ADVERTISEMENT

ಹಾವೇರಿ: ‘ವಾತ್ಸಲ್ಯ’ ಶಿಬಿರ, ಶೇ 90ರಷ್ಟು ಪ್ರಗತಿ

ಕೊರೊನಾ ಮೂರನೇ ಅಲೆಯಿಂದ ಮಕ್ಕಳನ್ನು ರಕ್ಷಿಸಲು ಸಿ.ಎಂ ತವರು ಜಿಲ್ಲೆಯಲ್ಲಿ ವಿನೂತನ ಕ್ರಮ

ಸಿದ್ದು ಆರ್.ಜಿ.ಹಳ್ಳಿ
Published 31 ಜುಲೈ 2021, 2:51 IST
Last Updated 31 ಜುಲೈ 2021, 2:51 IST
ಹಾವೇರಿ ನಗರದಲ್ಲಿ ‘ವಾತ್ಸಲ್ಯ’ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಕ್ಕಳನ್ನು ತಪಾಸಣೆ ಮಾಡುತ್ತಿರುವ ದೃಶ್ಯ  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ
ಹಾವೇರಿ ನಗರದಲ್ಲಿ ‘ವಾತ್ಸಲ್ಯ’ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಕ್ಕಳನ್ನು ತಪಾಸಣೆ ಮಾಡುತ್ತಿರುವ ದೃಶ್ಯ  –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ   

ಹಾವೇರಿ: ಕೊರೊನಾ ಮೂರನೇ ಅಲೆಯಿಂದ 4.7 ಲಕ್ಷ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಯಲ್ಲಿ ಜಾರಿಗೊಳಿಸಿದ ‘ವಾತ್ಸಲ್ಯ’ ಆರೋಗ್ಯ ತಪಾಸಣೆ ಕಾರ್ಯಕ್ರಮ ಶೇ 90ರಷ್ಟು ಪ್ರಗತಿ ಸಾಧಿಸಿದೆ.

ಜಿಲ್ಲೆಯ 1,918 ಅಂಗನವಾಡಿ ಹಾಗೂ 1,878 ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿರುವ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ತಪಾಸಣೆ ನಡೆಸಿ, ‘ಆರೋಗ್ಯ ತಪಾಸಣಾ ಚೀಟಿ’ ವಿತರಣೆ ಮಾಡಲಾಗುತ್ತಿದೆ.

1,020 ಮಕ್ಕಳಿಗೆ ಅಪೌಷ್ಟಿಕತೆ:

ADVERTISEMENT

‘ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿಜೂನ್‌ 25ರಿಂದ ಆರಂಭಗೊಂಡ ‘ವಾತ್ಸಲ್ಯ’ ಆರೋಗ್ಯ ತಪಾಸಣಾ ಶಿಬಿರ ಒಂದು ತಿಂಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿದೆ. 1,79,463 ಬಾಲಕರು ಮತ್ತು 1,76,348 ಬಾಲಕಿಯರ ತಪಾಸಣೆ ಆಗಿದೆ. ತಪಾಸಣೆಗೆ ಬಾರದಿರುವ ಮಕ್ಕಳಿಗೂ ಎರಡನೇ ಸುತ್ತಿನಲ್ಲಿ ತಪಾಸಣೆ ಮಾಡುತ್ತೇವೆ. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದ 1,020 ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್‌ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ’ ಎಂದು ಡಿಎಚ್‌ಒ ರಾಘವೇಂದ್ರಸ್ವಾಮಿ ಎಚ್‌.ಎಸ್‌. ತಿಳಿಸಿದರು.

ಆರೋಗ್ಯ ಶಿಬಿರದಲ್ಲಿ 3,506 ಮಕ್ಕಳಿಗೆ ನ್ಯೂನತೆ, 8,027 ಮಕ್ಕಳಿಗೆ ವಿವಿಧ ರೋಗಗಳು, 1,152 ಮಕ್ಕಳಿಗೆ ಬೆಳವಣಿಗೆ ಕುಂಠಿತ ಹಾಗೂ 1,297 ಮಕ್ಕಳಿಗೆ ಹುಟ್ಟಿನಿಂದಲೇ ದೋಷಗಳು ಕಂಡು ಬಂದಿವೆ. ಒಟ್ಟಾರೆ 18,359 ಮಕ್ಕಳಿಗೆ ಆರೋಗ್ಯ ಸಮಸ್ಯೆಗಳು ಕಂಡು ಬಂದಿದೆ. ಸೀಳುತುಟಿ, ದೃಷ್ಟಿದೋಷ, ಹೃದಯ ಸಂಬಂಧಿ ಕಾಯಿಲೆ, ವಿಟಮಿನ್‌ ಕೊರತೆ, ರಕ್ತಹೀನತೆ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳನ್ನು ತಜ್ಞ ವೈದ್ಯರಿಂದ ತಪಾಸಣೆ ನಡೆಸಿ, ಹೆಚ್ಚಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

