ADVERTISEMENT

ಹಾವೇರಿ | ಪ್ರಜಾಪ್ರಭುತ್ವ ಹಬ್ಬ: ಒಗ್ಗಟ್ಟು ಪ್ರದರ್ಶಿಸಿದ ಜನ

ಮಾನವ ಸರಪಳಿಯಲ್ಲಿ ಕೈ ಜೋಡಿಸಿದ ಪ್ರಜೆಗಳು: ರಾಷ್ಟ್ರಧ್ವಜ ಹಿಡಿದು ಘೋಷಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 15:22 IST
Last Updated 15 ಸೆಪ್ಟೆಂಬರ್ 2024, 15:22 IST
ಧನ್ಯೋಸ್ಮಿ ಭರತ ಭೂಮಿ ಸಂಘಟನೆ ಪದಾಧಿಕಾರಿಗಳು 75 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಿದರು
ಧನ್ಯೋಸ್ಮಿ ಭರತ ಭೂಮಿ ಸಂಘಟನೆ ಪದಾಧಿಕಾರಿಗಳು 75 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶಿಸಿದರು   

ಕುಮಾರಪಟ್ಟಣ: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಜೆಗಳು, ಪರಸ್ಪರ ಕೈ ಜೋಡಿಸಿ ಒಗ್ಗಟ್ಟು ಪ್ರದರ್ಶಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವ ತಿಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಸೂಚನೆಯಂತೆ ಹಾವೇರಿ ಜಿಲ್ಲಾಡಳಿತ ಬೃಹತ್ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಿತ್ತು. ಸ್ಥಳೀಯ ಸಂಸ್ಥೆಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಸರ್ಕಾರಿ ನೌಕರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವ ದಿನವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.

ಕೊಡಿಯಾಲ ಹಾಗೂ ಹರಿಹರ ನಗರದ ತುಂಗಭದ್ರಾ ನದಿ ಸೇತುವೆಯಿಂದ ಬೆಳಿಗ್ಗೆ 9 ಗಂಟೆಗೆ ಮಾನವ ಸರಪಳಿ ಅಭಿಯಾನ ಪ್ರಾರಂಭವಾಯಿತು. ಭಾರತ ಮಾತೆ ಹಾಗೂ ರಾಷ್ಟ್ರ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ADVERTISEMENT

ನಂತರ, ರಸ್ತೆಯುದ್ದಕ್ಕೂ ನೆರೆದಿದ್ದ ಪ್ರಜೆಗಳು ಪರಸ್ಪರ ಕೈ ಕೈ ಹಿಡಿದು ಘೋಷಣೆ ಕೂಗಿದರು. ಮಾನವ ಸರಪಳಿ ಮೂಲಕ ರಸ್ತೆಯ ಎರಡು ಬದಿಯಲ್ಲಿ ಜನರು ಸಾಲಾಗಿ ನಿಂತುಕೊಂಡಿದ್ದರು. ರಾಷ್ಟ್ರ ಧ್ವಜ, ನಾಯಕರ ಭಾವಚಿತ್ರಗಳನ್ನು ಹಿಡಿದುಕೊಂಡು ಘೋಷಣೆ ಕೂಗಿದರು.

ಕೊಡಿಯಾಲ, ಕವಲೆತ್ತು, ಮಾಕನೂರು ಹಾಗೂ ಚಳಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು.

ತುಂಗಭದ್ರಾ ನದಿ ಸೇತುವೆ, ಕವಲೆತ್ತಿನ ಮಾರ್ಗದ ದುರ್ಗಾದೇವಿ ದೇವಸ್ಥಾನದ ಹತ್ತಿರ, ಮಾಕನೂರು ಕ್ರಾಸ್ ಹಾಗೂ ಚಳಗೇರಿ ಗ್ರಾಮದ ಬಳಿ ಮಹಿಳೆಯರು ರಂಗೋಲಿ ಬಿಡಿಸಿದ್ದರು.

