ADVERTISEMENT

ತುಂಗಭದ್ರಾ ನದಿಯಲ್ಲಿ ಪ್ರವಾಹ | ಹೊಲಕ್ಕೆ ನುಗ್ಗಿದ ನೀರು; ಬೆಳೆಗಳು ಜಲಾವೃತ

ನಿರಂತರ ಮಳೆ; ತುಂಗಭದ್ರಾ ನದಿಯಲ್ಲಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 16:11 IST
Last Updated 18 ಜುಲೈ 2024, 16:11 IST
ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ರೈತ ಗಂಗಾಧರಯ್ಯ ಪೂಜಾರ ಅವರ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ತುಂಗಭದ್ರಾ ನದಿ ನೀರಿನಲ್ಲಿ ಜಲಾವೃತಗೊಂಡಿದೆ
ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ರೈತ ಗಂಗಾಧರಯ್ಯ ಪೂಜಾರ ಅವರ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆ ತುಂಗಭದ್ರಾ ನದಿ ನೀರಿನಲ್ಲಿ ಜಲಾವೃತಗೊಂಡಿದೆ    

ರಾಣೆಬೆನ್ನೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಇಲ್ಲಿನ ತುಂಗಭದ್ರಾ ಮತ್ತು ಕುಮದ್ವತಿ ನದಿ ತೀರದ ಪ್ರದೇಶಗಳಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ನದಿ ನೀರು ರೈತರ ಹೊಲಗಳಿಗೆ ನುಗ್ಗಿ ಬೆಳೆಗಳು ಜಲಾವೃತವಾಗಿದೆ. ಪ್ರವಾಹದ ನೀರು ಮನೆಗಳಿಗೂ ನುಗ್ಗಲಿದೆ ಎಂಬ ಆಂತಕದಲ್ಲಿ ಇಲ್ಲಿನ ನದಿ ತೀರದ ನಿವಾಸಿಗಳು ಆತಂಕದಲ್ಲಿದ್ದಾರೆ.

ಏಕಾಏಕಿ ನದಿ ನೀರಿನ ಪ್ರವಾಹ ಹೆಚ್ಚಾಗಿದ್ದರಿಂದ ನದಿ ತೀರದ ರೈತರ ಪಂಪಸೆಟ್ ನೀರಿನಲ್ಲಿ ಮುಳುಗಿವೆ.
ಚೌಡಯ್ಯದಾನಪುರದ ಬಳಿ ಮುಕ್ತೇಶ್ವರ ದೇವಸ್ಥಾನದ ಕೊನೆಯ ಮೆಟ್ಟಿಲುವರೆಗೂ ನದಿ ನೀರು ಆವರಿಸಿದ್ದು, ಇಲ್ಲಿನ ಅಂಬಿಗರ ಚೌಡಯ್ಯನ ಗದ್ದುಗೆ ನದಿ ನೀರಿನಿಂದ ಮುಚ್ಚಿಕೊಂಡಿದೆ. ಚಂದಾಪುರ ಮತ್ತು ಹರನಗಿರಿ ಗ್ರಾಮದ ನಡುವಿನ ರಸ್ತೆ ಬಂದ್‌ ಆಗುವ ಹಂತ ತಲುಪಿದೆ.

ತಾಲ್ಲೂಕಿನ ಚಿಕ್ಕಕುರುವತ್ತಿ, ಹೀಲದಹಳ್ಳಿ, ಕುದರಿಹಾಳ, ಮೇಡ್ಲೇರಿ, ಉದಗಟ್ಟಿ, ಸೋಮಲಾಪುರ, ಮುದೇನೂರು, ಕೋಟಿಹಾಳ ಸೇರಿದಂತೆ ಬಹುತೇಕ ತುಂಗಭದ್ರ ನದಿ ತೀರದ ಗ್ರಾಮಗಳಲ್ಲಿ ರೈತರು  ಪಂಪಸೆಟ್ ಹಾಗೂ ಪೈಪ್‌ಲೈನ್‌ ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ.

ADVERTISEMENT

ಪ್ರವಾಹ ಅಪಾಯಮಟ್ಟದಲ್ಲಿ ಹೆಚ್ಚಾದರೂ ತಾಲ್ಲೂಕು ಆಡಳಿತ ಇದುವರೆಗೂ ಯಾವುದೇ ಮುನ್ಸೂಚನೆ ನೀಡಿಲ್ಲ ಎಂಬುದು ರೈತರ ಆರೋಪವಾಗಿದೆ.

