ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಮನೋಜ್ ಪ್ರಕಾಶ ಉಡಗಣಿ (28) ಕೊಲೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಹಾನಗಲ್ ಠಾಣೆ ಪೊಲೀಸರು ಬಂಧಿಸಿದ್ದು, ಮೂವರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಹಾವೇರಿಯ ಅಶ್ವಿನಿನಗರದ ಶಿವರಾಜ ವಿರೇಶ ಜಾಲವಡಗಿ (32), ನಾಗನೂರಿನ ಬಸವರಾಜ ಬೈಲಪ್ಪ ಓಂಕಾರಣ್ಣನವರ (35) ಹಾಗೂ ಹಿರೇಲಿಂಗದಹಳ್ಳಿಯ ವಿರೇಶ ಪರಮೇಶಪ್ಪ ಪೂಜಾರ (24) ಬಂಧಿತ ಆರೋಪಿಗಳು.
‘ಜುಲೈ 25ರಂದು ನಾಪತ್ತೆಯಾಗಿದ್ದ ಮನೋಜ್ ಮೃತದೇಹ ಸವಣೂರು ತಾಲ್ಲೂಕಿನ ಮೆಳ್ಳಾಗಟ್ಟಿ ಬಳಿ ಪತ್ತೆಯಾಗಿತ್ತು. ಮನೋಜ್ ಅವರ ತಂದೆ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿ, ಪ್ರಮುಖ ಆರೋಪಿ ಶಿವರಾಜ ಸೇರಿದಂತೆ ಮೂವರನ್ನು ಬಂಧಿಸಲಾಯಿತು. ವಿಚಾರಣೆ ನಡೆಸಿದಾಗ ಇದು ಕೊಲೆ ಎಂಬುದು ಗೊತ್ತಾಯಿತು’ ಎಂದು ಪೊಲೀಸರು ಹೇಳಿದರು.
‘ತನ್ನ ಪತ್ನಿ ಜೊತೆ ಮನೋಜ್ ಸಲುಗೆ ಇಟ್ಟುಕೊಂಡಿದ್ದಾನೆಂದು ತಿಳಿದಿದ್ದ ಶಿವರಾಜ್, ಜೀವ ಬೆದರಿಕೆಯೊಡ್ಡಿದ್ದ. ಆಕೆಯ ತಂಟೆಗೆ ಹೋಗದಂತೆ ತಾಕೀತು ಮಾಡಿದ್ದ. ಇದಾದ ಕೆಲವೇ ದಿನಗಳಲ್ಲಿ ಮನೋಜ್ ಅವರನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ’ ಎಂದು ವಿವರಿಸಿದರು.
‘ಮನೋಜ್ ಹಾಗೂ ಶಿವರಾಜ ನಡುವೆ ಸ್ನೇಹವಿತ್ತು. ಹಣಕಾಸಿನ ವ್ಯವಹಾರವೂ ಇತ್ತೆಂಬ ಮಾಹಿತಿ ಇದ್ದು, ಈ ಬಗ್ಗೆ ಪುರಾವೆ ಕಲೆಹಾಕಲಾಗುತ್ತಿದೆ’ ಎಂದರು.
‘ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಪಿಐ ಅರುಣಕುಮಾರ ರಾಠೋಡ ಹಾಗೂ ಪಿಎಸ್‌ಐ ಸಂಪತ್ ಆನಿಕಿವಿ ನೇತೃತ್ವದ ತಂಡ, ಕೆಲ ಪುರಾವೆಗಳ ಮೂಲಕ ಕೊಲೆ ಎಂಬ ಸುಳಿವು ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.
‘ಕಾರಿನಲ್ಲಿ ಅಪಹರಣ’
‘ಮನೋಜ್ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಶಿವರಾಜ್ ತನ್ನ ಪರಿಚಯಸ್ಥ ಚಾಲಕರಾದ ಬಸವರಾಜ ಹಾಗೂ ವಿರೇಶ ಅವರ ಸಹಾಯ ಪಡೆದಿದ್ದ. ಸಂಚಿನ ಭಾಗವಾಗಿ ಆರೋಪಿಗಳು ವಾರದಿಂದ ಮನೋಜ್ ಅವರನ್ನು ಹಿಂಬಾಲಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಶಿಗ್ಗಾವಿ ತಾಲ್ಲೂಕಿನ ಲಕ್ಕಿಕೊಪ್ಪದಲ್ಲಿ ದಾಬಾ ನಡೆಸುತ್ತಿದ್ದ ಮನೋಜ್ ಬೊಮ್ಮನಹಳ್ಳಿಯಿಂದ ನಿತ್ಯವೂ ಓಡಾಡುತ್ತಿದ್ದರು. ಅವರನ್ನು ಆರೋಪಿಗಳು ಹಿಂಬಾಲಿಸಿದ್ದರು. ಜುಲೈ 25ರಂದು ಕಾರಿನ ಸಮೇತ ದಾಬಾ ಬಳಿ ಹೋಗಿದ್ದ ಆರೋಪಿಗಳು ಮನೋಜ್ ಅವರನ್ನು ಅಪಹರಿಸಿದ್ದರು. ನಂತರ ಹಿರೇಲಿಂಗದಹಳ್ಳಿಯಲ್ಲಿರುವ ಶಿವರಾಜ್ ಅವರ ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದರು. ನಮ್ಮ ನಡುವೆ ಜಗಳ ಬೇಡವೆಂದು ಹೇಳಿದ್ದ ಆರೋಪಿಗಳು ಅಲ್ಲಿಯೇ ಮನೋಜ್‌ಗೆ ಮದ್ಯ ಕುಡಿಸಿದ್ದರು. ನಶೆ ಏರಿದ ನಂತರ ಕಾರಿನಲ್ಲಿ ಹತ್ತಿಸಿಕೊಂಡು ಬಂದು ಕುಣಿಮೆಳ್ಳಿಹಳ್ಳಿ ಬಳಿ ವರದಾ ನದಿಗೆ ತಳ್ಳಿದ್ದರು ಎಂಬುದು ಸದ್ಯದ ಪುರಾವೆಗಳಿಂದ ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.