ADVERTISEMENT

‘ಸತ್ತ ಪ್ರಜೆ’ಯ ಸರ್ಜಿಕಲ್‌ ಸ್ಟೈಕ್; ರೈತ ಸಂಘದ ಮೂಲಕ ಬರಪೀಡಿತ ಗ್ರಾಮಗಳಿಗೆ ನೀರು

ಜಲಾಮೃತ ಆಂದೋಲನ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 17:49 IST
Last Updated 9 ಏಪ್ರಿಲ್ 2019, 17:49 IST
‘ಬ್ಯಾಡಗಿಯ ಸತ್ತ ಪ್ರಜೆ’ ಫೇಸ್‌ಬುಕ್ ಖಾತೆಯ ಒಂದು ಪುಟ
‘ಬ್ಯಾಡಗಿಯ ಸತ್ತ ಪ್ರಜೆ’ ಫೇಸ್‌ಬುಕ್ ಖಾತೆಯ ಒಂದು ಪುಟ   

ಹಾವೇರಿ:‘ಬ್ಯಾಡಗಿ ಅಭಿವೃದ್ಧಿಗೆ ಸಹಕರಿಸದ ಅಧಿಕಾರಿಗಳು ಮತ್ತು ರಾಜಕಾರಣಿಗಳ ವಿರುದ್ಧ ನನ್ನ ಸರ್ಜಿಕಲ್ ಸ್ಟ್ರೈಕ್’ ಎಂಬ ಘೋಷ ವಾಕ್ಯದೊಂದಿಗೆ ‘ಬ್ಯಾಡಗಿಯ ಸತ್ತ ಪ್ರಜೆ’ ಎಂಬ ಫೇಸ್‌ಬುಕ್ ಪುಟವು ತಾಲ್ಲೂಕಿನ ನೀರಿನ ಬವಣೆ ನೀಗಿಸುತ್ತಿದೆ.

ವೈಯಕ್ತಿಕ ವಿವರಳು ಇಲ್ಲದೇ ‘ಬ್ಯಾಡಗಿಯ ಸತ್ತ ಪ್ರಜೆ’ ಎಂಬ ಫೇಸ್‌ಬುಕ್ ಪುಟ ಆರಂಭಿಸಲಾಗಿದ್ದು, ಇದರಲ್ಲಿ ಬ್ಯಾಡಗಿಯ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗುತ್ತಿದೆ. ರಸ್ತೆ ಅಗಲೀಕರಣ, ಜನಪ್ರತಿನಿಧಿಗಳ ವೈಫಲ್ಯ, ಅಧಿಕಾರಿಗಳ ಕಾರ್ಯವೈಖರಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ‘ಖಾರ’ವಾಗಿಯೇ ಕಮೆಂಟ್‌ಗಳು ಹಾಕಲಾಗುತ್ತಿದೆ.

ಈ ನಡುವೆಯೇ ಬ್ಯಾಡಗಿ ತಾಲ್ಲೂಕಿನ ಆಣೂರ ಕೆರೆಗೆ ನೀರು ತುಂಬಿಸಲು ಆಗ್ರಹಿಸಿ ತಾಲ್ಲೂಕಿನ ರೈತರು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರು. ಇದೇ ಸಂದರ್ಭದಲ್ಲಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆಯೂ ತೀವ್ರಗೊಂಡಿತ್ತು. ಇದಕ್ಕೆ ಅಧಿಕಾರಿಗಳಿಂದ ಸ್ಪಂದನೆ ಸಿಗದ ಕಾರಣ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬ್ಯಾಡಗಿ ತಾಲ್ಲೂಕು ಘಟಕದ ನೇತೃತ್ವದಲ್ಲಿ ‘ಜಲಾಮೃತ’ ಅಭಿಯಾನವು ‘ಬ್ಯಾಡಗಿಯ ಸತ್ತ ಪ್ರಜೆ’ ಪುಟದ ಮೂಲಕ ಆರಂಭಗೊಂಡಿತ್ತು.

