ADVERTISEMENT

ಪೂರ್ಣಗೊಳ್ಳದ ನಿರಂತರ ನೀರು ಯೋಜನೆ: ಬ್ಯಾಡಗಿ ಪಟ್ಟಣದಲ್ಲಿ ನೀರಿನ ಸಮಸ್ಯೆ

ಪ್ರಮೀಳಾ ಹುನಗುಂದ
Published 23 ಮಾರ್ಚ್ 2025, 6:49 IST
Last Updated 23 ಮಾರ್ಚ್ 2025, 6:49 IST
ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಗ್ರಾಮದ ಬಳಿ ನದಿ ನೀರಿನಿಂದ ತುಂಬಿಸಿದ್ದ ಕೆರೆಯ ಒಡಲು ಖಾಲಿಯಾಗಿರುವುದು.
ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಗ್ರಾಮದ ಬಳಿ ನದಿ ನೀರಿನಿಂದ ತುಂಬಿಸಿದ್ದ ಕೆರೆಯ ಒಡಲು ಖಾಲಿಯಾಗಿರುವುದು.   

ಬ್ಯಾಡಗಿ: ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಕಾರಣಕ್ಕೆ ಬ್ಯಾಡಗಿ ಪಟ್ಟಣದಲ್ಲಿ ಆಗಾಗ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕದರಮಂಡಲ–ಹೂಲಿಹಳ್ಳಿ ಗ್ರಾಮಗಳಿಗೆ ತುಂಗಭದ್ರಾ ನದಿ ತೀರದ ಜಾಕ್‌ವೆಲ್‌ನಿಂದ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಆದರೆ, ಕದರಮಂಡಲಗಿ ಗ್ರಾಮ ಪಂಚಾಯಿತಿ ಅಗತ್ಯಕ್ಕಿಂತ ಹೆಚ್ಚು ನೀರು ಬಳಸುತ್ತಿರುವುದರಿಂದ ಬ್ಯಾಡಗಿ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುತ್ತಿರುವ ಆರೋಪವಿದೆ.

ಮೂರು ದಿನಕ್ಕೊಮ್ಮೆ ಬಿಡುತ್ತಿದ್ದ ನದಿ ನೀರು ಈಗ ಐದಾರು ದಿನಕ್ಕೊಮ್ಮೆ ಬಿಡುವಂತಾಗಿದೆ. ಅಲ್ಲದೆ ನಿರಂತರ ನೀಡಿ ಮೀಟರ್‌ ನಗಳಲ್ಲಿ ಪರೀಕ್ಷೆ ಮಾಡಲು ನೀರಿನ ಕೊರತೆ ಕಾಡುತ್ತಿದೆ. ಹೀಗಾಗಿ, ನಿರಂತರ ನೀರು ಅನುಷ್ಠಾನ ವಿಳಂಬವಾಗುತ್ತಿದೆ. ಪಟ್ಟಣದ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಜನರು ದೂರಿದರು.

ಪಟ್ಟಣದ ಅಗಸನಹಳ್ಳಿಗೆ ಮಾತ್ರ ನಿರಂತರ ನೀರು ನಳದಲ್ಲಿ ನೀರು ಸರಬರಾಜು ಆಗುತ್ತಿದೆ. ಉಳಿದಂತೆ ವಿದ್ಯಾನಗರ, ಬಸವೇಶ್ವರ ನಗರ, ಹೊಂಡದ ಓಣಿ, ನೆಹರೂ ನಗರ, ಚೌಡೇಶ್ವರಿ ನಗರ, ವಿನಾಯಕ ನಗರ, ವಾಲ್ಮೀಕಿ ನಗರ ಮುಂತಾದೆಡೆ ನೀರಿನ ಕೊರೆತೆಯಾಗುತ್ತಿದೆ ಎಂದು ಅಲ್ಲಿಯ ನಿವಾಸಿಗಳು ದೂರುತ್ತಾರೆ.

ADVERTISEMENT

ಕಳೆದ ಎರಡು ವರ್ಷಗಳ ಹಿಂದೆ ಅನುಷ್ಠಾನವಾಗಬೇಕಾಗಿದ್ದ ನಿರಂತರ ನೀರು ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಇದಕ್ಕೆ ಕಳಪೆ ಕಾಮಗಾರಿ ಕಾರಣವಾಗಿದೆ.

ತುರಾತುರಿಯಲ್ಲಿ ಮಾಡಿದ ಕಾಮಗಾರಿಯಿಂದ ನೀರು ಸರಿಯಾಗಿ ಹರಿಯುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಪಟ್ಟಣದ ಆನಂದೇಶ್ವರ ದೇವಸ್ಥಾನದ ಹಿಂದಿನ ಸಿಸ್ಟರ್ನ್‌ ಟ್ಯಾಂಕ್‌ ಸೇರಿದಂತೆ ಹಲವಾರು ಸಿಸ್ಟರ್ನ್‌ ಟ್ಯಾಂಕ್‌ಗಳಿಗೆ ಕೂರಿಸಿದ ನಳದಲ್ಲಿ ನೀರು ಸೋರುತ್ತಿದೆ.

ಇದರಿಂದಾಗಿ ಅನಗತ್ಯವಾಗಿ ನೀರು ಹರಿದು ಹೋಗುತ್ತಿದ್ದು, ಪುರಸಭೆ ನೀರು ಸರಬರಾಜು ಸಿಬ್ಬಂದಿಯ ಬೇಜವಾಬ್ದಾರಿ ಕಾರಣವಾಗಿದೆ. ಈ ಕುರಿತು ಹಲವು ಬಾರಿ ಮುಖ್ಯಾಧಿಕಾರಿಯ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ ಆರೋಪಿಸಿದರು.

