ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಗಡಿ ಭಾಗದಲ್ಲಿರುವ ತಿಳವಳ್ಳಿ ಗ್ರಾಮದ ಬಹುತೇಕ ರಸ್ತೆಗಳು ತಗ್ಗು–ಗುಂಡಿಗಳು ಬಿದ್ದು ಹದಗೆಟ್ಟಿದ್ದು, ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿರುವುದರಿಂದ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ತಾಲ್ಲೂಕು ಕೇಂದ್ರ ಹಾನಗಲ್‌ನಿಂದ 24 ಕಿ.ಮೀ. ದೂರದಲ್ಲಿರುವ ತಿಳವಳ್ಳಿ ಗ್ರಾಮದ ಮಾರ್ಗವಾಗಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಗ್ರಾಮಕ್ಕೆ ಹೊಂದಿಕೊಂಡು ದೊಡ್ಡಕೆರೆಯಿದ್ದು, ಈ ಕೆರೆಯ ದಡದಲ್ಲಿರುವ ರಸ್ತೆಯೂ ತೀರಾ ಹದಗೆಟ್ಟಿದೆ. ಹಾನಗಲ್ ರಸ್ತೆಯಲ್ಲಿರುವ ತಿಳವಳ್ಳಿ ಬಸ್ ನಿಲ್ದಾಣ ಎದುರಿನ ರಸ್ತೆಯ ಸ್ಥಿತಿ ಶೋಚನೀಯವಾಗಿದೆ. ಇಡೀ ಡಾಂಬರ್ ಕಿತ್ತುಹೋಗಿ, ಮಣ್ಣು ಹೊರಗೆ ಬಂದು ತಗ್ಗು ಬಿದ್ದಿವೆ.
ಬಸ್ ನಿಲ್ದಾಣ ಎದುರೇ ಗುಂಡಿಗಳು ಬಿದ್ದಿದ್ದು, ನೀರು ನಿಂತುಕೊಂಡಿದೆ. ಈ ರಸ್ತೆಯಲ್ಲಿ ಸಾಗುವಾಗ ಹಲವು ಬೈಕ್ ಸವಾರರು, ಆಯತಪ್ಪಿ ಬಿದ್ದು ಗಾಯ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ನಿಲ್ದಾಣ ಬಳಿಯೇ ನಾಯರ್ ಪೆಟ್ರೋಲ್ ಬಂಕ್ ಇದ್ದು, ಅದರ ಎದರಿನ ರಸ್ತೆಯಂತೂ ತೀರಾ ಹದಗೆಟ್ಟಿದೆ. ಡಾಂಬರ್ ಮಾಯವಾಗಿ, ಗುಡ್ಡುಗಾಡು ಪ್ರದೇಶದ ರಸ್ತೆಯಂತೆ ಗೋಚರಿಸುತ್ತಿದೆ.
ಬೊಲೆರೊ ವಾಹನವೊಂದು ಗುರುವಾರ ತಗ್ಗಿನಲ್ಲಿ ಸಿಲುಕಿಕೊಂಡಿತ್ತು. ಸ್ಥಳಿಯರೇ ಸಹಾಯಕ್ಕೆ ಹೋಗಿ, ವಾಹನವನ್ನು ಮೇಲಕ್ಕೆ ಎತ್ತಿ ಕಳುಹಿಸಿದ್ದಾರೆ.
ಹದಗೆಟ್ಟ ರಸ್ತೆ ಬಗ್ಗೆ ಗೊತ್ತಿರುವ ಚಾಲಕರು, ರಸ್ತೆಯ ಪಕ್ಕದಲ್ಲಿರುವ ಪೆಟ್ರೋಲ್ ಬಂಕ್ ಜಾಗದಿಂದ ಸಂಚರಿಸುತ್ತಿದ್ದಾರೆ. ರಸ್ತೆ ಹದಗೆಟ್ಟಿರುವುದರಿಂದ ಬಂಕ್ ಸಿಬ್ಬಂದಿಗೂ ಕಿರಿಕಿರಿ ಉಂಟಾಗುತ್ತಿದೆ. ರೈತರು ಕೃಷಿ ಉತ್ಪನ್ನವನ್ನು ಹೊಲದಿಂದ ಮನೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಗುಂಡಿಗಳಿಂದಾಗಿ ರಸ್ತೆಯಲ್ಲಿಯೇ ಕೃಷಿ ಉತ್ಪನ್ನಗಳು ಬಿದ್ದು ಚಿಲ್ಲಾಪಿಲ್ಲಿಯಾಗುತ್ತಿವೆ.
