ADVERTISEMENT

ಬಿಜೆಪಿ ತೊರೆದ ಯು.ಬಿ. ಬಣಕಾರ: ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 13:54 IST
Last Updated 9 ನವೆಂಬರ್ 2022, 13:54 IST
ಯು.ಬಿ. ಬಣಕಾರ
ಯು.ಬಿ. ಬಣಕಾರ   

ಹಿರೇಕೆರೂರು (ಹಾವೇರಿ): ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರು ಅಧ್ಯಕ್ಷ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರಿಗೆ ಬುಧವಾರ ತೆರಳಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಜತೆಗೆ ಬಿಜೆಪಿಯನ್ನು ಸಂಪೂರ್ಣವಾಗಿ ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಎರಡು ಬಾರಿ ಶಾಸಕ:

ADVERTISEMENT

ಯು.ಬಿ. ಬಣಕಾರ ಅವರು ಎರಡು ಬಾರಿ ಹಿರೇಕೆರೂರು ಕ್ಷೇತ್ರದ ಶಾಸಕರಾಗಿದ್ದರು. 1994ರಲ್ಲಿ ಬಿಜೆಪಿಯಿಂದ ಮತ್ತು 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಣಕಾರ ಅವರು ಆಗ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಬಿ.ಸಿ.ಪಾಟೀಲ್‌ ಎದುರು ಸೋಲು ಅನುಭವಿಸಿದ್ದರು.

ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿ.ಸಿ. ಪಾಟೀಲ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಸಿ. ಪಾಟೀಲರ ಜತೆ ಬಣಕಾರ ಅವರು ಜೋಡೆತ್ತಿನಂತೆ ಕ್ಷೇತ್ರದಾದ್ಯಂತ ಅಡ್ಡಾಡುತ್ತಾ ಗೆಲುವಿಗೆ ಶ್ರಮಿಸಿದ್ದರು.

ಯು.ಬಿ. ಬಣಕಾರ ಅವರನ್ನು ಸಮಾಧಾನ ಮಾಡಲು ಉಗ್ರಾಣ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಜತೆಗೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮಕ್ಕೂ ನಿರ್ದೇಶಕರನ್ನಾಗಿ ಮಾಡಲಾಗಿತ್ತು.

ಪ್ರಬಲ ಆಕಾಂಕ್ಷಿಯಾಗಿದ್ದ ಬಣಕಾರ:

‘ಯಡಿಯೂರಪ್ಪನವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಲು ಹಾಗೂ ಹಿರೇಕೆರೂರು ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಉಪಚುನಾವಣೆ ವೇಳೆ ಕ್ಷೇತ್ರ ಬಿಟ್ಟು ಕೊಡಬೇಕಾಯ್ತು. ಅದರರ್ಥ ಪ್ರತಿಯೊಂದು ಚುನಾವಣೆಯನ್ನು ಬಿಟ್ಟು ಕೊಡ್ತೀವಿ ಅಂತ ಅಲ್ಲ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ನನಗೇ ಟಿಕೆಟ್‌ ದೊರೆಯಲಿದೆ’ ಎಂದು ಬಣಕಾರ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಬಿಜೆಪಿಯಲ್ಲಿ ಟಿಕೆಟ್‌ ದೊರೆಯುವ ಸಾಧ್ಯತೆ ಇಲ್ಲ ಎಂಬುದು ಖಚಿತವಾದ ಮೇರೆಗೆ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ ಎಂದು ಕ್ಷೇತ್ರದಲ್ಲಿ ಚರ್ಚೆ ನಡೆಯುತ್ತಿದೆ.

ಬೆಂಬಲಿಗನ ರಾಜೀನಾಮೆ:

ಬಣಕಾರ ಅವರ ಕಟ್ಟಾ ಬೆಂಬಲಿಗರಾಗಿದ್ದ ಬಿಜೆಪಿಯ ಹಿರೇಕೆರೂರು ತಾಲ್ಲೂಕು ಘಟಕದ ಅಧ್ಯಕ್ಷ ಮಳಿಮಠ ಅವರು ಸಹ ತಮ್ಮ ರಾಜೀನಾಮೆಯನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅವರಿಗೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.