ADVERTISEMENT

ಇನ್ನೂ ಬಸ್ ಕಾಣದ ಹಳ್ಳಿ!

ಶಿವರಂಜನ್ ಸತ್ಯಂಪೇಟೆ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಗುಲ್ಬರ್ಗ:  ಸ್ವಾತಂತ್ರ್ಯ ನಂತರವೂ ದರ್ಶನ ನೀಡದ ಬಸ್, ಇಲ್ಲಿವರೆಗೂ ನಿರ್ಮಾಣವಾಗದ ರಸ್ತೆ, ಭೀಮಾನದಿ ದಂಡೆಯಲ್ಲಿದ್ದರೂ ತಪ್ಪದ ನೀರಿನ ಬವಣೆ, ಸದಾ ಕಣ್ಣಾ ಮುಚ್ಚಾಲೆ ಆಡುವ ವಿದ್ಯುತ್, ಇದೆಲ್ಲದಕ್ಕೂ ಮಿಗಿಲಾಗಿ ‘ಮೋಹಿನಿ’ ಕಾಟದಿಂದ ಬೇಸತ್ತ ಗ್ರಾಮ... ಇದು ಗುಲ್ಬರ್ಗ ತಾಲ್ಲೂಕಿನ ಸೋಮನಾಥಹಳ್ಳಿಯ ದುಸ್ಥಿತಿ!

ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯಿಂದ ಕೇವಲ 3.20 ಕಿ.ಮೀ. ದೂರದಲ್ಲಿರುವ ಈ ಗ್ರಾಮಕ್ಕೆ ಇದುವರೆಗೂ ರಸ್ತೆ, ನೀರು, ಚರಂಡಿ, ಶೌಚಾಲಯ ಮುಂತಾದ ಕನಿಷ್ಠ ಮೂಲಸೌಕರ್ಯವೂ ಇಲ್ಲ ಎಂದರೆ ನೀವು ನಂಬಲಿಕ್ಕಿಲ್ಲ. ಆದರೆ ಇದು ಸೂರ್ಯ    ಪ್ರಕಾಶದಷ್ಟೇ ಸತ್ಯ.

ಗುಲ್ಬರ್ಗದಿಂದ ಸುಮಾರು 25 ಕಿ.ಮೀ. ದೂರವಿರುವ ಈ  ಗ್ರಾಮದೊಳಗೆ ಪ್ರವೇಶ ಮಾಡಿದರೆ ಸಾಕು, ಈಗಾಗಲೇ ನಿಮ್ಮಂಗೆ ಕ್ಯಾಮೆರಾ, ಕಾಪಿ, ಪೆನ್ನು ಹಿಡಕೊಂಡು ಬಹಳಷ್ಟು ಜನ ಬಂದು ಹೋಗಿದ್ದಾರೆ.

ಆದರೂ ನಮ್ಮೂರಿನ ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಸುಮ್ನೆ ಬರಕೊಂಡು ಹೋದ್ರೆ ಏನಾಗತೈತ್ರಿ? ಅಲ್ಲೋಗಿ ನೋಡಿ ನಮ್ಮ ಗತಿ ಏನದ ಅಂಥ ನಿಮಗೆ ಗೊತ್ತಾಗುತ್ತೆ ಎಂದು ಜಗದೇವಪ್ಪ ಕೆಲ್ಲೂರ, ಶಿವರಾಯ ನಾಯ್ಕೋಡಿ, ಸಾಮ್ರಾಜ್ ನಾಯ್ಕೋಡಿ ಊರೊಳಗೆ ಬೆರಳು ಮಾಡಿ ತೋರಿಸಿದರು.

ಜನರ ತೋರು ಬೆರಳಿನ ನೇರ ಒಳ ಹೋಗುತ್ತಿದ್ದಂತೆ, ಕಲ್ಲು-ಮಣ್ಣು, ಕೆಸರಿನಿಂದ ಕೂಡಿದ ಕಾಲು ದಾರಿ, ಒಣಗಿ ನಿಂತ ನೀರಿನ ಟ್ಯಾಂಕ್, – ಹಾಳು ಬಿದ್ದ ದೊಡ್ಡ ದೊಡ್ಡ ಮನೆಗಳು ಗೋಚರಿದವು. ಸುಮಾರು 150 ಮನೆಗಳಿರುವ ಈ ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಇವರ ದಯನೀಯ ಸ್ಥಿತಿ ನೋಡಿದರೆ ದೇವರಿಗೆ ಪ್ರೀತಿ ಎನ್ನುವಂತಿದೆ. ಗ್ರಾಮದ ಸಮಸ್ಯೆಗಳೇನು ಎಂದು  ಕೇಳುವುದಷ್ಟೇ ಸಾಕು, ಅಲ್ಲಿ ಸೇರಿದ್ದ ಎಲ್ಲರೂ ‘ಇಲ್ಲ’ಗಳ ಪಟ್ಟಿಯನ್ನೇ ನೀಡಿದರು. ಅವುಗಳನ್ನು ಅವರ ಬಾಯಿಯಿಂದಲೇ ಕೇಳಿ....