ನಿರಂತರ ನೀರು ನಳದಲ್ಲಿ ನೀರು ಬಾರದಿದ್ದರೂ ಜನರಿಗೆ ನೀರಿನ ಬಿಲ್‌ ನೀಡಲಾಗುತ್ತಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅದಕ್ಕೆ ಸಂಬಂಧಿಸಿದ ಎಂಜಿನಿಯರ್ ಕೇಳಿ ಎನ್ನುವ ಸಿದ್ಧ ಉತ್ತರ ಬರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಬಸನಕಟ್ಟಿ ಕೆರೆಗೆ ₹ 1 ಕೋಟಿ ವೆಚ್ಚದಲ್ಲಿ ಸುತ್ತಲೂ ತಡೆಗೋಡೆ ನಿರ್ಮಿಸಿದ್ದರೂ ಯಾವುದಕ್ಕೂ ಪ್ರಯೋಜನವಾಗಿಲ್ಲ. ಕೂಡಲೇ ಅದನ್ನು ಅಭಿವೃದ್ಧಿಪಡಿಸಿ ನೀರು ಸಂಗ್ರಹಿಸಬೇಕೆಂದು ಅವರು ಒತ್ತಾಯಿಸಿದರು.

ಬ್ಯಾಡಗಿ ಪಟ್ಟಣದ ಅಳವಡಿಸಿರುವ ನಿರಂತರ ನೀರು ಯೋಜನೆಯ ಮೀಟರ್‌ ನಳದಲ್ಲಿ ಪರೀಕ್ಷೆಗೆ  ಬಿಟ್ಟಿರುವ ನೀರು ಸಣ್ಣಗೆ ಬರುತ್ತಿದೆ.
ನದಿ ನೀರಿನಿಂದ ತುಂಬಿಸಿದ್ದ ಕೆರೆಗಳು ಖಾಲಿಯಾಗುವ ಹಂತಕ್ಕೆ ಬಂದಿದೆ. ಇಂಥ ಕೆರೆಗಳನ್ನು ಹೂಳು ತೆಗೆಸಿ ಹೆಚ್ಚು ನೀರು ಸಂಗ್ರಹಿಸುವಂತೆ ಮಾಡಬೇಕು
ಕಿರಣ ಗಡಿಗೋಳ ರೈತ ಮುಖಂಡ 
‘6 ಲಕ್ಷ ಲೀಟರ್ ಬದಲು 10 ಲಕ್ಷ ಲೀಟರ್ ಬಳಕೆ’
‘ತಾಲ್ಲೂಕಿನ ಕದರಮಂಡಲಗಿ ಗ್ರಾಮ ಪಂಚಾಯಿತಿ 6 ಲಕ್ಷ ಲೀಟರ್‌ ನದಿ ನೀರನ್ನು ಬಳಸಬೇಕು. ಆದರೆ ಸುಮಾರು 10 ಲಕ್ಷಕ್ಕೂ ಹೆಚ್ಚು ಲೀಟರ್‌ ನದಿ ನೀರು ಬಳಸುತ್ತಿದೆ. ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ನೀರು ಹರಿಯುವುದನ್ನು ಪ್ಲೋ ಮೀಟರ್‌ ಮೂಲಕ ಅಳವಡಿಸಿದ್ದರೂ ನೇರವಾಗಿ ನೀರು ಬಳಸಲಾಗುತ್ತಿದೆ. ಇದರಿಂದ ಪಟ್ಟಣಕ್ಕೆ ಕಡಿಮೆ ಪ್ರಮಾಣದ ನೀರು ಹರಿದು ಬರುತ್ತಿದೆ. ಇದರಿಂದ ಇಲ್ಲಿಯ ಜನರಿಗೆ ತೊಂದರೆಯಾಗುತ್ತಿದೆ‘ ಎಂದು ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ತಿಳಿಸಿದರು.  ‘ಈ ವಿಷಯವನ್ನು ಶಾಸಕರ ಗಮನಕ್ಕೂ ತರಲಾಗಿದೆ. ಅಲ್ಲಿಯ ಪಿಡಿಒ ಹಾಗೂ ಸಿಬ್ಬಂದಿ ಕರೆಸಿ ಎಚ್ಚರಿಕೆ ನೀಡಿದ್ದರೂ ನಿಯಂತ್ರಣ ಸಾಧ್ಯವಾಗಿಲ್ಲ. ಸದ್ಯ ಮ್ಯಾನುವಲ್‌ ಆಗಿ ನೀರು ಸರಬರಾಜಿನಲ್ಲಿ ಕಡಿಮೆ ಮಾಡಲಾಗುತ್ತಿದೆ. ಅಲ್ಲದೆ ಬೇಸಿಗೆ ಸಮೀಪಿಸಿದ್ದರಿಂದ ನದಿಯಲ್ಲಿ ನೀರು ಖಾಲಿಯಾದಲ್ಲಿ ತೀವ್ರ ತೋದರೆಯಾಗಬಹುದೆಂದು ಭಾವಿಸಿ ಕುಡಿಯುವ ನೀರಿನ ಹೊಂಡದಲ್ಲಿ ನೀರು ಸಂಗ್ರಹಿಸಲಾಗುತ್ತದೆ. ಬಸನಕಟ್ಟಿ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಿದ್ದು ₹ 1.50 ಕೋಟಿಗೆ ಮಂಜೂರಾತಿ ದೊರೆತಿದೆ. ಆದರೆ ಹಣ ಇನ್ನೂ ಬಿಡುಗಡೆಯಾಗಿಲ್ಲ‘ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.