ADVERTISEMENT

ನೀರಿಗೆ ಕಾಯುವ ‘ಸೈನಿಕರ’ ಗ್ರಾಮಸ್ಥರು

ಮನೆಗೊಬ್ಬರು ಸೇನೆಗೆ ಸೇರಿದ ಕಾರಣ ಹೆಸರುವಾಸಿಯಾದ ಕಲಿವಾಳ

ಗಣೇಶಗೌಡ ಎಂ.ಪಾಟೀಲ
Published 9 ಮೇ 2019, 9:01 IST
Last Updated 9 ಮೇ 2019, 9:01 IST
ಸವಣೂರ ತಾಲ್ಲೂಕಿನ ಕಲಿವಾಳ ಗ್ರಾಮದಲ್ಲಿ ನೀರಿಗಾಗಿ ಕೊಡಪಾನವನ್ನಿಟ್ಟು ಕಾಯುತ್ತಿರುವ ಜನ
ಸವಣೂರ ತಾಲ್ಲೂಕಿನ ಕಲಿವಾಳ ಗ್ರಾಮದಲ್ಲಿ ನೀರಿಗಾಗಿ ಕೊಡಪಾನವನ್ನಿಟ್ಟು ಕಾಯುತ್ತಿರುವ ಜನ   

ಸವಣೂರ (ಹಾವೇರಿ ಜಿಲ್ಲೆ): ದೇಶ ಕಾಯುವ ಸೈನಿಕರ ಗ್ರಾಮ ಎಂದೇ ಖ್ಯಾತಿ ಪಡೆದ ತಾಲ್ಲೂಕಿನ ಕಲಿವಾಳದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಜನತೆ ನೀರಿಗಾಗಿ ಕಾಯುವ ದೃಶ್ಯಗಳು ಸಾಮಾನ್ಯವಾಗಿವೆ.

‘ಇಚ್ಚಂಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಇಲ್ಲಿ ಸುಮಾರು 350ಕ್ಕೂ ಹೆಚ್ಚು ಮನೆಗಳಿದ್ದು, ಅಂದಾಜು 2,500ಕ್ಕೂ ಜನಸಂಖ್ಯೆ ಇದೆ. ಇಲ್ಲಿನ ಬಹುತೇಕ ಮನೆಗಳ ಸದಸ್ಯರೊಬ್ಬರು ಸೇನೆಯಲ್ಲಿದ್ದಾರೆ. ಇಲ್ಲವೇ, ಸೇವೆಯಿಂದ ನಿವೃತ್ತಿ ಅಥವಾ ಹುತಾತ್ಮರಾಗಿದ್ದಾರೆ. ಆದರೆ, ಅವರ ಮನೆಯವರು ನೀರಿಗಾಗಿ ಪಡುತ್ತಿರುವ ಪಡಿಪಾಟೀಲನ್ನು ರಾಜಕಾರಣಿಗಳು ಬಗೆಹರಿಸಿಲ್ಲ’ ಎಂದು ಈರಣ್ಣ ದೇಸಾಯಿ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮದಲ್ಲಿ ಸುಮಾರು 140 ನಳಗಳಿದ್ದು, ಇವುಗಳಲ್ಲಿ ನೀರು ಬರುತ್ತಿಲ್ಲ. ಏನಿದ್ದರೂ, ರಾಜಕಾರಣಿಗಳಂತೆ ಬಾಯಿಮಾತಿನಬಿಸಿಗಾಳಿ ಮಾತ್ರ. ನೀರಿಗಾಗಿ ಜನ ಬಾಯಿ ಬಿಟ್ಟು ಕೂರುವಂತಾಗಿದೆ’ ಎಂದು ನೀಲಪ್ಪ ಹರಿಜನ ದೂರಿದರು.

ADVERTISEMENT

‘ಗ್ರಾಮದ 7 ಕೊಳವೆಬಾವಿಗಳ ಪೈಕಿ, ನಾಲ್ಕರಲ್ಲಿ ಮಾತ್ರ ಸ್ವಲ್ಪ ನೀರಿದೆ. ಹೊಸಕೆರೆಯಲ್ಲಿರುವ ಕೊಳವೆಬಾವಿಯಿಂದ ತಕ್ಕಮಟ್ಟಿಗೆ ನೀರು ಪೂರೈಕೆಯಾಗುತ್ತಿದ್ದು, ನಾವು ನಿಟ್ಟುಸಿರು ಬಿಡುತ್ತಿದ್ದೇವೆ’ ಎನ್ನುತ್ತಾರೆ ನಿಂಗಪ್ಪ ಗೊಡ್ಡೆಮ್ಮಿ.

‘ನಳಗಳು ಕೈ ಕೊಟ್ಟಿದ್ದು, ಜನ– ಜಾನುವಾರುಗಳಿಗೂ ಸಮಸ್ಯೆ ಉಂಟಾಗಿದೆ. ಅದಕ್ಕಾಗಿ ಮೂರು ಮಿನಿ ಟ್ಯಾಂಕ್‌ಗಳಿಗೆ ನೀರು ಶೇಖರಣೆ ಮಾಡುತ್ತಿದ್ದಾರೆ. ಇದರಿಂದ ನಿದ್ದೆಗಟ್ಟು ನೀರಿಗೆ ಕಾದು, ನೀರು ಬಂದಾಗ ಅಡುಗೆ ಮಾಡುವ ಸ್ಥಿತಿ ಬಂದಿದೆ’ ಎನ್ನುತ್ತಾರೆ ಗಂಗವ್ವ ಹರಿಜನ.

ನೀರಿಲ್ಲದ ನಳಕ್ಕೂ ತೆರಿಗೆ:ನಳದಲ್ಲಿ ಸಮರ್ಪಕವಾಗಿ ನೀರು ಬಾರದಿದ್ದರೂ, ತೆರಿಗೆ ಪಾವತಿಸಬೇಕು ಎಂದು ಗ್ರಾಮ ಪಂಚಾಯ್ತಿ ಪಟ್ಟು ಹಿಡಿಯುತ್ತಿದೆ ಎಂದು ಸ್ಥಳೀಯರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.