ADVERTISEMENT

ಕಲಬುರ್ಗಿ ದಕ್ಷಿಣ ಕ್ಷೇತ್ರ: ಕಾಂಗ್ರೆಸ್‌ನಲ್ಲಿ ಬೇಗುದಿ

lಅಭ್ಯರ್ಥಿಗಳ ಆಯ್ಕೆಯಲ್ಲಿ ಜೆಡಿಎಸ್‌, ಬಿಜೆಪಿ ನಿರಾಳ lಡಿಗ್ಗಾವಿ, ದತ್ತಾತ್ರೇಯ ಸೆಣಸಾಟಕ್ಕೆ ಅಖಾಡ ಸಿದ್ಧ

ಗಣೇಶ ಚಂದನಶಿವ
Published 10 ಏಪ್ರಿಲ್ 2018, 9:06 IST
Last Updated 10 ಏಪ್ರಿಲ್ 2018, 9:06 IST

ಕಲಬುರ್ಗಿ: ಕಲಬುರ್ಗಿ ದಕ್ಷಿಣ ಕ್ಷೇತ್ರದ ಚುನಾವಣಾ ಆಖಾಡಕ್ಕೆ ಜೆಡಿಎಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿವೆ. ಆದರೆ, ಕಾಂಗ್ರೆಸ್‌ನ ಜಟ್ಟಿ ಯಾರು ಎಂಬುದು ಇನ್ನೂ ಅಂತಿಮಗೊಂಡಿಲ್ಲ.ಕ್ಷೇತ್ರ ಪುನರ್‌ವಿಂಗಡಣೆ ಬಳಿಕ (2008) ಅಸ್ತಿತ್ವಕ್ಕೆ ಬಂದಿರುವ ಈ ಕ್ಷೇತ್ರ ನಾಲ್ಕನೇ ಚುನಾವಣೆಗೆ ಅಣಿಯಾಗುತ್ತಿದೆ.

ಬಸವರಾಜ ಡಿಗ್ಗಾವಿ ಅವರನ್ನು ಅಭ್ಯರ್ಥಿ ಎಂದು ಜೆಡಿಎಸ್ ತಿಂಗಳ ಹಿಂದೆಯೇ ಘೋಷಿಸಿದೆ. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರಿಗೆ ಟಿಕೆಟ್‌ ನೀಡುವ ಮೂಲಕ ಬಿಜೆಪಿ ಗೊಂದಲಗಳಿಗೆ ತೆರೆ ಎಳೆದಿದೆ. ಆದರೆ, ಕಾಂಗ್ರೆಸ್‌ನಲ್ಲಿ ಬೇಗುದಿ ಇನ್ನೂ ಮುಗಿದಿಲ್ಲ.?

ಜೆಡಿಎಸ್‌ ನಿರಾಳ: ಜೆಡಿಎಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೇವೇಗೌಡ ತೆಲ್ಲೂರ, ಸುರೇಶ ಮಹಾಗಾಂವಕರ್, ಕೃಷ್ಣಾರೆಡ್ಡಿ, ಸರ್ವಮಂಗಳಾ ಹಿರೇಮಠ ಹಾಗೂ ಜ್ಯೋತಿ ಕುಲಕರ್ಣಿ ಅವರು ಜೆಡಿಎಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದರು.

ADVERTISEMENT

ಶ್ರೀಗುರು ವಿದ್ಯಾಪೀಠದ ಅಧ್ಯಕ್ಷ ಬಸವರಾಜ ಡಿಗ್ಗಾವಿ ಅವರು ‘ಪ್ರಜ್ಞಾವಂತ ಮತದಾರರ ಬಳಗ’ದ ಮೂಲಕ ಚುನಾವಣಾ ತಯಾರಿ ಆರಂಭಿಸಿದ್ದರು. ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದರಾದರೂ, ಕೊನೆಗಳಿಗೆಯಲ್ಲಿ ಅದು ರದ್ದಾಯಿತು.

‘ಸಮರ್ಥ’ ಅಭ್ಯರ್ಥಿಯ ಹುಡುಕಾಟ ದಲ್ಲಿದ್ದ ