ಶಿಗ್ಗಾವಿ: ಉತ್ತರ ಕರ್ನಾಟಕ ಭಾಗದಲ್ಲಿ ಜಾತ್ರೆಗಳು ವಿಶಿಷ್ಟತೆ ಹೊಂದಿದ್ದು, ಅದರಲ್ಲಿ ದಕ್ಷಿಣ ಕಾಶಿ ಎಂಬ ಐತಿಹಾಸಿಕ ಹಿನ್ನೆಲೆ ಹೊಂದಿದ ತಾಲ್ಲೂಕಿನ ಗಂಗೀಭಾವಿ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜ.14ರಿಂದ 15ರ ವರೆಗೆ ಸುತ್ತಲಿನ ಗ್ರಾಮಗಳ ಹಾಗೂ ದೇವಸ್ಥಾನ ಸಮಿತಿ ಸಹಯೋಗದಲ್ಲಿ ಸಂಭ್ರಮದಿಂದ ಜರುಗಲಿದೆ.
ಕ್ಷೇತ್ರದ ರಾಮಲಿಂಗೇಶ್ವರ ದೇವಸ್ಥಾನ ಪುರಾತನವಾಗಿದ್ದು, ಪುಣ್ಯಸ್ನಾನದ ಕಟ್ಟೆ ನಿರ್ಮಿಸಲಾಗಿದೆ. ದೂರದಿಂದ ಬರುವ ಭಕ್ತರು ಗಂಗೆಯಲ್ಲಿ ಸ್ನಾನ ಮಾಡಿ ಬೇಡಿಕೆಗಳನ್ನು ಇಷ್ಟಾರ್ಥಗೊಳಿಸುತ್ತಿದ್ದಾರೆ. ಪುರಾತನ ಅಶ್ವಥ ವೃಕ್ಷವಿದ್ದು, ಅದರ ಸುತ್ತು ಪ್ರದಕ್ಷಿಣೆ ಹಾಕಿ ವರ ಪಡೆಯುತ್ತಿದ್ದಾರೆ. ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.
ಮಂಗಳವಾರ ಬೆಳಿಗ್ಗೆ ಜಾತ್ರಾ ಮಹೋತ್ಸವದಲ್ಲಿ ಉಮಾ-ರಾಮಲಿಂಗೇಶ್ವರ ದೇವರಿಗೆ ಪಂಚಾಮೃತ ಅಭಿಷೇಕ, ಮಾರಾರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಸಮಾರಂಭಗಳು ಸಂಭ್ರಮದಿಂದ ಜರುಗಲಿವೆ. ಮಧ್ಯಾಹ್ನ 1ಗಂಟೆಗೆ ರಾಮಲಿಂಗೇಶ್ವರ ಉತ್ಸವ ಮೂರ್ತಿಯ ಮೆರವಣಿಗೆ ಹೊಸೂರ ಗ್ರಾಮದ ಬಸವಣ್ಣದೇವರ ಪಾದಗಟ್ಟಿಯಿಂದ ಗಂಗೀಭಾವಿ ವರೆಗೆ ಭಕ್ತ ಸಮೂಹದ ನಡುವೆ ಶೃದ್ಧಾಭಕ್ತಿಯಿಂದ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ರಾಮಲಿಂಗೇಶ್ವರ ದೇವರ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಜ.15ರಂದು ಬೆಳಿಗ್ಗೆ ಪಂಚಾಮೃತ ಅಭಿಷೇಕ ನಡೆಯಲಿದೆ. ನಂತರ ರಾಮಲಿಂಗೇಶ್ವರ ದೇವರ ತೇರಿಗೆ ಕಡುಬಿನ ಕಾಳಗ ಜರುಗಲಿದೆ ಎಂದು ರಾಮಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಋಷಿಗಳ ತಪೋಭೂಮಿ
ಗಂಗೀಭಾವಿ ರಾಮಲಿಂಗೇಶ್ವರ ದೇವಸ್ಥಾನ ಪುರಾತನವಾಗಿದ್ದು, ಜಾಹ್ನವಿ(ಜಹ್ನು) ಋಷಿಗಳ ತಪಸ್ಸು ಮಾಡಿದ ಪುಣ್ಯ ಕ್ಷೇತ್ರವಾಗಿದೆ. ಅವರು ಕಾಶಿಗೆ ಹೋಗಿ ಗಂಗಾಜಲ, ಗಂಗೀಭಾವಿಯಲ್ಲಿನ ಹೂಗಳಿಂದ ರಾಮೇಶ್ವರದ ರಾಮಲಿಂಗದೇವರ ಪೂಜೆ ಮಾಡಿ ಬರುತ್ತಿದ್ದರು. ಹೀಗೆ ಮಾಡುವಾಗ ಗಂಗಾದೇವಿ ಪ್ರತ್ಯಕ್ಷಳಾಗಿ ನೀನು ಇರುವಲ್ಲಿಗೆ ನಾನೇ ಬರುತ್ತೇನೆ. ಗಂಗಾದೇವಿ ಬರುವ ಗುರುತಿಗಾಗಿ ವಸ್ತ್ರ ಮತ್ತು ಬೆತ್ತವನ್ನು ಕಾಶಿ ಸಮೀಪದ ಗಂಗಾನದಿಯಲ್ಲಿ ಬಿಟ್ಟು ಬಂದರು. ಅವು ಜಾಹ್ನವಿ(ಜಹ್ನು) ಋಷಿಗಳು ತಪಸ್ಸು ಮಾಡುವ ಸ್ಥಳವಾದ 'ಗಂಗೀಭಾವಿ'ಗೆ ಬಂದು ಪ್ರತ್ಯಕ್ತವಾದವು. ಅದರಂತೆ ರಾಮೇಶ್ವರದ ರಾಮಲಿಂಗೇಶ್ವರ ದೇವರು ಸಹ ಜಹ್ನು ಋಷಿಗೆ ಪ್ರತ್ಯಕ್ಷವಾಗಿ ಗಂಗೀಭಾವಿಯಲ್ಲಿ ನೆಲೆಸುವುದಾಗಿ ಹೇಳಿದರು. ಅಂದಿನಿಂದ ಕಾಶಿ ಮತ್ತು ರಾಮೇಶ್ವರ ಎರಡು ಕ್ಷೇತ್ರಗಳ ಸಂಗಮ ಕ್ಷೇತ್ರವಾಗಿದೆ ಎಂಬುದನ್ನು ಪುರಾಣದ ಗಂಗಾಕೊಪ್ಪ ರಾಮೇಶ್ವರ ಪುರಾಣದಲ್ಲಿ ಕಂಡು ಬರುತ್ತಿದೆ. ಅದಕ್ಕೆ ಇಲ್ಲಿರುವ ಜಾಹ್ನವಿ(ಜಹ್ನು) ಋಷಿಗಳ ಗದ್ದುಗೆ ಹಾಗೂ ಗವಿ ಇದಕ್ಕೆ ಸಾಕ್ಷಿಯಾಗಿ ನಿಂತಿವೆ. ಹೀಗಾಗಿ ಮಕರ ಸಂಕ್ರಾಂತಿ ಪುಣ್ಯ ದಿನದಂತೆ ರಾಮಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಸಮಿತಿ ಸದಸ್ಯರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.