ADVERTISEMENT

ಹಾವೇರಿ | ವರಮಹಾಲಕ್ಷ್ಮಿ ಹಬ್ಬ; ಮನೆ, ಅಂಗಡಿಗಳಲ್ಲಿ ಪೂಜೆ

ಹೊಸ ವ್ಯಾಪಾರ ಆರಂಭ | ವಿಗ್ರಹಕ್ಕೆ ವಿಶೇಷ ಅಲಂಕಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 2:58 IST
Last Updated 9 ಆಗಸ್ಟ್ 2025, 2:58 IST
ಹಾವೇರಿಯ ರಾಜೇಂದ್ರನಗರದಲ್ಲಿರುವ ಶ್ರೀಲಕ್ಷ್ಮಿ ಸತೀಶ ಲಂಬಿ  ಅವರ ಮನೆಯಲ್ಲಿ ವರ ಮಹಾಲಕ್ಷ್ಮಿ ವಿಗ್ರಹ ಪ್ರತಿಷ್ಠಾಪಿಸಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು
ಹಾವೇರಿಯ ರಾಜೇಂದ್ರನಗರದಲ್ಲಿರುವ ಶ್ರೀಲಕ್ಷ್ಮಿ ಸತೀಶ ಲಂಬಿ  ಅವರ ಮನೆಯಲ್ಲಿ ವರ ಮಹಾಲಕ್ಷ್ಮಿ ವಿಗ್ರಹ ಪ್ರತಿಷ್ಠಾಪಿಸಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಯಿತು   

ಹಾವೇರಿ: ಶ್ರಾವಣ ಮಾಸದ ವರ ಮಹಾಲಕ್ಷ್ಮಿ ಹಬ್ಬವನ್ನು ಜಿಲ್ಲೆಯಾದ್ಯಂತ ಶ್ರದ್ಧಾ–ಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು.

ಜಿಲ್ಲೆಯ ಬಹುತೇಕ ಮನೆಗಳು ಹಾಗೂ ಅಂಗಡಿಗಳಲ್ಲಿ ವರ ಮಹಾಲಕ್ಷ್ಮಿ ವಿಗ್ರಹ ಪ್ರತಿಷ್ಠಾಪಿಸಿದ್ದ ಜನರು, ವಿಶೇಷ ಪೂಜೆ ಸಲ್ಲಿಸಿದರು. ವಿಗ್ರಹದ ಅಲಂಕಾರ ನೋಡುಗರ ಗಮನ ಸೆಳೆಯಿತು.

ಜಿಲ್ಲಾ ಕೇಂದ್ರ ಹಾವೇರಿಯ ಹಲವು ಕಡೆಗಳಲ್ಲಿ ಹಬ್ಬದ ಸಂಭ್ರಮವಿತ್ತು. ಬಸವೇಶ್ವರನಗರ, ಅಶ್ವಿನಿನಗರ, ಇಜಾರಿ ಲಕಮಾಪುರ, ಶಿವಾಜಿನಗರ, ಗುತ್ತಲ ರಸ್ತೆ, ಹಾನಗಲ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಿರುವ ಜನರು ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ADVERTISEMENT

ವರ ಮಹಾಲಕ್ಷ್ಮಿ ವಿಗ್ರಹಕ್ಕೆ ಕೆಂಪು, ನೀಲಿ, ಹಸಿರು ಮತ್ತು ವಿವಿಧ ಬಣ್ಣದ ಸೀರೆ ತೊಡಿಸಲಾಗಿತ್ತು. ಬಾಳೆಗಿಡ, ಚೆಂಡು ಹೂವು, ಸೇವಂತಿ ಹೂವು ಹಾಗೂ ವಿವಿಧ ಹೂವುಗಳಿಂದ ಸಿಂಗರಿಸಲಾಗಿತ್ತು. ತಳಿರು–ತೋರಣ ಆಕರ್ಷಣೀಯವಾಗಿತ್ತು. ಮನೆ ಎದುರು ಬಣ್ಣ ಬಣ್ಣದ ರಂಗೋಲಿ ಹಬ್ಬಕ್ಕೆ ಕಳೆ ತಂದಿತು.

