ತಿಳವಳ್ಳಿ: ‘ಎಲ್ಲರೂ ಅರಣ್ಯ ಹಾಗೂ ಅರಣ್ಯ ಉತ್ಪನ್ನ ಬಳಸಿಕೊಳ್ಳುವತ್ತ ಗಮನ ಹರಿಸುವ ಬದಲು, ಉಳಿಸುವತ್ತಲೂ ಚಿತ್ತ ಹರಿಸಬೇಕು’ ಎಂದು ಶಾಂತೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸೋಮನಾಥ ಬಾಬರ ಕಿವಿಮಾತು ಹೇಳಿದರು.
ಇಲ್ಲಿಯ ಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಗುರುವಾರ ಗಿಡ ನೆಡುವುದರ ಮೂಲಕ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಉರುವಲು, ಕೃಷಿ ಮತ್ತಿತರ ಕಾರಣಗಳಿಗಾಗಿ ನಿರಂರತವಾಗಿ ಅರಣ್ಯ ನಾಶ ಮಾಡಲಾಗಿದೆ. ಇದು ಪರಿಸರ ಸಮತೋಲನದ ಮೇಲೆ ಪರಿಣಾಮ ಬೀರಿದೆ. ಹಲವು ಪ್ರಭೇದಗಳ ಕಾಡು ಪ್ರಾಣಿ, ಪಕ್ಷಿಗಳಿಗೆ ನೆಲೆ ಇಲ್ಲದೇ ವಿನಾಶದತ್ತ ಸಾಗಿವೆ. ಕಾಡು ನಾಶದ ಪರಿಣಾಮ ಪರಿಸರ ಕಲ್ಮಶವಾಗುತ್ತಿದೆ. ಶುದ್ಧ ಗಾಳಿ, ಸಮೃದ್ಧ ಮಳೆಯ ಕೊರತೆಯಾಗಿದೆ. ಇದು ಆಹಾರ ಭದ್ರತೆಗೂ ಅಪಾಯ ತಂದೊಡ್ಡಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಕ ಮಹೇಶ ಗುರು ಮಾತನಾಡಿ, ‘ಭೂಮಿ ಮೇಲೆ ಶೇ 33ರಷ್ಟು ಅರಣ್ಯ ಇರಬೇಕಿತ್ತು. ಆದರೆ ಇಂದು ಕೇವಲ ಶೇ 18ರಷ್ಟಿದೆ. ಆದ್ದರಿಂದ ಕಾಲಕಾಲಕ್ಕೆ ಮಳೆಯಾಗದೆ ದಿನದಿಂದ ದಿನಕ್ಕೆ ಪರಿಸರದಲ್ಲಿ ಭಾರಿ ವ್ಯತ್ಯಾಸವನ್ನು ಕಾಣುತ್ತಿದ್ದೇವೆ’ ಎಂದು ಹೇಳಿದರು.
ಶಿಕ್ಷಕಿ ಭಾರತಿ ಗುಡ್ಡದಮತ್ತಿಹಳ್ಳಿ, ದಿಲೀಪ ಪಾರ್ಥನಳ್ಳಿ, ವಿಶ್ವನಾಥ ಗೋಡಿ, ರವಿ ಲಮಾಣಿ, ಮಂಜುನಾಥ ಕಮಾಟಿ, ರೇಣುಕಾ ಪತ್ತೇಪುರ, ಮುಸ್ಕಾನ್ ಲಾಲಖಾನವರ, ಸುಭಾಸ ದೊಡ್ಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.