್ಲಿ ಕೇಸರಿ ಬಿಳಿ ಹಸಿರು ಬಣ್ಣಗಳಿಂದ ತುಂಬಿ ನೋಡುಗರನ್ನು ರೋಮಾಂಚನಗೊಳಿಸಿತು. ಶಾಲಾ ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿ ಸಮೂಹದ ದೇಶಭಕ್ತಿಯ ಘೋಷಣೆಗಳು ಸಾಗರದ ಅಲೆಯಂತೆ ಅಪ್ಪಳಿಸಿ ದೇಶಪ್ರೇಮದ ಸಾಗರದಲ್ಲಿ ಜನಸಮೂಹವನ್ನು ಮಿಂದೇಳಿಸಿತು.

ADVERTISEMENT

ನಗರದ ಗಲ್ಲಿ ಗಲ್ಲಿಗಳಲ್ಲಿ ತಿರಂಗಾ ಹಿಡಿದು ರಾಷ್ಟ್ರಪ್ರೇಮವನ್ನು ಮನದುಂಬಿಸಿಕೊಂಡ ವಿದ್ಯಾರ್ಥಿ ಸಮೂಹಗಳ ಚಿತ್ತಾಕರ್ಷಕ ನಡಿಗೆಯ ಜೊತೆಗೆ ಮನೆ ಮನೆಗಳಲ್ಲಿ ತಿರಂಗಾದ ಅನಾವರಣ ರಾಷ್ಟ್ರಪ್ರೇಮದ ಉಜ್ವಲತೆಯನ್ನು ಸ್ವಾಗತಿಸುವಂತಿತ್ತು. ಜಿಲ್ಲಾಡಳಿತದಿಂದ ಆಯೋಜಿಸಲಾದ ಮೂರು ದಿನಗಳ ಕಾರ್ಯಕ್ರಮ ಮೊದಲ ದಿನವೇ ಪ್ರತಿ ಮನ ಮತ್ತು ಮನೆಗಳಲ್ಲಿ ರಾಷ್ಟ್ರಾಭಿಮಾನ ಪ್ರಜ್ವಲಿಸಲು ಕಾರಣವಾಯಿತು.

ಪ್ರಭಾತ್‌ಪೇರಿಯ ಮುನ್ನ ಎಲ್ಲಾ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು. ಎರಡನೇ ದಿನವಾದ ಆ.14ರ ಭಾನುವಾರ ಬೆಳಿಗ್ಗೆ 8.15ಕ್ಕೆ ಜಿ.ಎಚ್ ಕಾಲೇಜ್ ಆವರಣದಿಂದ ಹಾಗೂ ಮೂರನೇ ದಿನವಾದ ಆಗಸ್ಟ್ 15ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ಮೈಲಾರ ಮಹದೇವಪ್ಪ ವೃತ್ತದಿಂದ ಪ್ರಭಾತ್‌ ಪೇರಿ ಆರಂಭಗೊಳ್ಳಲಿದೆ.

ಪ್ರಭಾತ್‌ ಪೇರಿಯಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್‌ಗಿರೀಶ ಸ್ವಾದಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.