ADVERTISEMENT

ತಿಳವಳ್ಳಿ: ಸಾರಿಗೆ ಬಸ್‌ಗಳಿಲ್ಲದೇ ವಿದ್ಯಾರ್ಥಿಗಳ ಪರದಾಟ

ತಿಳವಳ್ಳಿಯಿಂದ ಆನವಟ್ಟಿಗೆ ನಿತ್ಯ 150 ವಿದ್ಯಾರ್ಥಿಗಳ ಸಂಚಾರ: ಖಾಸಗಿ ವಾಹನಗಳೇ ದಿಕ್ಕು

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 19:30 IST
Last Updated 26 ಜುಲೈ 2022, 19:30 IST
ತಿಳವಳ್ಳಿ ಭಾಗದ ಜನರು ದೂರದ ಊರುಗಳಿಗೆ ಸಂಚರಿಸಲು ಸಾರಿಗೆ ಬಸ್‌ಗಳಿಲ್ಲದ ಕಾರಣ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ 
ತಿಳವಳ್ಳಿ ಭಾಗದ ಜನರು ದೂರದ ಊರುಗಳಿಗೆ ಸಂಚರಿಸಲು ಸಾರಿಗೆ ಬಸ್‌ಗಳಿಲ್ಲದ ಕಾರಣ ಖಾಸಗಿ ವಾಹನಗಳನ್ನು ಅವಲಂಬಿಸಿದ್ದಾರೆ    

ತಿಳವಳ್ಳಿ: ಕೋವಿಡ್ ಲಾಕಡೌನ್‌ ಮುಗಿದು ತಿಂಗಳುಗಳೇ ಕಳೆದರೂ ಸಾರಿಗೆ ಸಂಸ್ಥೆಯ ಬಸ್‌ಗಳು ಪೂರ್ಣ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ. ಗ್ರಾಮೀಣ ಭಾಗದ ಜನರಿಗೆ ಬಸ್‌ ಸೇವೆ ಮರೀಚಿಕೆಯಾಗುತ್ತಿದೆ.

ಶಾಲಾ-ಕಾಲೇಜು ಆರಂಭವಾದರೂ ಸಮರ್ಪಕ ಬಸ್‌ ಸೇವೆ ಇಲ್ಲದೇ ಇರುವುದರಿಂದ ತಿಳವಳ್ಳಿ ಭಾಗದ ‍ವಿದ್ಯಾರ್ಥಿಗಳು, ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ತಿಳವಳ್ಳಿ ಕೇಂದ್ರದಿಂದ ಆನವಟ್ಟಿ, ಕೂಸನೂರು, ಅಕ್ಕಿಆಲೂರು, ಹಾನಗಲ್‌ಗೆ ದಿನ ನಿತ್ಯ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಹೋಗುತ್ತಾರೆ. ಆದರೆ ಇವರಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ವಾಹನಗಳ ಮೂಲಕ ಹೋಗುವ ಸ್ಥಿತಿ ನಿರ್ಮಾಣವಾಗಿದೆ.

ಆನವಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಗೆ ಹಾಗೂ ಇತರೆ ಖಾಸಗಿ ಶಾಲೆಗಳಿಗೆ ತಿಳವಳ್ಳಿಯಿಂದ ಸುಮಾರು 150 ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದರೆ, ಅವರಿಗೆ ತಿಳವಳ್ಳಿಯಿಂದ ಆನವಟ್ಟಿಯ ಕಡೆಗೆ ಹೋಗಲು ಒಂದೇ ಒಂದು ಸರ್ಕಾರಿ ಬಸ್ ಇಲ್ಲದಿರುವುದರಿಂದ ಅವರು ಹೆಚ್ಚಿನ ಹಣ ವ್ಯಯಿಸಿ ಖಾಸಗಿ ಬಸ್ ಮುಖಾಂತರ ಹೋಗಬೇಕಾಗಿದೆ.

ADVERTISEMENT

‘ಈ ಕಾರಣಕ್ಕಾಗಿ ಆನವಟ್ಟಿಯ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು ತಿಳವಳ್ಳಿ ಮತ್ತು ಆನವಟ್ಟಿ ಮಧ್ಯೆ ಬಸ್ ಬಿಡುವಂತೆ ಸಾಗರ ಹಾಗೂ ಹಾವೇರಿ ಡಿಪೋಗೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎನ್ನುತ್ತಾರೆ ವಾಸು ಪವಾರ.

