ADVERTISEMENT

ವರಿಷ್ಠರು ಸೂಚಿಸಿದ್ದಕ್ಕೆ ಸ್ಪರ್ಧಿಸಿರುವೆ: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 16:23 IST
Last Updated 15 ಮಾರ್ಚ್ 2024, 16:23 IST
<div class="paragraphs"><p>ಬೊಮ್ಮಾಯಿ</p></div>

ಬೊಮ್ಮಾಯಿ

   

ಹಾವೇರಿ: ‘ಈಶ್ವರಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ವಿಚಾರ ನನಗೆ ಗೊತ್ತಿಲ್ಲ. ಅವರು ನನಗಿಂತ ಹಿರಿಯರಿದ್ದಾರೆ. ಪಕ್ಷವನ್ನು ಕಟ್ಟಿ ಬೆಳೆಸಿದವರಲ್ಲಿ ಪ್ರಮುಖರಾಗಿದ್ದಾರೆ. ಅವರೊಂದಿಗೆ ಖುದ್ದಾಗಿ ಮಾತನಾಡುತ್ತೇನೆ’ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾವೇರಿ ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಾಗಿರಲಿಲ್ಲ. ಸಂಸದೀಯ ಮಂಡಳಿ ಸಭೆಯಲ್ಲಿ ಏನೇನು ಆಗಿದೆ ಅದೆಲ್ಲವೂ ಈಶ್ವರಪ್ಪನವರಿಗೆ ಗೊತ್ತಿದೆ. ನನ್ನ ಹೆಸರು ಇರಲಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಅಮಿತ್ ಶಾ ಅವರೇ ನೀನು ಸ್ಪರ್ಧಿಸುವ ಅನಿವಾರ್ಯತೆಯಿದೆ ಎಂದು ಹೇಳಿದರು ಎಂದರು. 

ADVERTISEMENT

ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬೇರೆಯವರಿಗೆ ಅವಕಾಶ ಕೊಡಿ ಎಂದಿದ್ದೆ. ಈಶ್ವರಪ್ಪ ಅವರು ಪಕ್ಷದಲ್ಲಿ ಶಿಸ್ತಿನ ಸಿಪಾಯಿಯಾಗಿದ್ದಾರೆ. ಆದರೆ, ಅದು ವರಿಷ್ಠರ ತೀರ್ಮಾನ. ಪಕ್ಷ ಅವರಿಗೆ ಮೋಸ ಮಾಡುವುದಿಲ್ಲ ಎಂದು ತಿಳಿಸಿದರು.

ಭಾವಾನಾತ್ಮಕ ನಂಟು

ಶಿಗ್ಗಾವಿಯೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಎಲ್ಲಾ ತಾಲ್ಲೂಕುಗಳ ಅಭಿವೃದ್ಧಿ ಜತೆಗೆ ಶಿಗ್ಗಾವಿ ಅಭಿವೃದ್ಧಿಗೂ ಒತ್ತು ನೀಡುತ್ತೇನೆ. ಶಿಗ್ಗಾವಿ ಬೈ ಎಲೆಕ್ಷನ್ ನಡೆದರೆ ಪುತ್ರ ಭರತ್ ಬೊಮ್ಮಾಯಿಗೆ ಟಿಕೆಟ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗ ನಾನಿನ್ನೂ ಸ್ಪರ್ಧೆ ಮಾಡಿ ಲೋಕಸಭಾ ಚುನಾವಣೆ ಗೆಲ್ಲಬೇಕು. ಬಳಿಕ ಶಿಗ್ಗಾವಿಗೆ ಉಪಚುನಾವಣೆ ನಡೆಯಲಿದೆ. ಊಹೆ ಮಾಡಿ ಈಗಲೇ ನಾನು ಹೇಳಲು ಆಗಲ್ಲ. ಆ ಸಂದರ್ಭದಲ್ಲಿ ಜನರ ಅಭಿಪ್ರಾಯ, ಪಕ್ಷದ ಕೇಳಬೇಕು ಎಂದು ಹೇಳಿದರು.

ಮಾಜಿ ಶಾಸಕ ನೆಹರು ಓಲೇಕಾರ ಅವರ ಮನವೊಲಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಟಿಕೆಟ್‌ ಸಿಕ್ಕಿದ ನಂತರ ಜಿಲ್ಲೆಗೆ ಮೊದಲ ಬಾರಿಗೆ ಬಂದಿದ್ದೇನೆ. ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ, ಅಭಿಪ್ರಾಯ ತಿಳಿದುಕೊಂಡು ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನಗೆ ಯಾರ ಬಗ್ಗೆಯೂ ದ್ವೇಷ ಇಲ್ಲ ಎಂದರು.

ಸಾಮಾನ್ಯವಾಗಿ ಲೋಕಸಭೆ ಚುನಾವಣೆಯಲ್ಲಿ ನೇರ ಸ್ಪರ್ಧೆ ಇರುತ್ತದೆ. ನಾನು ಯಾವುದೇ ಸ್ಪರ್ಧಿಯನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಪ್ರತಿಸ್ಪರ್ಧಿಯನ್ನು ಗೌರವವಾಗಿ ತೆಗೆದುಕೊಳ್ಳುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.