ADVERTISEMENT

ಅಂಬೇಡ್ಕರ ಭವನ ಕಾಮಗಾರಿ ನನೆಗುದಿಗೆ

₹ 20 ಲಕ್ಷ ಅನುದಾನದಲ್ಲಿ ಆರಂಭಗೊಂಡ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 4:35 IST
Last Updated 11 ಜೂನ್ 2018, 4:35 IST

‌ಅಫಜಲಪುರ: ಪಟ್ಟಣದಲ್ಲಿ 2004ರಲ್ಲಿ ₹ 20 ಲಕ್ಷ ಅನುದಾನದಲ್ಲಿ ಆರಂಭಗೊಂಡ ಡಾ.ಬಿ.ಆರ್.ಅಂಬೇಡ್ಕರ ಭವನ ನಿರ್ಮಾಣದ ಕಾಮಗಾರಿ 14 ವರ್ಷಗಳಾದರೂ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಚುನಾಯಿತ ಪ್ರತಿನಿಧಿಗಳ, ಸುಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಪೂರ್ಣ ಕಾಮಗಾರಿಯ ಭವನ ಹಾಳಾಗುತ್ತಿದೆ.

ಡಾ.ಬಿ.ಆರ್.ಅಂಬೇಡ್ಕರ ಭವನ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ಒತ್ತಾಯಿಸಿ ತಿಂಗಳ ಹಿಂದೆ ದಲಿತ ಮುಖಂಡ ಭೀಮರಾವ್ ಗೌರ ಸೇರಿದಂತೆ ಅನೇಕ ಪ್ರಮುಖರು ತಹಶೀಲ್ದಾರ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಜಿಲ್ಲಾಧಿಕಾರಿ ಆಶ್ವಾಸನೆ ನೀಡಿದ್ದರಿಂದ ಧರಣಿಯನ್ನು ಹಿಂಪಡೆದಿದ್ದರು. ಅದಾಗಿ 2 ತಿಂಗಳು ಕಳೆದರೂ ಭವನದ ಕಾಮಗಾರಿ ಆರಂಭವಾಗಿಲ್ಲ ಎಂದು ದಲಿತ ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

₹ 20 ಲಕ್ಷದಲ್ಲಿ ಆರಂಭಗೊಂಡ ಅಂಬೇಡ್ಕರ ಭವನದ ಕಾಮಗಾರಿಯ ವೆಚ್ಚ ಈಗ ₹ 60 ಲಕ್ಷಕ್ಕೆ ಏರಿಕೆಯಾಗಿದೆ. ಜಿಲ್ಲಾ ಪಂಚಾಯಿತಿ ಉಪ ವಿಭಾಗದ ಎಇಇ ಕೆ.ಬಾಲಕೃಷ್ಣ ಅವರು ₹ 40 ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಆದರೆ ಇದುವರೆಗೆ ಅನುದಾನ ಬಂದಿಲ್ಲ. ಈಗಿನ ಅಪೂರ್ಣ ಕಾಮಗಾರಿ ಕಳಪೆಯಾಗಿದೆ. ಆದ್ದರಿಂದ ಭವನವನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸಬೇಕು’ ಎಂದು ಭೀಮರಾವ್ ಗೌರ ಆಗ್ರಹಿಸಿದ್ದಾರೆ.

ADVERTISEMENT

ಭವನ ನಿರ್ಮಿಸಲು ಶಾಸಕರು ₹ 10 ಲಕ್ಷ, ಪುರಸಭೆ ₹ 5 ಲಕ್ಷ  ಮತ್ತು ಸಮಾಜ ಕಲ್ಯಾಣ ಇಲಾಖೆ ₹ 5 ಲಕ್ಷ ನೀಡಿದ್ದು ಲೋಕಸಭಾ ಸದಸ್ಯರು ಮನಸ್ಸು ಮಾಡಿದರೆ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ. ಸಮಾಜ ಕಲ್ಯಾಣ ಸಚಿವರು ನಮ್ಮ ಭಾಗದವರೇ ಆಗಿರುವುದರಿಂದ ಹೆಚ್ಚಿನ ಅನುದಾನ ನೀಡಿ ಭವನವನ್ನು ಪೂರ್ಣಗೊಳಿಸಲು ಸಹಕಾರ ನೀಡಬೇಕು ಎಂದರು.

ಭವನದ ವ್ಯವಸ್ಥೆ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಅನುದಾನ ಮಂಜೂರು ಮಾಡಿಸಿ ಪೂರ್ಣಗೊಳಿಸಲಾಗುವುದು – ಎಂ.ವೈ.ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.