ADVERTISEMENT

ಇಂಗಳಗಿ: ಹದಗೆಟ್ಟ ರಸ್ತೆ, ಗ್ರಾಮಸ್ಥರ ಪರದಾಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 6:53 IST
Last Updated 30 ಅಕ್ಟೋಬರ್ 2017, 6:53 IST
ವಾಡಿ ಸಮೀಪದ ಇಂಗಳಗಿ ಗ್ರಾಮದಿಂದ ಎಸಿಸಿ ಕಂಪೆನಿಯ ರಿವರ್ ಪಂಪ್‌ಗೆ ತೆರಳುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ
ವಾಡಿ ಸಮೀಪದ ಇಂಗಳಗಿ ಗ್ರಾಮದಿಂದ ಎಸಿಸಿ ಕಂಪೆನಿಯ ರಿವರ್ ಪಂಪ್‌ಗೆ ತೆರಳುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ಪರದಾಡುವಂತಾಗಿದೆ   

ವಾಡಿ: ಸಮೀಪದ ಇಂಗಳಗಿ ಗ್ರಾಮದಿಂದ ಎಸಿಸಿ ರಿವರ್ ಪಂಪ್‌ವರೆಗಿನ ರಸ್ತೆ ಸಂಪೂರ್ಣ ಹಾಳಾಗಿದ್ದು, ಪಾದಚಾರಿಗಳು ಹಾಗೂ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.

ಅವ್ಯವಸ್ಥೆಯ ಆಗರವಾದ ರಸ್ತೆಯಲ್ಲೇ ಸಂಕಷ್ಟ ಅನುಭವಿಸುತ್ತಾ ಜನರು ಸಂಚರಿಸುತ್ತಿದ್ದಾರೆ. ಸುಮಾರು ಒಂದು ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿ ನಡೆದಾಡಲು ಹರಸಾಹಸಪಡುತ್ತಿದ್ದರೂ ಇಲ್ಲಿನ ನಿವಾಸಿಗಳ ಗೋಳು ಯಾರಿಗೂ ಅರ್ಥವಾಗುತ್ತಿಲ್ಲ.

ಸಿಮೆಂಟ್‌ ಮಿಶ್ರಿತ ರಸ್ತೆ ಇದಾಗಿದ್ದು, ಈಗ ಸಂಪೂರ್ಣ ಬಿರುಕು ಬಿಟ್ಟಿದೆ. ರಸ್ತೆಯ ತುಂಬಾ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸವಾರರರಿಗೆ ಅಕ್ಷರಶಃ ನರಕ ಸೃಷ್ಟಿಸಿವೆ. ನಿತ್ಯ ಈ ರಸ್ತೆಯಲ್ಲಿ ಟಂಟಂಗಳು, ಪರಸಿ ತುಂಬಿದ ಲಾರಿಗಳು, ಟ್ರ್ಯಾಕ್ಟರ್‌ಗಳು, ಬೈಕ್ ಸವಾರರು ಹಾಗೂ ರೈತರ ಎತ್ತಿನ ಬಂಡಿಗಳು ಪ್ರಯಾಸದಾಯಕವಾಗಿ ಸಂಚರಿಸುತ್ತವೆ.

ADVERTISEMENT

ಶಹಬಾದ್ ಪಟ್ಟಣಕ್ಕೆ ತೆರಳಲು ಇದೇ ರಸ್ತೆ ಇರುವುದರಿಂದ ಸಹಜವಾಗಿ ವಾಹನ ದಟ್ಟಣೆ ಅಧಿಕವಿದೆ. ಆದರೆ, ದಶಕಗಳು ಕಳೆದರೂ ರಸ್ತೆ ಮಾತ್ರ ದುರಸ್ತಿ ಭಾಗ್ಯ ಕಂಡಿಲ್ಲ. ಹಾಳಾದ ರಸ್ತೆ ಹಲವು ಗಂಭೀರ ಅನಾಹುತಗಳಿಗೆ ಕಾರಣವಾಗಿದೆ ಎಂದು ದೂರುವ ಸ್ಥಳೀಯರು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆ ದುರಸ್ತಿ ಮಾಡಿ ನಮ್ಮ ಸಮಸ್ಯೆ ಪರಿಹರಿಸಬೇಕಾದ ಸ್ಥಳೀಯ ಪಂಚಾಯಿತಿಯಾಗಲಿ ಅಥವಾ ಎಸಿಸಿ ಕಂಪೆನಿಯಾಗಲಿ ರಸ್ತೆ ನಿರ್ಮಾಣಕ್ಕೆ ಮುಂದಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.