ADVERTISEMENT

ಸಮಸ್ಯೆಗಳ ಸುಳಿಯೊಳಗೆ ಅನ್ನದಾತರು

ಮರೀಚಿಕೆಯಾದ ತುಂಗಾ ಮೇಲ್ದಂಡೆ ಪರಿಹಾರ: ಆರಂಭವಾಗದ ಗೋವಿನಜೋಳ ಖರೀದಿ ಕೇಂದ್ರ

ಸಿದ್ದು ಆರ್.ಜಿ.ಹಳ್ಳಿ
Published 7 ಆಗಸ್ಟ್ 2022, 7:21 IST
Last Updated 7 ಆಗಸ್ಟ್ 2022, 7:21 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಹಾವೇರಿ: ‘ಏಲಕ್ಕಿ ಕಂಪಿನ ನಾಡು’ ಹಾವೇರಿಯು ಕೃಷಿ ಪ್ರಧಾನ ಜಿಲ್ಲೆಯಾಗಿದೆ. ಇಲ್ಲಿನ ಜನರ ಜೀವನಾಡಿ ಒಕ್ಕಲುತನ. ಆದರೆ, ಜಿಲ್ಲೆಯಾಗಿ 25 ವರ್ಷ ತುಂಬುತ್ತಿರುವ ಹೊತ್ತಿನಲ್ಲೂ ಕೃಷಿ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ. ಹತ್ತಾರು ಸಮಸ್ಯೆಗಳ ಸುಳಿಯೊಳಗೆ ಅನ್ನದಾತರು ಸಿಲುಕಿ, ಸಂಕಷ್ಟ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆಯು ಕ್ರಮವಾಗಿ 3,30,639 ಹೆಕ್ಟೇರ್‌ ಹಾಗೂ 49,000 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಕ್ಷೇತ್ರದ ಗುರಿ ಹೊಂದಿವೆ. ಗೋವಿನಜೋಳ ಮತ್ತು ಹತ್ತಿ ಇಲ್ಲಿನ ಪ್ರಮುಖ ಬೆಳೆಗಳು. ಗೋವಿನಜೋಳಕ್ಕೆ ಕನಿಷ್ಠ ಬೆಂಬಲ ಬೆಲೆ ಘೋಷಣೆಯಾದರೂ, ಇದುವರೆಗೆ ಖರೀದಿ ಕೇಂದ್ರವೇ ಆರಂಭವಾಗಿಲ್ಲ. ಖರೀದಿ ಕೇಂದ್ರ ತೆರೆಯಲು ರೈತರು ಸಾಕಷ್ಟು ಬಾರಿ ಹೋರಾಟ ಮಾಡಿದರೂ ಪ್ರಯೋಜನ ಸಿಕ್ಕಿಲ್ಲ. ಗೋವಿನಜೋಳ ಸಂಸ್ಕರಣಾ ಘಟಕ ಸ್ಥಾಪಿಸಬೇಕು ಎಂಬುದು ರೈತರ ಒಕ್ಕೊರಲ ಆಗ್ರಹವಾಗಿದೆ.

ಪ‍ರಿಹಾರ ಮರೀಚಿಕೆ:ತುಂಗಾ ಮೇಲ್ದಂಡೆ ಕಾಲುವೆ ಮತ್ತು ಏತ ನೀರಾವರಿ ಕಾಲುವೆಗೆ ಜಮೀನು ಕಳೆದುಕೊಂಡ ರೈತರಿಗೆ 20 ವರ್ಷಗಳು ಕಳೆದರೂ ಪರಿಹಾರ ಸಿಕ್ಕಿಲ್ಲ. ಕಾಲುವೆಗಳ ಕಾಮಗಾರಿ ಪೂರ್ಣಗೊಂಡಿಲ್ಲ. ನಿರ್ಮಾಣವಾಗಿರುವ ಕೆಲವು ಕಾಲುವೆ ಹಾಳಾಗಿದ್ದು, ದುರಸ್ತಿ ಕಾರ್ಯ ನನೆಗುದಿಗೆ ಬಿದ್ದಿದೆ. ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಹೀಗಾಗಿ ರೈತರಿಗೆ ಪರಿಹಾರವೂ ಇಲ್ಲ, ನೀರೂ ಇಲ್ಲದಂತಾಗಿದೆ.

