ಹಾವೇರಿ: ‘ಜಿಲ್ಲೆಯ ಜೀವನಾಡಿಯಾಗಿರುವ ವರದಾ–ಧರ್ಮಾ–ಬೇಡ್ತಿ ನದಿಗಳನ್ನು ಜೋಡಿಸುವ ಪ್ರಕ್ರಿಯೆ ಆರಂಭವಾಗಿರುವುದು ಸ್ವಾಗತಾರ್ಹ. ಪ್ರಕೃತಿಗೆ ಧಕ್ಕೆಯಾಗದಂತೆ ಯೋಜನೆ ರೂಪಿಸಿದರೆ, ಜನರಿಗೆ ಕುಡಿಯಲು ಹಾಗೂ ಕೃಷಿಗೆ ನೀರು ಸಿಗಲಿದೆ. ರೈತರು ಬಂಗಾರದ ಬೆಳೆ ಬೆಳೆಯುತ್ತಾರೆ’ ಎಂದು ಹರಿಹರ ಪಂಚಮಸಾಲಿ ಲಿಂಗಾಯತ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ನದಿಗಳ ಸಂರಕ್ಷಣೆ ಆಗಬೇಕು’ ಎಂದರು.
‘ನದಿಗಳನ್ನು ಜೋಡಿಸಬೇಕು ಎಂಬುದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕನಸಾಗಿತ್ತು. ಅದರಂತೆ ವರದಾ–ಬೇಡ್ತಿ–ಧರ್ಮಾ ನದಿಗಳ ಜೋಡಣೆಗೆ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯು (ಎನ್‌ಡಬ್ಲ್ಯುಡಿಎ) ಈಗಾಗಲೇ ವರದಿ ಸಿದ್ಧಪಡಿಸಿದೆ. ಯೋಜನೆ ಜಾರಿಗೆ ಯಾವುದೇ ಅಡ್ಡಿ ಬಂದರೂ ಅದನ್ನು ಪರಿಹರಿಸಿಕೊಂಡು ಮುಂದುವರಿಯಬೇಕು’ ಎಂದು ಹೇಳಿದರು.
‘ಪವಿತ್ರ ನದಿಯಾದ ಗಂಗಾ ಕಲುಷಿತಗೊಂಡಿತ್ತು. ಈಗ ಪರಿಶುದ್ಧ ನದಿಯಾಗಿದೆ. ಇದೇ ಮಾದರಿಯಲ್ಲಿ ಎಲ್ಲ ನದಿಗಳನ್ನು ಪರಿಶುದ್ಧಗೊಳಿಸಬೇಕು. ವರದಾ ಆರತಿ, ತುಂಗಾ ಆರತಿ, ಧರ್ಮಾ ಆರತಿ ಎಂಬ ಧಾರ್ಮಿಕ ಆಚರಣೆಗಳನ್ನು ಮಾಡಬೇಕು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು’ ಎಂದು ತಿಳಿಸಿದರು.
ಹರ ಶ್ರಾವಣ ಕಾರ್ಯಕ್ರಮ: ‘ಶ್ರಾವಣ ಮಾಸದಲ್ಲಿ ಭಕ್ತರಿಗೆ ಇಷ್ಟಲಿಂಗ ಪೂಜೆ ಬಗ್ಗೆ ತಿಳಿಸಲು ಹರ ಶ್ರಾವಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾವು ಯಾವುದೇ ಕೆಲಸ ಮಾಡಿದರೂ ಹರ ಹರ ಮಹದೇವ ಘೋಷಣೆ ಮೂಲಕ ಆರಂಭಿಸುತ್ತೇವೆ. ಹೀಗಾಗಿ, ಈ ಹರ ಕಾರ್ಯಕ್ರಮ ಶುರು ಮಾಡಿದ್ದೇವೆ’ ಎಂದು ವಚನಾನಂದ ಸ್ವಾಮೀಜಿ ಹೇಳಿದರು.
2ಎ ಮೀಸಲಾತಿಗೆ ಕಾನೂನು ಹೋರಾಟ: ‘ನಮ್ಮ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಹೋರಾಟ ಮಾಡಲಾಗಿತ್ತು. ಈ ಸಂಗತಿ ಈಗ ನ್ಯಾಯಾಲಯದಲ್ಲಿದೆ. ನಮ್ಮ ಪರವಾಗಿ ವಾದಿಸಲು ವಕೀಲರನ್ನು ನಿಯೋಜಿಸಲಾಗಿದೆ. ಕಾನೂನಿನ ಮೂಲಕವೇ ಮೀಸಲಾತಿ ಪಡೆಯಲು ಪ್ರಯತ್ನ ನಡೆದಿದೆ’ ಎಂದು ಸ್ವಾಮೀಜಿ ತಿಳಿಸಿದರು.
‘ಕೇಂದ್ರ ಸರ್ಕಾರದಿಂದ ನಮ್ಮ ಸಮಾಜಕ್ಕೆ ಒಬಿಸಿ ಮೀಸಲಾತಿ ನೀಡಬೇಕೆಂಬ ಆಗ್ರಹವಿದೆ. ಕೇಂದ್ರದಿಂದ ರಾಜ್ಯಕ್ಕೆ ಕಡತ ಬಂದಿದೆ. ಉಪ ಸಮಿತಿ ಮೂಲಕ ಮುಂದಿನ ತೀರ್ಮಾನ ಹೊರಬೀಳಬೇಕಿದೆ. ನಮ್ಮ ಸಮಾಜದ 80 ಲಕ್ಷ ಜನರಿದ್ದಾರೆ. ನಮ್ಮಲ್ಲಿ ಸಣ್ಣಪುಟ್ಟ ಸಮಸ್ಯೆ ಇದೆ. ಅದನ್ನು ಬಗೆಹರಿಸಿಕೊಂಡು ಸಮಾಜದ ಸುಧಾರಣೆಯ ಕೆಲಸ ಮಾಡುತ್ತೇವೆ’ ಎಂದರು.
ಮುಖಂಡರಾದ ಪಿ.ಡಿ. ಶಿರೂರ, ಮಲ್ಲಿಕಾರ್ಜುನ ಹಾವೇರಿ, ಮಹೇಶ ಹಾವೇರಿ, ಮಲ್ಲಿಕಾರ್ಜುನ ಅಗಡಿ, ಸೋಮಣ್ಣಗೌಡ ಪಾಟೀಲ, ಸಿದ್ದಲಿಂಗೇಶ ಕಮಡೊಳ್ಳಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.