ADVERTISEMENT

‘ಸತ್ತ ಪ್ರಜೆ’ ಫೇಸ್‌ಬುಕ್ ಪುಟದಲ್ಲಿ ಅಭಿಯಾನದ ಮೊಬೈಲ್ ಮತ್ತು ವಾಟ್ಸಪ್‌ ಸಂಖ್ಯೆಗಳನ್ನು ಹಾಕಿದ್ದಾರೆ. ಅದನ್ನು ನೋಡಿ, ನೀರಿನ ಸಮಸ್ಯೆ ಎದುರಿಸುತ್ತಿರುವ ಹಳ್ಳಿಗಳ ಜನ ಕರೆ ಮಾಡುತ್ತಾರೆ. ಇನ್ನೊಂದೆಡೆ, ಹಲವರು ನೀರು ಪೂರೈಕೆಗೆ ಹಣ ನೀಡುತ್ತಿದ್ದಾರೆ. ಕೆಲವು ಮುಖಂಡರು ನಾಲ್ಕೈದು ಟ್ಯಾಂಕರ್‌ ವೆಚ್ಚವನ್ನು ಭರಿಸಿದ್ದಾರೆ. ಕೆಲವು ಸಮಾನಮನಸ್ಕರು ಒಟ್ಟುಗೂಡಿಸಿ ಹಣ ನೀಡಿದ್ದಾರೆ. ಹೀಗೆ ಬಂದ ಹಣದಲ್ಲಿ ನಾವು ನೀರನ್ನು ಪೂರೈಸುತ್ತಿದ್ದೇವೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು.

‘ಈಗಾಗಲೇ ಬನ್ನಿಹಟ್ಟಿ, ಜೋಯಿಸರಹಳ್ಳಿ, ಬಿಸಲಹಳ್ಳಿ, ರಾಮಗೊಂಡನಹಳ್ಳಿ, ಮಾಸಣಗಿ, ಶಿಡೇನೂರ, ಹಿರೇನಂದಿಹಳ್ಳಿ, ಅಂಗರಗಟ್ಟಿ ಮತ್ತಿತರ ಗ್ರಾಮಗಳಿಗೆ ನೀರು ಪೂರೈಸಿದ್ದೇವೆ. ನೀರು ಪೂರೈಸಿದ ಫೋಟೊವನ್ನೂ ‘ಸತ್ತ ಪ್ರಜೆ’ಯಲ್ಲಿ ಹಾಕಲಾಗುತ್ತಿದೆ’ ಎಂದರು.

‘ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ಈ ಅಭಿಯಾನದಿಂದ ತುರ್ತು ಸಂದರ್ಭದಲ್ಲಿ ನಮ್ಮ ಗ್ರಾಮಕ್ಕೆ ನೀರು ಸಿಕ್ಕಿತ್ತು’ ಎಂದು ಶಿಡೇನೂರಿನ ರೈತ ಮಹದೇವ ತಿಳಿಸಿದರು.

*
‘ಜಲಾಮೃತ’ವು ಜನರೇ ನೀಡಿದ ಹಣದಿಂದ ಜನರಿಗೆ ನೀರು ಪೂರೈಸುವ ವಿಶೇಷ ಅಭಿಯಾನವಾಗಿದೆ. ‘ಬ್ಯಾಡಗಿಯ ಸತ್ತ ಪ್ರಜೆ’ ಫೇಸ್‌ಬುಕ್‌ ಪುಟವು ಇದಕ್ಕೆ ವೇದಿಕೆ ನೀಡಿದೆ.
–ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡರು

*
ಜಿಲ್ಲಾ ಕೇಂದ್ರವಾದ ಹಾವೇರಿ ನಗರಕ್ಕೇ ಒಂದು ತಿಂಗಳು ನೀರು ಬಂದಿರಲಿಲ್ಲ. ಈಗಲೂ ವಾರಕ್ಕೊಮ್ಮೆ ನೀರು ಬರುತ್ತಿಲ್ಲ. ಜನತೆಯೇ ಸ್ವಂತ ಹಣದಲ್ಲಿ ಟ್ಯಾಂಕರ್ ನೀರು ಹಾಕಿಸಿಕೊಳ್ಳುತ್ತಿದ್ದಾರೆ.
–ಶಿವಯೋಗಿ ಬಿ.,ಹಾವೇರಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.