ಗಮನಸೆಳೆದ ವೇಷಭೂಷಣ: ಶಾಲಾ ಮಕ್ಕಳು, ರಾಷ್ಟ್ರ ನಾಯಕರ ಉಡುಗೆ ಧರಿಸಿ ಗಮನಸೆಳೆದರು. ವಿವಿಧ ವೇಶಭೂಷಣದಲ್ಲಿದ್ದ ವಿದ್ಯಾರ್ಥಿಗಳು, ಪರಸ್ಪರ ಕೈ ಹಿಡಿದು ಸರಪಳಿ ನಿರ್ಮಿಸಿದರು. ಇದೇ ಸಂದರ್ಭದಲ್ಲಿ ವಿವಿಧ ದೇಶಭಕ್ತಿ ಗೀತೆಗಳಿಗೆ ಜನರು ಹೆಜ್ಜೆ ಹಾಕಿದರು.

ಅರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪೌರ ಕಾರ್ಮಿಕರು ಮಾನವ ಸರಪಳಿ ನಿರ್ಮಿಸಿದ್ದರು.

ನಿವೃತ್ತ ಚಿತ್ರಕಲಾ ಶಿಕ್ಷಕ ಜಿ.ಜೆ. ಮೆಹೆಂದಳೆ ಅವರು ರಚಿಸಿದ ಸ್ವಾತಂತ್ರ್ಯ ಹೋರಾಟಗಾರರ ಭಿತ್ತಿ ಚಿತ್ರಗಳು ಕಾರ್ಯಕ್ರಮದಲ್ಲಿ ಗಮನ ಸೆಳೆದವು.

75 ಉದ್ದದ ತ್ರಿವರ್ಣ ಧ್ವಜ: ಧನ್ಯೋಸ್ಮಿ ಭರತ ಭೂಮಿ ಸಂಘಟನೆ ವತಿಯಿಂದ 75 ಅಡಿ ಉದ್ದದ ತ್ರಿವರ್ಣ ಧ್ವಜವನ್ನು ತುಂಗಭದ್ರ ನದಿ ಸೇತುವೆಯಿಂದ ಕುಮಾರಪಟ್ಟಣದ ವಾಲ್ಮೀಕಿ ವೃತ್ತದವರೆಗೆ ಪ್ರದರ್ಶಿಸಲಾಯಿತು.

ಚರಂತನ ಮಾಗೋಡ
ವಂದನಾ ಪಾಸ್ತೆ
ರಾಣೆಬೆನ್ನೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು
ರಾಣೆಬೆನ್ನೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜನ
ರಾಣೆಬೆನ್ನೂರಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿದರು

ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದು ಖುಷಿ ತಂದಿದೆ. ಭಾರತದಲ್ಲಿ ಹುಟ್ಟಿರುವ ನಾವೆಲ್ಲರೂ ಒಂದೇ. ನಮ್ಮಲ್ಲಿ ಧರ್ಮ ಜಾತಿ ಸಂಸ್ಕೃತಿ ಆಚಾರ–ವಿಚಾರಗಳು ಬೇರೆಯಾಗಿದ್ದರು ಕೂಡ ನಾವೆಲ್ಲರೂ ಭಾರತೀಯರು

- ವಂದನಾ ಪಾಸ್ತೆ ಬಿ.ಕಾಂ ವಿದ್ಯಾರ್ಥಿನಿ ರಾಣೆಬೆನ್ನೂರು

ಪ್ರಜಾಪ್ರಭುತ್ವ ದಿನದಂದು ಮಾನವ ಸರಪಳಿ ರಚಿಸಿ ಒಗ್ಗಟ್ಟು ಪ್ರದರ್ಶಿಸಿದ್ದು ವಿಶೇಷ ಹಾಗೂ ಐತಿಹಾಸಿಕವಾದದ್ದು. ಇಂದಿನ ಸಮಾಜದಲ್ಲಿ ಪ್ರತಿಯೊಬ್ಬರಿಗೆ ಶಿಕ್ಷಣ ದೊರೆಯುವಂತಾಗಬೇಕು. ಇದುವೇ ಡಾ. ಬಿ.ಆರ್. ಅಂಬೇಡ್ಕರ್ ಆಶಯ

- ಚರಂತನ ಮಾಗೋಡ 9ನೇ ತರಗತಿ ವಿದ್ಯಾರ್ಥಿ ಶಿಡೇನೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.