ADVERTISEMENT

ಕಮಲಾಪುರ: ಬಿಎಸ್‌ವೈಗೆ ಭರ್ಜರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 6:32 IST
Last Updated 5 ಡಿಸೆಂಬರ್ 2017, 6:32 IST

ಕಮಲಾಪುರ: ಪರಿವರ್ತನೆ ಯಾತ್ರೆ ನಿಮಿತ್ತ ಸೋಮವಾರ ಕಮಲಾಪುರಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಇತರ ನಾಯಕರಿಗೆ ಮೆರವಣಿಗೆ ಮೂಲಕ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು.

ವೇದಿಕೆಯ ಒಂದು ಕಿ.ಮೀ ಆಚೆಯಿಂದಲೆ ಮೆರವಣಿಗೆ ಆರಂಭವಾ ಗಿದ್ದು, ನಾಸಿಕ ಢೋಲ್‌, ಬಾಜಾ, ಭಜಂತ್ರಿ, ಲಂಬಾಣಿ ಕುಣಿತ ಗಮನ ಸೆಳೆಯಿತು. ಮಾಜಿ ಸಚಿವ ರೇವು ನಾಯಕರ ಪುತ್ರಿ ಸುನಿತಾ ರಾಠೋಡ ಲಂಬಾಣಿ ಮಹಿಳೆಯರೊಂದಿಗೆ ಹೆಜ್ಜೆ ಹಾಕಿ ದರು. ಸಾವಿರಾರು ಸಂಖ್ಯೆಯಲ್ಲಿದ ಕಾರ್ಯಕರ್ತರು ಬೈಕ್‌ ರ್‍ಯಾಲಿ ನಡೆಸಿದರು.

ಟಿಕೆಟ್‌ ಆಕಾಂಕ್ಷಿಗಳ ರಣಾಂಗಣ ವಾಗಿದ್ದ ಈ ಸಮಾರಂಭದಲ್ಲಿ, ಬಿಎಸ್‌ವೈ ಮಾತನಾಡಿ, ‘ಟಿಕೆಟ್ ಆಕಾಂಕ್ಷಿಗಳು ಐದಾರು ಜನ ಇರುವುದು ಸಹಜ. ನಾವು ಮೊದಲಿನ ಹಾಗೆ ಹೈಕಮಾಂಡ್‌ನಿಂದ ಟಿಕೆಟ್‌ ಕೊಡುವುದಿಲ್ಲ. ಕ್ಷೇತ್ರದ ಕಾರ್ಯಕರ್ತರು, ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ. ಅತಿ ಹೆಚ್ಚು ಜನ ಮನ್ನಣೆ ಇರುವ ಅಭ್ಯರ್ಥಿಗೆ ಟಿಕೆಟ್‌ ನೀಡುತ್ತೇವೆ. ಅಭ್ಯರ್ಥಿ ಯಾರೇ ಆದರೂ ಚುನವಾಣೆಯಲ್ಲಿ ಭಿನ್ನಮತಕ್ಕೆ ಎಡೆಮಾಡಿ ಕೊಡದೆ ಎಲ್ಲರೂ ಒಗ್ಗೂಡಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದರು.

ADVERTISEMENT

ಟಿಕೆಟ್‌ ನೀಡುವ ಯಾವುದೆ ಸುಳಿವು ಬಿಟ್ಟುಕೊಡದ ಈ ಹೇಳಿಕೆ ಟಿಕೆಟ್‌ ಆಕಾಂಕ್ಷಿಗಳಾದ ಮಾಜಿ ಸಚಿವ ಬಾಬುರಾವ ಚವ್ಹಾಣ್‌, ಬಸವರಾಜ ಮತ್ತಿಮೂಡ, ನಾಮದೇವ, ರೇವು ನಾಯಕ ಬೆಳಮಗಿ ಕ್ಷೇತ್ರದಲ್ಲಿ ಮತ್ತಷ್ಟು ಸಂಚರಿಸುವಂತೆ ಮಾಡಿದೆ.

ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲೇ ಸಮಾರಂಭ ಆಯೋಜನೆ ಮಾಡಿ ದ್ದು, ಸಾವಿರಾರು ಸಂಖ್ಯೆಯಲ್ಲಿ ವಾಹನ ಹಾಗೂ ಕಾರ್ಯಕರ್ತರು ಜಮಾವಣೆ ಗೊಂಡಿದ್ದರಿಂದ ಸಂಚಾರಕ್ಕೆ ಅಡತಡೆ ಉಂಟಾಯಿತು.

ನಡೆಯದ ಕಳ್ಳನ ಕೈಚಳಕ: ಛಾಯಾಗ್ರಾಹಕರೊಬ್ಬರ ಜೇಬಿಗೆ ಕೈಹಾಕಿದ್ದ ಕಳ್ಳನೊಬ್ಬ ಸಿಕ್ಕಿಹಾಕಿಕೊಂಡು ಪೊಲೀಸರ ಅತಿಥಿಯಾದ ಘಟನೆ ನಡೆಯಿತು. ಸಮಾರಂಭ ಮುಗಿಸಿಕೊಂಡು ಸಾರ್ವಜನಿಕರು ಹೊರಬರುತ್ತಿರುವಾಗ ಜನದಟ್ಟಣೆ ಏರ್ಪಟ್ಟಿತು. ಇದೇ ಸಮಯದಲ್ಲಿ ಪಿಕ್‌ಪ್ಯಾಕೆಟ್‌ ಮಾಡಲು ಮುಂದಾದ ಆತನನ್ನು ಪೊಲೀಸರು ಬಂಧಿಸಿದರು.

ಹಣ ಹಂಚಿಕೆ ವಿಡಿಯೊ ವೈರಲ್‌
ಸಮಾರಂಭಕ್ಕೆ ಆಗಮಿಸುತ್ತಿರುವ ಕಾರ್ಯಕರ್ತರಿಗೆ ಪೆಟ್ರೋಲ್‌ ಬಂಕ್‌ ಒಂದರಲ್ಲಿ ಜೇಬಿನಲ್ಲಿ ಹಣ ತುರುಕುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಟಿಕೆಟ್‌ ಆಕಾಂಕ್ಷಿಯೊಬ್ಬರ ಬೆಂಬಲಿಗರಾಗಿರುವ ಇವರು, ಬೈಕ್‌ ರ್‍ಯಾಲಿಗೆ ಆಗಮಿಸಿದ್ದು, ಬೈಕ್‌ಗೆ ಪೆಟ್ರೋಲ್‌ ಹಾಕಿಸುವುದರ ಜೊತೆಗೆ ಹಣ ತುರುಕುತ್ತಿರುವುದು ದೃಶಾವಳಿಗಳಲ್ಲಿ ಕಂಡುಬರುತ್ತಿದ್ದು, ಕೆಲವು ಕಾಂಗ್ರೆಸ್‌ ನಾಯಕರು ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.