3,365 ಮಕ್ಕಳಿಗೆ ಕೊರೊನಾ ಲಕ್ಷಣ:

ಜಿಲ್ಲೆಯ ಎಂಟು ತಾಲ್ಲೂಕುಗಳಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ 3,365 ಮಕ್ಕಳಿಗೆ ಕೊರೊನಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಎಲ್ಲ ಮಕ್ಕಳಿಗೂ ಕೋವಿಡ್‌ ಪರೀಕ್ಷೆ (ರ‍್ಯಾಪಿಡ್‌ ಆ್ಯಂಟಿಜೆನ್‌ ಟೆಸ್ಟ್‌) ನಡೆಸಲಾಗಿದ್ದು, ಎಲ್ಲರ ವರದಿಗಳು ‘ನೆಗೆಟಿವ್‌’ ಬಂದಿವೆ. ಒಂದು ಮಗುವಿಗೆ ಮಾತ್ರ ಕೋವಿಡ್‌ ದೃಢಪಟ್ಟಿದೆ. ಆ ಮಗುವಿಗೆ ಕೋವಿಡ್‌ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ದಡಾರ ಲಸಿಕೆ:

‘ಧನುರ್ವಾಯು, ಗಂಟಲುಮಾರಿ, ನಾಯಿ ಕೆಮ್ಮುಗಳನ್ನು ತಡೆಗಟ್ಟಲು ‘ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ’ದಡಿ ನೀಡುವ ಲಸಿಕೆಗಳನ್ನು ‘ವಾತ್ಸಲ್ಯ’ ಕಾರ್ಯಕ್ರಮದಲ್ಲೇ ನೀಡುತ್ತಿದ್ದೇವೆ. ಸುಮಾರು 19 ಸಾವಿರ ಮಕ್ಕಳಿಗೆ ಲಸಿಕೆಗಳನ್ನು ಈಗಾಗಲೇ ನೀಡಿದ್ದೇವೆ. ಈ ಡಿಪಿಟಿ, ಟಿಡಿ ಲಸಿಕೆಗಳು ಕೂಡ ವೈರಾಣುಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿವೆ’ ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಜಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷ ಕೋವಿಡ್‌ ವಾರ್ಡ್‌

ಕೋವಿಡ್‌ ಪೀಡಿತ ಮಕ್ಕಳಿಗಾಗಿಯೇ ಜಿಲ್ಲಾಸ್ಪತ್ರೆಯಲ್ಲಿ ‘ವಿಶೇಷ ಕೋವಿಡ್‌ ವಾರ್ಡ್‌’ ತೆರೆಯಲಾಗಿದೆ.ಜಿಲ್ಲಾಸ್ಪತ್ರೆಯಲ್ಲಿ 30 ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆ, ತಾಲ್ಲೂಕು ಆಸ್ಪತ್ರೆಯಲ್ಲಿ 10 ಹಾಸಿಗೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 1 ಹಾಸಿಗೆಯನ್ನು ಮಕ್ಕಳ ಕೋವಿಡ್‌ ಚಿಕಿತ್ಸೆಗಾಗಿಯೇ ಮೀಸಲಿಡಲಾಗಿದೆ.

ಬಸವರಾಜ ಬೊಮ್ಮಾಯಿ ಪರಿಕಲ್ಪನೆಯ ‘ವಾತ್ಸಲ್ಯ’ ಕಾರ್ಯಕ್ರಮ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಉಳಿದ ಜಿಲ್ಲೆಗಳಲ್ಲೂ ಅಳವಡಿಸಿಕೊಳ್ಳಲಾಗುತ್ತಿದೆ
– ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

4.7 ಲಕ್ಷ ಮಕ್ಕಳಿಗೆ ‘ಹೆಲ್ತ್‌ ಕಾರ್ಡ್‌’ ವಿತರಿಸುತ್ತಿದ್ದು, ಇದರಲ್ಲಿ ಮಕ್ಕಳ ಆರೋಗ್ಯ ಸಂಬಂಧಿ ವಿವರ ಮತ್ತು ವೈದ್ಯರ ಸಲಹೆಗಳು ಇರುತ್ತವೆ
– ಡಾ.ರಾಘವೇಂದ್ರಸ್ವಾಮಿ, ಡಿಎಚ್‌ಒ, ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.