ADVERTISEMENT

ಕೈಗೂಡದ ಡಿಸಿಸಿ ಬ್ಯಾಂಕ್‌:‘ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಸ್ಥಾಪನೆಯಾಗಬೇಕು ಎಂಬುದು ದಶಕಗಳ ಹೋರಾಟವಾಗಿದೆ. ಜಿಲ್ಲೆಯಾಗಿ 25 ವರ್ಷವಾದರೂ ಬೇಡಿಕೆ ಈಡೇರಿಲ್ಲ. ಬ್ಯಾಂಕ್‌ ಸ್ಥಾಪನೆಯಾಗಿದ್ದರೆ ರೈತರಿಗೆ ₹3 ಲಕ್ಷದವರೆಗೆ ಬಡ್ಡಿರಹಿತ ಸಾಲ ದೊರೆಯುತ್ತಿತ್ತು. ಸೊಸೈಟಿಗಳಲ್ಲಿ ಹೆಚ್ಚೆಂದರೆ ₹75 ಸಾವಿರದವರೆಗೆ ಮಾತ್ರ ಸಾಲ ಸಿಗುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಡಿಸಿಸಿ ಬ್ಯಾಂಕ್‌ ಸ್ಥಾಪನೆಗೆ ಹಿಂದೆ ಹೋರಾಟ ನಡೆಸಿದ್ದರು. ಈಗ ಅವರೇ ಸಿಎಂ ಆಗಿದ್ದು, ಡಿಸಿಸಿ ಬ್ಯಾಂಕ್‌ ಸ್ಥಾಪಿಸಲಿ’ ಎನ್ನುತ್ತಾರೆ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ.

ಬಿಡುಗಡೆಯಾಗದ ಬೆಳೆ ವಿಮೆ:2016ರಿಂದ 2021ರವರೆಗಿನ ಸುಮಾರು ₹30 ಕೋಟಿಯಷ್ಟು ಮುಂಗಾರು–ಹಿಂಗಾರು ಬೆಳೆವಿಮೆ ಬಿಡುಗಡೆಯಾಗಬೇಕಿದೆ. ಮಿಸ್‌ ಮ್ಯಾಚ್‌ ನೆಪ ಹೇಳುತ್ತಾ ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡುತ್ತಾ ಬಂದಿವೆ. ರೈತರ ಖಾತೆಗೆ ಕೂಡಲೇ ಹಣ ಜಮಾ ಮಾಡಬೇಕು ಎನ್ನುತ್ತಾರೆ ರೈತರು.

ವಿದ್ಯುತ್‌ ಕಣ್ಣಾಮುಚ್ಚಾಲೆ:‘ರೈತರ ಬಾಳಲ್ಲಿ ವಿದ್ಯುತ್‌ ಸದಾ ಕಣ್ಣಾಮುಚ್ಚಾಲೆಯಾಡುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ಏಳು ತಾಸು ವಿದ್ಯುತ್‌ ಕೊಡುತ್ತೇವೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಹಗಲು 3 ತಾಸು, ರಾತ್ರಿ 3 ತಾಸು ಮಾತ್ರ ವಿದ್ಯುತ್‌ ಕೊಡುತ್ತಾರೆ. ಜಿಲ್ಲೆಯ ಎಲ್ಲ ಗ್ರಿಡ್‌ಗಳನ್ನು ಮೇಲ್ದರ್ಜೆಗೆ ಏರಿಸಿ, ಸಮರ್ಪಕ ವಿದ್ಯುತ್‌ ಪೂರೈಸಬೇಕು’ ಎನ್ನುತ್ತಾರೆ ರೈತ ಮುಖಂಡ ರವೀಂದ್ರಗೌಡ ಪಾಟೀಲ.

ಜಿಲ್ಲೆಯ ರೈತರು ಹಾಲು ಉತ್ಪಾದನೆ ಮಾಡಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದು ಸಕಾಲಕ್ಕೆ ಹಾಲಿನ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು.ರೈತರು ಬ್ಯಾಂಕುಗಳಲ್ಲಿ ಕೃಷಿ ಸಾಲ ಪಡೆದು ಕಟ್ಟುಬಾಕಿದಾರರಾಗಿದ್ದಾರೆ ಅಂತಹ ರೈತರಿಗೆ ಓ.ಟಿ.ಎಸ್. ನಲ್ಲಿ ಮರು ಪಾವತಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಹೊಲಗಳಿಗೆ ರಸ್ತೆ ಮಾಡಿಕೊಡಿ