ಸಾರ್ವಜನಿಕರ ಪರದಾಟ:

‘1980-85ರಲ್ಲಿ ಈ ಭಾಗಕ್ಕೆ ಬೆಂಗಳೂರಿಗೆ 4, ಹುಬ್ಬಳ್ಳಿಗೆ 6, ಶಿರಸಿ ಮತ್ತು ದಾವಣಗೆರೆಗೆ 8, ರಾಣೆಬೆನ್ನೂರಿನಿಂದ ವಸತಿ ಬಸ್‌ಗಳೇ ಮೂರು ಬರುತ್ತಿದ್ದವು. ಆದರೇ ಈಗ ಅರ್ಧದಷ್ಟು ಬಸ್‌ಗಳು ಬರುತ್ತಿಲ್ಲ. ದೂರದ ಬೆಂಗಳೂರು, ಪಕ್ಕದ ಶಿರಸಿಗೆ ಹುಬ್ಬಳ್ಳಿಗೆ ದಿನಕ್ಕೆ ಒಂದೇ ಬಸ್. ದಾವಣಗೆರೆಗೆ ಎರಡು ಬಸ್‌ಗಳಿದ್ದರೆ, ಆದರೆ, ಶಿವಮೊಗ್ಗ ಜಿಲ್ಲೆಯ ಕಡೆ ಒಂದೇ ಒಂದು ಬಸ್ ವ್ಯವಸ್ಥೆ ಇಲ್ಲ’ ಎನ್ನುತ್ತಾರೆ ನಿವೃತ್ತ ತಹಶೀಲ್ದಾರ್‌ ರಾಮಕೃಷ್ಣ ಗೋಖಲೆ.

ತಿಳವಳ್ಳಿ ಕೇಂದ್ರದಿಂದ ನೂರಾರು ವಿದ್ಯಾರ್ಥಿಗಳು, ನೌಕರರು, ಸಾರ್ವಜನಿಕರು, ಆನವಟ್ಟಿ, ಶಿರಸಿ, ರಾಣೆಬೆನ್ನೂರು, ಅಕ್ಕಿಆಲೂರು ಬ್ಯಾಡಗಿ ಕಡೆ ಸಂಚರಿಸಲು ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ಹೆಚ್ಚಿನ ಮೊತ್ತ ವ್ಯಯಿಸಿ ಖಾಸಗಿ ವಾಹನಗಳ ಮೊರೆ ಹೋಗುತ್ತಿದ್ದಾರೆ. ಆದ ಕಾರಣ ಸಂಬಂಧಪಟ್ಟ ಸಾರಿಗೆ ಇಲಾಖೆಯವರು ತಿಳವಳ್ಳಿಯಿಂದ ಇತರೆ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳ ಕಡೆಗೆ ಸಂಚರಿಸಲು ಸೂಕ್ತವಾದ ಬಸ್ ವ್ಯವಸ್ಥೆಯನ್ನು ಮಾಡಿಕೊಡಬೇಕೆಂದು ತಿಳವಳ್ಳಿ ಸಾರ್ವಜನಿಕರು ಆಗ್ರಹಿಸಿದ್ದಾರೆ.

***

ಆನವಟ್ಟಿ ಕಡೆ ಹೋಗಲು ಸಾರಿಗೆ ಬಸ್‌ಗಳಿಲ್ಲದ ಕಾರಣ ನಿತ್ಯ ಖಾಸಗಿ ವಾಹನದಲ್ಲಿ ಹೋಗುತ್ತಿದ್ದೇವೆ. ತಿಂಗಳಿಗೆ ₹1500 ವೆಚ್ಚ ಭರಿಸುತ್ತಿದ್ದೇವೆ
– ಮೇಘನಾ, ವಿದ್ಯಾರ್ಥಿನಿ, ತಿಳವಳ್ಳಿ

***

ಬಸ್ ಮತ್ತು ಸಿಬ್ಬಂದಿ ಕೊರತೆಯಿದೆ. ಹೊಸ ಸಿಬ್ಬಂದಿ ನೇಮಕವಾದಲ್ಲಿ ಹಾವೇರಿ–ತಿಳವಳ್ಳಿ– ಆನವಟ್ಟಿ ಬಸ್ ಸಂಚಾರಕ್ಕೆ ಆದ್ಯತೆ ನೀಡುತ್ತೇವೆ
– ವಿ.ಎಸ್. ಜಗದೀಶ, ವಿಭಾಗೀಯ ನಿಯಂತ್ರಣಾಧಿಕಾರಿ, ವಾ.ಕ.ರ.ಸಾ.ಸಂಸ್ಥೆ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.