ADVERTISEMENT

ಪ್ರಾಣ ಬಿಟ್ಟೇವು, ಮೀಸಲಾತಿ ಬಿಡುವುದಿಲ್ಲ: ವಚನಾನಂದ ಸ್ವಾಮೀಜಿ

ಹರಿಹರದ ಪಂಚಮಸಾಲಿ ಪೀಠದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 13:02 IST
Last Updated 5 ನವೆಂಬರ್ 2022, 13:02 IST
ವಚನಾನಂದ ಸ್ವಾಮೀಜಿ 
ವಚನಾನಂದ ಸ್ವಾಮೀಜಿ    

ಹಾವೇರಿ: ‘ನಾವು ಪ್ರಾಣ ಬಿಟ್ಟೇವು, ಮೀಸಲಾತಿ ಬಿಡುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಚಿವರ ಜತೆ ಚರ್ಚಿಸಿದ್ದೇವೆ. ರಾಜ್ಯ ಬಿಜೆಪಿ ಸರ್ಕಾರವೇ ನಮಗೆ ‘2ಎ’ ಮೀಸಲಾತಿ ಕೊಡುತ್ತದೆ ಎಂದು ಸಂಪೂರ್ಣ ವಿಶ್ವಾಸವಿದೆ’ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ನೇತೃತ್ವದಲ್ಲಿ ಈಗಾಗಲೇ ರಾಜ್ಯದ 18 ಜಿಲ್ಲೆಗಳಲ್ಲಿ ಕುಲಶಾಸ್ತ್ರೀಯ ಅಧ್ಯಯನ ಮುಗಿದಿದೆ. ಈ ಅಧ್ಯಯನದ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ಮೀಸಲಾತಿ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. 28 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತದೆ ಎಂಬ ಅಚಲ ವಿಶ್ವಾಸವಿದೆ’ ಎಂದರು.

‘ಪಂಚಮಸಾಲಿ’ ಸರ್ಟಿಫಿಕೇಟ್‌ ಪಡೆಯಿರಿ:ಪಂಚಮಸಾಲಿ ಸಮಾಜದ ಎಲ್ಲ ಬಾಂಧವರು ಮೊದಲು ‘ವೀರಶೈವ ಲಿಂಗಾಯತ ಪಂಚಮಸಾಲಿ’ ಎಂಬ ಜಾತಿ ಪ್ರಮಾಣ ಪತ್ರ ಪಡೆಯಬೇಕು. ಈಗಾಗಲೇ ದಾವಣಗೆರೆ, ಗದಗ ಜಿಲ್ಲೆಯಲ್ಲಿ ಜಾತಿ ಪ್ರಮಾಣ ಪತ್ರ ಕೆಲವರಿಗೆ ಸಿಕ್ಕಿದೆ. ಈ ಜಾತಿ ಪ್ರಮಾಣ ಪತ್ರ ಪಡೆಯದಿದ್ದರೆ, ಮೀಸಲಾತಿ ಸಿಕ್ಕ ನಂತರ ‘3ಬಿ’ಯಲ್ಲಿರುವ ಲಿಂಗಾಯತ ಒಳಪಂಗಡಗಳು ಮುಗಿಬಿದ್ದು, ನಿಜವಾದ ಪಂಚಮಸಾಲಿಗಳಿಗೆ ಅನ್ಯಾಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ADVERTISEMENT

ನವೆಂಬರ್‌ 23ರಿಂದ ಹಾವೇರಿ ಜಿಲ್ಲೆಯಲ್ಲಿ ಜನಜಾಗೃತಿ ಯಾತ್ರೆ ಕೈಗೊಂಡು, ಡಿಸೆಂಬರ್‌ 11ರಂದು ಹಾವೇರಿ ನಗರದಲ್ಲಿ ‘ಬೃಹತ್‌ ಹಕ್ಕೊತ್ತಾಯ ಸಮಾವೇಶ’ ನಡೆಸುತ್ತೇವೆ. ಕೇಂದ್ರದಲ್ಲಿ ಎಲ್ಲ ವೀರಶೈವ ಲಿಂಗಾಯತರಿಗೆ ‘ಒಬಿಸಿ’ ಮೀಸಲಾತಿ ನೀಡಬೇಕು ಮತ್ತು ರಾಜ್ಯದಲ್ಲಿ ಪಂಚಮಸಾಲಿಗಳಿಗೆ ‘2ಎ’ ಮೀಸಲಾತಿ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಎಂದರು.

ಪೀಠಗಳ ನಡುವೆ ಒಡಕಿಲ್ಲ:ಕೂಡಲಸಂಗಮ ಮತ್ತು ಹರಿಹರ ಪೀಠಗಳ ನಡುವೆ ಹೊಂದಾಣಿಕೆಯಿಲ್ಲವಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ‘ಪೀಠಗಳ ಹೋರಾಟಗಳ ಹಾದಿ ವಿಭಿನ್ನವಾಗಿರಬಹುದು. ಆದರೆ, ಉದ್ದೇಶ ಮೀಸಲಾತಿ ಪಡೆಯುವುದೇ ಆಗಿದೆ. ಪೀಠಗಳ ನಡುವೆ ಯಾವುದೇ ಒಡಕಿಲ್ಲ. ಸಮಾಜದ ಜನರ ಅಭಿಪ್ರಾಯಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.