ADVERTISEMENT

ಹಾವೇರಿ: ಯೂರಿಯಾ ಖರೀದಿಗೆ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 4:54 IST
Last Updated 10 ಆಗಸ್ಟ್ 2025, 4:54 IST
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಸಹಕಾರಿ ಸಂಘದ ಎದುರು ಯೂರಿಯಾ ಗೊಬ್ಬರಕ್ಕಾಗಿ ಶುಕ್ರವಾರ ಸರದಿಯಲ್ಲಿ ನಿಂತಿದ್ದ ರೈತರು
ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ಸಹಕಾರಿ ಸಂಘದ ಎದುರು ಯೂರಿಯಾ ಗೊಬ್ಬರಕ್ಕಾಗಿ ಶುಕ್ರವಾರ ಸರದಿಯಲ್ಲಿ ನಿಂತಿದ್ದ ರೈತರು   

ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಖರೀದಿಸಲು ರೈತರು ಶುಕ್ರವಾರ ಪರದಾಟ ನಡೆಸಿದರು.

ಗ್ರಾಮದಲ್ಲಿರುವ ವ್ಯವಸಾಯ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಯೂರಿಯಾ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಜಿಲ್ಲಾಡಳಿತದಿಂದ ಕಡಿಮೆ ಪ್ರಮಾಣದಲ್ಲಿ ಯೂರಿಯಾ ಗೊಬ್ಬರ ಪೂರೈಸಲಾಗಿದೆ. ಇದೇ ಕಾರಣಕ್ಕೆ ಯೂರಿಯಾ ಗೊಬ್ಬರವನ್ನು ಖರೀದಿಸಲು ರೈತರು ಮುಗಿಬಿದ್ದರು.

ಸಂಘದ ಗೋದಾಮು ಎದುರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದ ರೈತರು, ಪಹಣಿ ನೀಡಿ ಗೊಬ್ಬರ ಪಡೆದುಕೊಂಡರು. ಒಬ್ಬರಿಗೆ ಒಂದೇ ಚೀಲ ಗೊಬ್ಬರ ನಿಗದಿ ಮಾಡಿದ್ದಕ್ಕೆ ರೈತರು ಆಕ್ರೋಶ ಹೊರಹಾಕಿದರು. ಇದರಿಂದಾಗಿ ಕೆಲ ಹೊತ್ತು ಗೊಂದಲ ನಿರ್ಮಾಣವಾಗಿತ್ತು. ‘ರೈತರ ಬೇಡಿಕೆಗೆ ತಕ್ಕಷ್ಟು ಗೊಬ್ಬರ ಪೂರೈಕೆಯಾಗಿಲ್ಲ. ಇರುವ ಗೊಬ್ಬರವನ್ನೇ ಸಮ ಪ್ರಮಾಣದಲ್ಲಿ ಹಂಚಿಕೆ ಮಾಡಲಾಗುತ್ತಿದೆ’ ಎಂದು ಸಿಬ್ಬಂದಿ ಸಬೂಬು ಹೇಳಿದರು.

ADVERTISEMENT

ಸಂಜೆಯವರೆಗೂ ಸರದಿಯಲ್ಲಿ ನಿಂತು ಕಾದರೂ ಹಲವು ರೈತರಿಗೆ ಗೊಬ್ಬರ ಸಿಗಲಿಲ್ಲ. ಬೇಸತ್ತ ರೈತರು, ನಿರಾಸೆಯಿಂದ ಸ್ಥಳದಿಂದ ಹೊರಟು ಹೋದರು.

ಪ್ರಭಾವಿಗಳಿಗೆ ಎರಡು ಚೀಲ: ‘ಬಡ ರೈತರು ಸರದಿಯಲ್ಲಿ ನಿಂತು ಗೊಬ್ಬರ ಪಡೆಯುತ್ತಿದ್ದಾರೆ. ಅವರಿಗೆ ಕೇವಲ ಒಂದೇ ಚೀಲ ಗೊಬ್ಬರ ನೀಡಲಾಗುತ್ತಿದೆ. ಸರದಿಯಲ್ಲಿ ನಿಲ್ಲದಿದ್ದರೂ ನೇರವಾಗಿ ಗೋದಾಮಿಗೆ ಬರುವ ಪ್ರಭಾವಿಗಳಿಗೆ ಎರಡು ಚೀಲ ಕೊಟ್ಟು ಕಳುಹಿಸಲಾಗುತ್ತಿದೆ’ ಎಂದು ರೈತರು ಆಕ್ರೋಶ ಹೊರಹಾಕಿದರು.

‘ರೈತರ ಬೇಡಿಕೆಗೆ ತಕ್ಕಷ್ಟು ಗೊಬ್ಬರ ನೀಡಬೇಕು. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಸಂಘದ ಎದುರೇ ಹೋರಾಟ ನಡೆಸಬೇಕಾಗುತ್ತದೆ’ ಎಂದು ಕೆಲ ರೈತರು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.