ನದಿ ತೀರದ ಗ್ರಾಮಗಳಲ್ಲಿ ರೈತರ ಬೆಳೆಗಳಾದ ಮೆಕ್ಕೆಜೋಳ, ಹತ್ತಿ, ಬೀಟ್ ರೂಟ್, ಹೂ ಕೋಸು ಸೇರಿದಂತೆ ತರಕಾರಿ ಬೆಳೆಗಳು ಜಲಾವೃತಗೊಂಡಿವೆ.  ಚೌಡಯ್ಯದಾಪುರ ಗ್ರಾಮದ ರೈತ ಗಂಗಾಧರಯ್ಯ ಪೂಜಾರ ಅವರ ಹೊಲದಲ್ಲಿನ ಮೆಕ್ಕೆಜೋಳ, ಚೆಂಡೂ ಹೂ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ. ಗುರುಪಾದಪ್ಪ ದೀಪಾವಳಿ, ಶಿವಮೂರ್ತೆಯ್ಯ ಪೂಜಾರ, ವಿಶ್ವನಾಥ ಒಡೆಯರ, ಪುಟ್ಟಪ್ಪ ಬನ್ನಿಹಟ್ಟಿ ಮುಂತಾದ ರೈತರ ಜಮೀನುಗಳಲ್ಲಿನ ನೂರಾರು ಎಕರೆ ಮೆಕ್ಕೆಜೋಳ ಬೆಳೆ ಹಾನಿಗೊಳಗಾಗಿವೆ.

ರೈತರ ಬೆಳೆಯ ಹಾನಿಯನ್ನು ಕಂದಾಯ ಇಲಾಖೆ ಕೂಡಲೇ ಸರ್ವೆ ಮಾಡಿಸಬೇಕು. ಸರ್ಕಾರದಿಂದ  ಪರಿಹಾರ ನೀಡುವಲ್ಲಿ ಮುಂದಾಗಬೇಕು ಎಂದು ರೈತ ಕೂಲಿ ಗ್ರಾಮದ ಕರಬಸಪ್ಪ ಅಗಸೀಬಾಗಿಲ ಒತ್ತಾಯಿಸಿದರು.

‘ಸತತ ಮಳೆ ಹಾಗೂ ತುಂಗಭದ್ರಾ ನದಿ ನೀರಿನ ಪ್ರವಾಹದಿಂದ ನದಿ ತೀರದ ರೈತರ ಜಮೀನುಗಳಿನೆ ನೀರು ನುಗ್ಗಿ ಬೆಳೆಗಳು ಜಲಾವೃತಗೊಂಡ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಸರ್ವೆ ಮಾಡಿಸಲಾಗುತ್ತದೆ. ನದಿ ತೀರದ ಪ್ರದೇಶಗಳ ರೈತರು ಪಂಪ್‌ಶೆಟ್‌ಗಳನ್ನು ಮೇಲಕ್ಕೆ ತರಬೇಕು. ನದಿ ತೀರದಲ್ಲಿ ಜಾನುವಾರುಗಳನ್ನು ನದಿ ಬಳಿ ಮೇಯಲು ಬಿಡಬಾರದು’ ಎಂದು ರಾಣೆಬೆನ್ನೂರು ತಹಶೀಲ್ದಾರ್‌ ಗುರುಬಸವರಾಜ ಕೆ. ಹೇಳಿದ್ದಾರೆ.

ರಾಣೆಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರ ಗ್ರಾಮದ ನದಿ ತೀರದಲ್ಲಿರುವ ಶರಣ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ನೀರಿನಲ್ಲಿ ಮುಳುಗಿದೆ
ಪ್ರವಾಹದಿಂದ ಬೆಳೆ ಹಾನಿಗೊಂಡ ಬಗ್ಗೆ ಮೂರು ಹೋಬಳಿಯ ರೈತರಿಂದ ಯಾವುದೇ ರೈತರಿಂದ ದೂರುಗಳು ಬಂದಿಲ್ಲ. ಮೇಡ್ಲೇರಿ ಹೋಬಳಿಯ ನದಿ ತೀರದ 16 ಗ್ರಾಮಗಳಲ್ಲಿ ಭತ್ತ ನಾಟಿ ಮಾಡಿಲ್ಲ
ಶಾಂತಮಣಿ. ಜಿ. ಕೃಷಿ ಸಹಾಯಕ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.