ಹಾವೇರಿ: ‘ವರದಾ-ಬೇಡ್ತಿ-ಧರ್ಮಾ ನದಿಗಳ ಜೋಡಣೆಗೆ ಜನಾಗ್ರಹ ವ್ಯಕ್ತವಾಗಿದೆ. ಈ ನದಿ ಜೋಡಣೆ ಯೋಜನೆ ಜಾರಿಗಾಗಿ ಪಕ್ಷಾತೀತ ಹೋರಾಟ ಅಗತ್ಯವಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಹುಕ್ಕೇರಿಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವರದಾ-ಬೇಡ್ತಿ ನದಿಗಳ ಜೋಡಣೆ ಯೋಜನೆಯ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
‘ನೀರು ಭಗವಂತ ಕೊಟ್ಟಿರುವ ದೊಡ್ಡ ವರ. ನೀರಿಗೆ ಸಾವಿಲ್ಲ. ನೀರು ಬೇರೆ ಬೇರೆ ರೂಪ ತಾಳಿದರೂ ಪರಿಸರದಲ್ಲೇ ಇರುತ್ತದೆ. ನಾವು ಶಾಲೆಯಲ್ಲಿ ಇದ್ದಾಗ ವಾಟರ್ ಸೈಕಲ್ ಅಂತ ಹೇಳುತ್ತಿದ್ದರು. ನೀರು ಆವಿಯಾಗಿ ಮೋಡವಾಗಿ ಮಳೆಯಾಗಿ ಮತ್ತೆ ಹಳ್ಳ, ನದಿಯಾಗಿ ಹರಿಯತ್ತದೆ. ಮನುಷ್ಯ ಪ್ರಾಣಿಗಳಿಗೆ ಬದುಕಿನ ದಾಹ ತೀರಿಸಲು ನೀರು ಬೇಕು. ನಮ್ಮ ಬದುಕಿಗೆ ಉದ್ಯೋಗಕ್ಕೆ, ಬೇರೆ ವಸ್ತುಗಳ ತಯಾರಿಕೆಗೆ ನೀರು ಬೇಕು. ಒಂದೊಂದು ನದಿಗಳು ಒಂದೊಂದು ಸಂಸ್ಕೃತಿ ಉದಯಕ್ಕೆ ಕಾರಣವಾಗಿದೆ. ನೀರು ಔಷಧವೂ ಹೌದು’ ಎಂದರು.
‘ಕೆರೆಗಳು ಮತ್ತು ಹಳ್ಳಗಳ ನಡುವೆ ನದಿ ದೊಡ್ಡ ಸಂಪರ್ಕ. ನದಿಗಳ ನಿರ್ವಹಣೆಯಿಂದ ನೀರಿನ ಬಳಕೆ ಮಾಡಿಕೊಳ್ಳಬೇಕು. ಹಲವಾರು ನದಿಗಳು ಸಮುದ್ರವನ್ನೇ ಸೇರುವುದಿಲ್ಲ ಹಲವಾರು ನದಿಗಳು ಬತ್ತಿ ಹೋಗುತ್ತಿವೆ. ಅದಕ್ಕಾಗಿ ಬೇಸಿಗೆಯಲ್ಲಿ ತುಂಗಭದ್ರಾ ಭಾಗದಲ್ಲಿ ಹಾವೇರಿ, ಗದಗ, ಶಿರಹಟ್ಟಿ ರಾಣೆಬೆನ್ನೂರು ನಗರಗಳಿಗೆ ನಿರಿನ ಸಮಸ್ಯೆ ಇದೆ. ಎರಡನೇ ಬೆಳೆಗೆ ನೀರು ಸಿಗುತ್ತಿಲ್ಲ’ ಎಂದರು.
ಕೇಂದ್ರದಿಂದ ಸಕಾರಾತ್ಮಕ ಭರವಸೆ: ‘ಬೇಡ್ತಿ ನದಿ ದೊಡ್ಡ ಪ್ರಮಾಣದಲ್ಲಿ ನೀರು ಉತ್ಪಾದನೆ ಮಾಡುವ ನದಿ. ನದಿ ಜೋಡಣೆ ಯೋಜನೆ ಬೇಕೆಂಬ ಆಗ್ರಹ ಹಲವು ವರ್ಷಗಳಿಂದ ಇದೆ. ನದಿ ಜೋಡಣೆ ವಿಚಾರವನ್ನು ರಾಷ್ಟ್ರೀಯ ವಿಚಾರವಾಗಿ ಮಾಡಿದವರು ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. ನದಿ ಜೋಡಣೆ ವಿಚಾರಗಳು ಬೇರೆ ಕಡೆಯೂ ಇದೆ. ವರದಾ-ಬೇಡ್ತಿ ನದಿ ಜೋಡಣೆಗೆ ಕೇಂದ್ರ ಸರ್ಕಾರದಿಂದ ಉತ್ತಮ ಸ್ಪಂದನೆಯಿದೆ’ ಎಂದು ಬೊಮ್ಮಾಯಿ ಹೇಳಿದರು.
