ADVERTISEMENT

ಉರಿಬಿಸಿಲಿನ ಊರಲ್ಲಿ ಹಸಿರ ಉದ್ಯಾನ

ಪಾಲಿಕೆ ಸಿಬ್ಬಂದಿ ಶ್ರದ್ಧೆಯ ಪ್ರತಿಫಲ; ನಳನಳಿಸುತ್ತಿದೆ ‘ಡೈನೋಸಾರ್‌ ಗಾರ್ಡನ್‌’

ಸಂತೋಷ ಈ.ಚಿನಗುಡಿ
Published 26 ಮೇ 2018, 10:43 IST
Last Updated 26 ಮೇ 2018, 10:43 IST
‌ಕಲಬುರ್ಗಿ ಮಹಾನಗರ ಪಾಲಿಕೆ ಬಳಿಯ ಪಾರ್ಕಿನಲ್ಲಿ ವಿಶ್ರಾಂತಿಗೆ ಜಾರಿದ ಜನ
‌ಕಲಬುರ್ಗಿ ಮಹಾನಗರ ಪಾಲಿಕೆ ಬಳಿಯ ಪಾರ್ಕಿನಲ್ಲಿ ವಿಶ್ರಾಂತಿಗೆ ಜಾರಿದ ಜನ   

ಕಲಬುರ್ಗಿ: ಇಲ್ಲಿನ ಪಾಲಿಕೆ ಕಚೇರಿ ಹತ್ತಿರದ ಉದ್ಯಾನ ಧಗಧಗಿಸುವ ಬಿಸಿಲಲ್ಲೂ ದಟ್ಟ ಹಸಿರಾಗಿದೆ. ಬಸವಳಿದು ಉಸ್ಸಪ್ಪಾ... ಎಂದು ಬಂದವರಿಗೆ ತಂಪು ಅನುಭವ ನೀಡುತ್ತದೆ.

ಪಾಲಿಕೆ ವ್ಯಾಪ್ತಿಗೆ ಒಳಪಟ್ಟ ಇಲ್ಲಿನ ಎರಡೂ ಉದ್ಯಾನಗಳು ದಟ್ಟಹಸಿರಿನಿಂದ ಕಂಗೊಳಿಸುತ್ತಿವೆ. ಉದ್ಯಾನದ ಒಳಹೋದರೆ ಸಾಕು; ಮಲೆನಾಡಿನ ಅನುಭವ ನೀಡುವಷ್ಟು ಹಸಿರು ಇಲ್ಲಿದೆ. ದಟ್ಟವಾದ ‘ಮರಗಳ ಸೈನ್ಯ’ ನಿಮಗೆ ನೆರಳು– ನೆಮ್ಮದಿ ನೀಡುತ್ತದೆ.

ಜನರೂಢಿಯಲ್ಲಿ ಇದು ‘ಡೈನೋಸಾರ್‌ ಗಾರ್ಡನ್‌’. ಗೇಟಿನ ಬಳಿ ಬೃಹತ್ತಾದ ಡೈನೋಸಾರ್‌ ಪ್ರತಿಮೆ ನಿರ್ಮಿಸಿದ್ದರಿಂದ ಈ ಹೆಸರು ರೂಢಿಯಲ್ಲಿದೆ. ಆದರೆ, ಇದಕ್ಕೆ ಪ್ರತ್ಯೇಕ ಹೆಸರಿಲ್ಲ. 5.5 ಎಕರೆ ವಿಸ್ತಾರ ಇರುವ ಈ ಜಾಗವನ್ನು ಎಂಟು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಪಾಲಿಕೆಯ ವಿಶೇಷ ಅನುದಾನದಲ್ಲಿ ₹ 10 ಲಕ್ಷ ವೆಚ್ಚ ಮಾಡಿದ್ದು, ಸೌಂದರ್ಯದಿಂದ ನಳನಳಿಸುವಂತೆ ಮಾಡಲಾಗಿದೆ.

ADVERTISEMENT

ಉದ್ಯಾನದ ಒಂದೊಂದು ಅಡಿಯೂ ವ್ಯರ್ಥವಾಗದಂತೆ ಹುಲುಸಾಗಿ ಮರಗಳನ್ನು, ಹಸಿರು ಹುಲ್ಲುಹಾಸು ಬೆಳೆಸಲಾಗಿದೆ. ಗೇಟಿನ ಮುಂದೆ ಚಪ್ಪಲಿ ಬಿಟ್ಟು ಒಳಹೋಬೇಕು ಎನ್ನುವಷ್ಟು ಸ್ವಚ್ಛತೆ, ಶಿಸ್ತು, ಶ್ರದ್ಧೆ ಇಲ್ಲಿ ಎದ್ದು ಕಾಣುತ್ತದೆ.