ಬೀದರ್-ಶ್ರೀರಂಗಪಟ್ಟಣ ಮುಖ್ಯರಸ್ತೆಯಲ್ಲಿ ಬರುವ ಹಳ್ಳಿ ಕ್ರಾಸ್ ಹತ್ತಿರ ನೀರು ಮತ್ತು ನೆರಳು ಇಲ್ಲದ್ದರಿಂದ ಹೊತ್ತೇರಿದಂತೆ ಜನರ ಸುಳಿವೇ ಇರುವುದಿಲ್ಲ ಎಂದು ಸಂಗಣ್ಣ ಉಳ್ಳಾಗಡ್ಡಿ ತಿಳಿಸಿದರು.

ಟ್ಯಾಂಕಿನಿಂದ ಸಮರ್ಪಕ ಕುಡಿಯುವ ನೀರು ಬಿಡುತ್ತಿಲ್ಲವಾದ್ದರಿಂದ ಬಟ್ಟೆ ತೊಳೆಯಲು ಮತ್ತು ದಿನಬಳಕೆಯ ನೀರಿಗಾಗಿ ಇಲ್ಲಿನ ವೃದ್ಧರು, ಯುವಕರು, ಮಹಿಳೆಯರು ಹತ್ತಿರದ ಭೀಮಾನದಿಯನ್ನೇ ಆಶ್ರಯಿಸಿದ್ದಾರೆ ಎಂದು ಎಂ.ಬಿ. ಪಾಟೀಲ್ ತಿಳಿಸುತ್ತಾರೆ.

 ಕ್ಷೇತ್ರ ಪುನರ್ ವಿಂಗಡಣೆಗೂ ಮುನ್ನ ಶಹಾಬಾದ ಮತಕ್ಷೇತ್ರದಲ್ಲಿ ಬರುತ್ತಿದ್ದ ಈ ಹಳ್ಳಿಗೆ ಕಾರ್ಮಿಕ ಸಚಿವರಾಗಿದ್ದ ಸಿ. ಗುರುನಾಥ ಅವರ ಕಾಲದಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಕ್ರಾಸ್ ಬಳಿ ಬಸ್ ನಿಲ್ದಾಣದ ಕಾಮಗಾರಿ ಸಹ ಆರಂಭಿಸಲಾಗಿತ್ತು. ಆದರೆ ಇದೀಗ ಅಲ್ಲಿ      ಯಾವುದೇ ಕುರುಹುಗಳು ಕಂಡು ಬರುವುದಿಲ್ಲ.

ಮೋಹಿನಿ ಕಾಟವಿಲ್ಲ ಎಂದು ಹೇಳಿ ಇಲ್ಲಿಗೆ ಪಾದ ಹಾಕಿದ ಚಿತ್ರದುರ್ಗದ ಮುರುಘಾ ಶರಣರು ಮತ್ತು ಅಬ್ಬೆತುಮಕೂರಿನ ಗಂಗಾಧರ ಶಿವಾಚಾರ್ಯರು, ಜಿಲ್ಲಾಧಿಕಾರಿ ಸೇರಿದಂತೆ ಇನ್ನಿತರರು ಭೇಟಿ ನೀಡಿ ಭಯ ನಿವಾರಿಸುವಲ್ಲಿ ಸಾಕಷ್ಟು ಪ್ರಯತ್ನಿಸಿದ್ದರೂ, ಜನ ಮಾತ್ರ ಇನ್ನೂ ಭಯದ ನೆರಳಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ. 

ಒಂದರ ನಂತರ ಮತ್ತೊಂದು ಸಮಸ್ಯೆ ಎನ್ನುವಂತೆ ‘ಪರೇಶಾನ್’ ಆಗಿರುವ ಗ್ರಾಮಸ್ಥರು, ಬೀದಿಗಿಳಿದು ಹೋರಾಟ ಮಾಡುವ ಮುನ್ನ ಸಂಬಂಧಿಸಿದ ಜನಪ್ರತಿನಿಧಿ, ಅಧಿಕಾರಿಗಳು ಸ್ಪಂದಿಸಲು ಮುಂದಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.