‘ರೈತರ ಜಮೀನುಗಳಿಗೆ ಒಡಾಡಲು ರಸ್ತೆಗಳ ಅವಶ್ಯವಿದ್ದು ರೈತರು ದಾರಿಗಳಿಗೆ ಜಗಳ ಮಾಡಿಕೊಂಡು ಕೋರ್ಟ್‌ಗಳಲ್ಲಿ ವ್ಯಾಜ್ಯಗಳು ನಡೆಯುತ್ತಿವೆ. ಇದರಿಂದ ಬಹಳ ತೊಂದರೆಯನ್ನು ಅನುಭವಿಸುತ್ತಿದ್ದು ಜಮೀನುಗಳನ್ನು ಬೀಳು ಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಸರ್ಕಾರ ಎರಡು ಸರ್ವೆ ನಂಬರ್‌ಗಳಲ್ಲಿ ಜಮೀನು ವಶಪಡಿಸಿಕೊಂಡು ರಸ್ತೆ ನಿರ್ಮಾಣ ಮಾಡಬೇಕು’ ಎಂದು ರೈತ ಮುಖಂಡ ಮಾಲತೇಶ ಪೂಜಾರ ಆಗ್ರಹಿಸಿದ್ದಾರೆ.

ಪ್ರತಿವರ್ಷವೂ ಗೊಬ್ಬರ ಸಮಸ್ಯೆ

ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಜೂನ್‌ 8, 2008ರಲ್ಲಿ ಬೀಜ ಮತ್ತು ರಸಗೊಬ್ಬರಕ್ಕಾಗಿ ರೈತರು ಹೋರಾಟ ನಡೆಸುತ್ತಿದ್ದ ಸಂದರ್ಭ ನಡೆದ ಗೋಲಿಬಾರ್‌ ಘಟನೆಯಲ್ಲಿ ಸಿದ್ದಲಿಂಗಪ್ಪ ಚೂರಿ ಮತ್ತು ಪುಟ್ಟಪ್ಪ ಹೊನ್ನತ್ತಿ ಇಬ್ಬರು ರೈತರು ಮೃತಪಟ್ಟಿದ್ದರು.

ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ರಸಗೊಬ್ಬರ ಸಮಸ್ಯೆ ಕಾಡುತ್ತಲೇ ಇದೆ. ಸಕಾಲದಲ್ಲಿ ಗೊಬ್ಬರ ದೊರೆಯದೇ ರೈತರು ಕಂಗಾಲಾಗುವುದು ತಪ್ಪಿಲ್ಲ. ಅಧಿಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಗೊಬ್ಬರ ಪೂರೈಕೆಯಾಗುತ್ತದೆ ಎನ್ನುತ್ತಾರೆ. ಆದರೆ, ರೈತರಿಗೇಕೆ ಕೇಳಿದಷ್ಟು ಗೊಬ್ಬರ ಸಿಗುವುದಿಲ್ಲ ಎಂಬುದು ಅನ್ನದಾತರ ಪ್ರಶ್ನೆಯಾಗಿದೆ.

***

ಕೃಷಿ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಇಲಾಖೆಯ ಕಾರ್ಯಕ್ರಮಗಳು ರೈತರ ಬಾಳಲ್ಲಿ ಆಶಾಕಿರಣ ಮೂಡಿಸಿವೆ
– ಮಂಜುನಾಥ, ಜಂಟಿ ಕೃಷಿ ನಿರ್ದೇಶಕ, ಹಾವೇರಿ

***

ಕೃಷಿ ಇಲಾಖೆಯಲ್ಲಿ 20 ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿಲ್ಲ. ಇದರಿಂದ ಆಡಳಿತ ವ್ಯವಸ್ಥೆಗೆ ತೊಂದರೆಯಾಗಿದೆ
– ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ

***

ಖಾಸಗಿ ಸಾಲ ಮಾಡಿ, ದುಬಾರಿ ಬಡ್ಡಿ ಕಟ್ಟಲಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ 3ರ ಬಡ್ಡಿದರದಲ್ಲಿ ₹10 ಲಕ್ಷದವರೆಗೆ ಸಾಲ ನೀಡಬೇಕು
– ರಾಮಣ್ಣ ಕೆಂಚಳ್ಳೇರ, ಜಿಲ್ಲಾ ಘಟಕದ ಅಧ್ಯಕ್ಷ, ರಾಜ್ಯ ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.