ವರ್ಷಪೂರ್ತಿ ವ್ಯಾಪಾರ ಮಾಡುವ ವ್ಯಾಪಾರಿಗಳು, ತಮ್ಮ ಅಂಗಡಿ ಹಾಗೂ ವ್ಯಾಪಾರ ಸ್ಥಳಗಳಲ್ಲಿಯೂ ವರ ಮಹಾಲಕ್ಷ್ಮಿ ಹಬ್ಬ ಆಚರಿಸಿದರು. ಹಬ್ಬಕ್ಕಾಗಿ ಗುರುವಾರ ರಾತ್ರಿಯಿಂದಲೇ ತಯಾರಿ ನಡೆದಿತ್ತು. ಶುಕ್ರವಾರ ಬೆಳಿಗ್ಗೆ ಅಲಂಕಾರಗೊಂಡಿದ್ದ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ, ನೈವೇದ್ಯ ಹಿಡಿದು ಇಷ್ಟಾರ್ಥ ಸಿದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ಹಲವು ದೇವಸ್ಥಾನಗಳಲ್ಲಿಯೂ ಹಬ್ಬದ ಸಡಗರ ಮನೆ ಮಾಡಿತ್ತು. ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆ ಹಾಗೂ ಸಂಜೆ ವೇಳೆ ಹಲವರು ದೇವಸ್ಥಾನಗಳಿಗೆ ಭೇಟಿ ನೀಡಿ, ದೇವರ ದರುಶನ ಪಡೆದರು.

ಯುವತಿಯರು ಹಾಗೂ ಮಹಿಳೆಯರು, ಹೊಸ ಸೀರೆಯನ್ನು ತೊಟ್ಟು ವರ ಮಹಾಲಕ್ಷ್ಮಿ ಹಬ್ಬಕ್ಕೆ ಮೆರುಗು ತಂದರು.

ಸಾರ್ವಜನಿಕ ಸ್ಥಳಗಳು ಖಾಲಿ: ಹಾವೇರಿಯ ಹಲವು ಸಾರ್ವಜನಿಕ ಸ್ಥಳಗಳಲ್ಲಿ ನಿತ್ಯವೂ ಜನಸಂಗುಳಿ ಇರುತ್ತಿತ್ತು. ಆದರೆ, ಶುಕ್ರವಾರ ಜನರ ಸಂಖ್ಯೆ ಕಡಿಮೆ ಇತ್ತು. ವರ ಮಹಾಲಕ್ಷ್ಮಿ ಹಬ್ಬ ಇದ್ದಿದ್ದರಿಂದ, ಜನರು ಹಬ್ಬದ ಆಚರಣೆಯಲ್ಲಿ ತೊಡಗಿದ್ದರು.

ರಾಣೆಬೆನ್ನೂರು, ಹಾನಗಲ್, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲೂ ಹಬ್ಬದ ಸಂಭ್ರಮವಿತ್ತು. ಹಬ್ಬದ ನಿಮಿತ್ತ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸಿದ್ದ ಜನರು, ಸಹಭೋಜನ ಸವಿದರು. ಕುಟುಂಬಸ್ಥರು, ಪರಿಚಯಸ್ಥರು ಹಾಗೂ ಸ್ನೇಹಿತರನ್ನೂ ಮನೆಗೆ ಆಹ್ವಾನಿಸಿ ಹಬ್ಬದ ಊಟ ಮಾಡಿಸಿದರು.

ವರ ಮಹಾಲಕ್ಷ್ಮಿ ಹಬ್ಬದಂದು ವ್ಯಾಪಾರ ಆರಂಭಿಸಿದರೆ ಉತ್ತಮ ಬೆಳವಣಿಗೆ ಆಗುತ್ತದೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಹಲವರು, ಹೊಸ ಅಂಗಡಿ ಆರಂಭಿಸಿದರು. ಬಟ್ಟೆ, ಬೇಕರಿ, ಹೋಟೆಲ್‌ಗಳನ್ನು ಆರಂಭಿಸಿ ವಿಶೇಷ ಪೂಜೆ ಮಾಡಿದರು.

ಹಾವೇರಿ ಶಿವಾಜಿನಗರದ ಭುವನೇಶ್ವರಿ ದೇವಿ (ವಡ್ಡಮ್ಮ ದೇವಿ) ದೇವಸ್ಥಾನದಲ್ಲಿ ವರ ಮಹಾಲಕ್ಷ್ಮಿ ಹಬ್ಬದ ನಿಮಿತ್ತ ಶುಕ್ರವಾರ ದೇವಿ ಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.