ರೈತರಿಗೆ ನೀರಾವರಿ ಜ್ಞಾನ ಅಗತ್ಯ: ‘ಡಿಪಿಆರ್ ಆದ ಮೇಲೆ ಎಷ್ಟು ನೀರು ಬಳಕೆ ಮಾಡಿಕೊಳ್ಳಬೇಕು ಹೀರೆಹಳ್ಳ, ಬೇಡ್ತಿ, ಶಾಲ್ಮಲಾ ಹಳ್ಳ ಇವೆ. ವರದಾ ನದಿಯಲ್ಲಿ ಎಷ್ಟು ನೀರು ಸಿಗುತ್ತದೆಯೋ ಅದೆಲ್ಲವೂ ನಮಗೆ ಬಳಕೆಗೆ ಬರುತ್ತದೆ. ಅದು ಹಾವೇರಿ ಜಿಲ್ಲೆಯಲ್ಲಿ ಬಳಕೆ ಮಾಡಿಕೊಳ್ಳಲು ಸಾಧ್ಯವಿದೆ’ ಎಂದು ಬೊಮ್ಮಾಯಿ ಹೇಳಿದರು.
‘ನದಿ ನೀರನ್ನು ಎಲ್ಲಿ ಸಂಗ್ರಹ ಮಾಡುತ್ತೇವೆ ಎನ್ನುವುದು ಮುಖ್ಯ. ಫಲವತ್ತಾದ ಭೂಮಿ ಮುಳುಗದಂತೆ ನೋಡಬೇಕು. ಪ್ರತಿಯೊಂದು ಹಂತದಲ್ಲಿ ನಾವು ಜಾಗೃತರಾಗಿ ಕೆಲಸ ಮಾಡಬೇಕು. ಈ ಯೋಜನೆಯ ಪ್ರತಿ ಹಂತದಲ್ಲಿ ಏನು ನಡೆಯುತ್ತದೆ ಎನ್ನುವುದು ಗೊತ್ತಾದಾಗ ನಾವು ಏನು ಮಾಡಬೇಕು ಎನ್ನುವುದು ತಿಳಿಯುತ್ತದೆ’ ಎಂದರು.
ಸದಾಶಿವ ಸ್ವಾಮೀಜಿ, ಬಸವ ಶಾಂತಲಿಂಗ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಕುಮಾರ ಸ್ವಾಮೀಜಿ, ಮಾಜಿ ಸಂಸದ ಮಂಜುನಾಥ ಕುನ್ನೂರು, ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಅರುಣಕುಮಾರ ಪೂಜಾರ, ಡಿ.ಎಂ ಸಾಲಿ, ರೈತ ಸಂಘದ ಮುಖಂಡರಾದ ಎ.ಎಸ್ ಬಳ್ಳಾರಿ, ರಾಮಣ್ಣ ಕೆಂಚೆಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷೆ ಮಲ್ಲಿಕಾರ್ಜುನ ಸಾತೇನಹಳ್ಳಿ ಇದ್ದರು.
‘ಉತ್ತರ ಕನ್ನಡ ಜಿಲ್ಲೆಗೆ ತೊಂದರೆಯಾಗುವುದಿಲ್ಲ’
ಬದಲಾದ ಯೋಜನೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಎಲ್ಲರಿಗೂ ಮನವರಿಕೆ ಮಾಡಬೇಕು. ಪ್ರಾಮಾಣಿಕತೆ ಇದ್ದರೆ ಎಲ್ಲ ಸಮಸ್ಯೆಗೂ ಪರಿಹಾರ ಇದೆ. ಸುಮಾರು 26 ಟಿಎಂಸಿ ಅಡಿ ನೀರನ್ನು ನಾವು ಯಾವ ರೀತಿ ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಚಿಂತನೆ ಮಾಡಬೇಕು. ಇದು ಒಂದೇ ದಿನದಲ್ಲಿ ಅಗುವುದಿಲ್ಲ. ಸುದೀರ್ಘ ಪ್ರಕ್ರಿಯೆ ಇದೆ. ಅದಕ್ಕಾಗಿ ನಾವು ಸಿದ್ಧರಾಗಬೇಕು. ರೈತರಿಗೂ ಯೋಜನೆಯ ಜ್ಞಾನ ಇರಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.