ಬ್ಯಾಡಗಿ: ತಾಲ್ಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಭಾನುವಾರ ರೈತರಿಗೆ 40 ಟನ್ ಯೂರಿಯಾ ಗೊಬ್ಬರವನ್ನು ವಿತರಿಸಲಾಯಿತು. ಬೆಳಿಗ್ಗೆ ಕೇವಲ 15 ಟನ್ (330 ಚೀಲ) ಯೂರಿಯಾ ಗೊಬ್ಬರ ಹೊತ್ತ ಲಾರಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ರೈತರು ಗೊಬ್ಬರಕ್ಕಾಗಿ ಮುಗಿಬಿದ್ದರು.
ನಾ ಮುಂದು ತಾ ಮುಂದು ಎನ್ನುವಂತೆ ಗೊಬ್ಬರಕ್ಕಾಗಿ ಗಲಾಟೆ ನಡೆಯಿತು. 500ಕ್ಕೂ ಹೆಚ್ಚು ರೈತರು ಜಮಾಯಿಸಿದ್ದರಿಂದ ಗೊಬ್ಬರ ವಿತರಣೆಯಲ್ಲಿ ಸಾಕಷ್ಟು ಗೊಂದಲಗಳು ಏರ್ಪಟ್ಟವು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ರೈತರನ್ನು ನಿಯಂತ್ರಿಸುವಲ್ಲಿ ಹರಸಾಹಸ ಪಡಬೇಕಾಯಿತು.
ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಕೂಡಾ ಸ್ಥಳಕ್ಕೆ ಆಗಮಿಸಿ ರೈತರನ್ನು ಸರದಿ ಸಾಲಿನಲ್ಲಿ ನಿಂತು ಗೊಬ್ಬರನ್ನು ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು. ಸಾಕಷ್ಟು ಗೊಬ್ಬರದ ದಾಸ್ತಾನಿದ್ದು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ರೈತರನ್ನು ಸಮಾಧಾನ ಪಡಿಸಿದರು.
ಇದೇ ವೇಳೆ ಸ್ಥಳದಲ್ಲಿದ್ದ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮುಖಂಡ ನಾಗರಾಜ ಆನ್ವೇರಿ ಸೇರಿದಂತೆ ಇನ್ನಿತರರು ರೈತರನ್ನು ಸರದಿ ಸಾಲಿನಲ್ಲಿ ನಿಲ್ಲಿಸಲು ಶಾಂತ ರೀತಿಯಲ್ಲಿ ಗೊಬ್ಬರ ವಿತರಣೆಗೆ ನೆರವಾದರು.
ಈ ಮೂಲಕ ರೈತರಿಗೆ ತಲಾ ಎರಡು ಚೀಲಗಳಂತೆ ಒಟ್ಟಾರೆ 40 ಟನ್ ಗೊಬ್ಬರನ್ನು ಸಂಜೆಯವರೆಗೂ ಶಾಂತ ರೀತಿಯಲ್ಲಿ ವಿತರಿಸಲಾಯಿತು. ಸೋಮವಾರ ಇನ್ನೂ15 ಟನ್ ಗೊಬ್ಬರ ಬರಲಿದ್ದು ಉಳಿದ ರೈತರು ಪಡೆದುಕೊಳ್ಳುವಂತೆ ಸೂಚಿಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.