ಆವರಣದಲ್ಲಿ ಹೆಚ್ಚಾಗಿ ಬೇವಿನ ಮರಗಳು ಇರುವುದೇ ಇದು ಇಷ್ಟೊಂದು ತಂಪಾಗಿರಲು ಕಾರಣ. ಎಲ್ಲೆಂದರಲ್ಲಿ ಬಗೆಬಗೆಯ ಹೂವಿನ ಸಸಿಗಳು, ಆಲಂಕಾರಿಕ ಸಸ್ಯಗಳು, ಸಿಮೆಂಟಿನ ಬೆಂಚುಗಳು, ಹಿರಿಯರಿಗಾಗಿ ಹರಟೆ ಕಟ್ಟೆಗಳು, ಮಕ್ಕಳ ಉಲ್ಲಾಸಕ್ಕೆ ಬಿದಿರ ಬಣ, ಊಟ ಮಾಡುವವರಿಗಾಗಿ ನೆಲಹಾಸು, 24X7 ಶುದ್ಧ ಕುಡಿಯುವ ನೀರಿನ ವ್ಯವಸ್ಥೆ... ಹೀಗೆ ಎಲ್ಲ ದೃಷ್ಟಿಯಿಂದಲೂ ಇದು ಸಮೃದ್ಧ ತಾಣ.

ಒಬ್ಬ ಮೇಲ್ವಿಚಾರಕ ಹಾಗೂ ನಾಲ್ವರು ಸಿಬ್ಬಂದಿಯನ್ನು ಪಾಲಿಕೆ ಅಧಿಕಾರಿಗಳು ಇದರ ನಿರ್ವಹಣೆಗಾಗಿ ನೇಮಿಸಿದ್ದಾರೆ. ನಗುವ ಹೂಗಳು, ನಲಿವ ಹಸಿರೆಲೆ, ಉಲ್ಲಾಸ ನೀಡುವ ಹುಲ್ಲು, ಸಮೃದ್ಧ ಸ್ವಚ್ಛತೆ ಪಾಲಿಕೆ ಸಿಬ್ಬಂದಿಯ ಶ್ರಮಕ್ಕೆ ಹಿಡಿದ ಕೈಗನ್ನಡಿ.

‘ಕಾರ್ಪೊರೇಷನ್‌ದಾಗ ಒಂಚೂರ್‌ ಕೆಲಸ ಇತ್ತು. ಬೆಳಿಗ್ಗೆ ಬಂದೀನಿ. ಸಾಹೇಬ್ರ ಸಿಗಲಿಲ್ರಿ. ಒಂದ ದ್ವಾಸಿ ತಿಂದ್ಬಂದ್‌ ಇಲ್ಲಿ ಕುಂತ್ನಿ ನೋಡ್ರಿ. ಬರಬ್ಬರ್‌ ನಿದ್ದಿ ಬಂತ್‌. ಎಷ್ಟ್‌ ತಂಪ್‌ ಇಟ್ಟಾರ ನೋಡ್ರೆಲಾ. ಬಿಲ್ಕುಲ್‌ ಅರಾಮ್‌ ಅನಸ್ತದ. ಹಸುಗೂಸ್‌ ಜ್ವಾಪಾನ ಮಾಡಿದಂಗ್‌ ಮಾಡ್ಯಾರ್‌ ಬಿಡ್ರಿ...’ ಎಂಬುದು ಪರಪ್ಪ ಅವರ ಅನುಭವದ ಮಾತು.

ದಿನ ಬೆಳಗಾದರೆ ನೂರಾರು ಮಂದಿ ಇಲ್ಲಿಯೇ ವಾಯುವಿಹಾರ ಮಾಡುತ್ತಾರೆ. ಮಧ್ಯಾಹ್ನ ಮರದಡಿ ಮಲಗಿ ದನಿವಾಸಿರಿಕೊಳ್ಳುತ್ತಾರೆ.

ಸಂಜೆ ಹಿರಿಯರು, ಮಹಿಳೆಯ ದಂಡು ಇದನ್ನು ಹರಟೆ ಕಟ್ಟೆ ಮಾಡಿಕೊಳ್ಳುತ್ತದೆ. ಹೀಗೆ ದಿನದ ಬಹುಪಾಲು ಭಾಗ ಈ ಉದ್ಯಾನ ಉಸಿರಾಡುತ್ತಲೇ ಇರುತ್ತದೆ.

‘ಹುಲ್ಲುಹಾಸಿನ ಮೇಲೆ ಬ್ಯಾಡ್ಮಿಂಟನ್, ಕ್ರಿಕೆಟ್‌ ಆಡುವುದು, ಊಟ ಮಾಡಿದ ಉಳಿದ ವಸ್ತುಗಳು, ನೀರಿನ ಬಾಟಲಿಗಳನ್ನು ಅಲ್ಲಿಯೇ ಎಸೆಯುವುದನ್ನು ಜನ ನಿಲ್ಲಿಸಬೇಕು. ಜನ ಸಹಕಾರ ಕೊಟ್ಟರೆ ನಗರವನ್ನು ಸ್ವಚ್ಛ– ಸುಂದರ ಮಾಡಬಹುದು’ ಎನ್ನುವುದು ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ.ಜಾಧವ್‌ ಅವರ ಮಾತು.

**
₹10 ಲಕ್ಷ ವೆಚ್ಚದಲ್ಲಿ ಪಾಲಿಕೆ ಜಾಗದಲ್ಲಿ ಸಮೃದ್ಧ ಉದ್ಯಾನ ನಿರ್ಮಿಸಿದ್ದೇವೆ. ಪಕ್ಕದಲ್ಲಿ ಈಗ ಮತ್ತೊಂದು ವಿಶೇಷ ಉದ್ಯಾನ ನಿರ್ಮಿಸಲಾಗುತ್ತಿದೆ
ಆರ್‌.ಪಿ.ಜಾಧವ್‌, ಉಪ ಆಯುಕ್ತ, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.