‘ರಸ್ತೆ ಹದಗೆಟ್ಟರೂ ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಮಾಡುತ್ತಿಲ್ಲ. ಹೊಸ ರಸ್ತೆ ಮಾಡಿಸುವುದಾಗಿ ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ಇದರಿಂದಾಗಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿದ್ದು, ನಾವೇ ವಾಹನಗಳನ್ನು ಮೇಲಕ್ಕೆ ಎತ್ತಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ರಬ್ಬಾನಿ ನಾಶಿಪುಡಿ ಹೇಳಿದರು.
‘ಹಗಲಿಗಿಂತ ರಾತ್ರಿ ವೇಳೆ ಹೆಚ್ಚು ವಾಹನಗಳು ತಗ್ಗಿನಲ್ಲಿ ಸಿಲುಕಿಕೊಳ್ಳುತ್ತಿವೆ. ಬೈಕ್‌ಗಳು ಉರುಳಿ ಬೀಳುತ್ತಿವೆ. ಮಕ್ಕಳು, ವೃದ್ಧರು, ದೊಡ್ಡವರು ಗಾಯಗೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ’ ಎಂದರು.
ತಿಳವಳ್ಳಿ ಸಾಕಷ್ಟು ಸೌಲಭ್ಯಗಳಿಂದ ವಂಚಿತರಾಗಿರುವುದರಿಂದ, ಇಲ್ಲಿಯ ಜನರು ಪ್ರತ್ಯೇಕ ತಾಲ್ಲೂಕಿಗಾಗಿ ಹೋರಾಟ ನಡೆಸುತ್ತಿದ್ದಾರೆ.
ಈ ಬಗ್ಗೆ ಹೇಳಿಕೆ ಪಡೆಯಲು ಅಧಿಕಾರಿಗಳಿಗೆ ಕರೆ ಮಾಡಲು ಮುಂದಾದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ತಿಳವಳ್ಳಿ ಸುತ್ತಮುತ್ತಲಿನ ರಸ್ತೆಯನ್ನು ದುರಸ್ತಿ ಮಾಡಿಸಬೇಕು. ಹೊಸ ರಸ್ತೆಯನ್ನಾದರೂ ಗುಣಮಟ್ಟದಿಂದ ಮಾಡಬೇಕು. ಜನರು ಪ್ರತಿಭಟನೆ ನಡೆಸುವ ಮುನ್ನವೇ ಜನಪ್ರತಿನಿಧಿಗಳು ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕು.– ಇರ್ಷಾದ್, ತಿಳವಳ್ಳಿ ಗ್ರಾಮಸ್ಥ
ಮಳೆಗಾಲದಲ್ಲಿ ಡಾಂಬರೀಕರಣ: ಕಳಪೆ ಆರೋಪ
‘ತಿಳವಳ್ಳಿಯಿಂದ ಹೊಂಕಣ ಮಾರ್ಗವಾಗಿ ಹಾನಗಲ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆಲವು ಕಡೆಗಳಲ್ಲಿ ಸೇತುವೆಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಹೊಸದಾಗಿ ಡಾಂಬರೀಕರಣ ಮಾಡಲಾಗುತ್ತಿದೆ. ಆದರೆ ಇದೆಲ್ಲವೂ ಮಳೆಗಾಲದಲ್ಲಿಯೇ ನಡೆಯುತ್ತಿದೆ. ನಿರಂತರ ಮಳೆಯಿಂದಾಗಿ ಸೇತುವೆ ಬಳಿ ಕೆಸರು ಹೆಚ್ಚಾಗಿದೆ. ಡಾಂಬರ್ ಸಹ ಕಿತ್ತು ಹೋಗುತ್ತಿದೆ. ಕಾಮಗಾರಿ ಕಳಪೆಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ’ ಎಂದು ಸ್ಥಳೀಯರು ಆರೋಪಿಸಿದರು.
‘ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿಲ್ಲ. ಮುಂಬರುವ ದಿನಗಳಲ್ಲಿ ಇಡೀ ರಸ್ತೆ ಗುಂಡಿಮಯವಾಗುತ್ತದೆ. ಇನ್ನಾದರೂ ಎಚ್ಚೆತ್ತುಕೊಂಡು ಕಾಮಗಾರಿ ಪರಿಶೀಲಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.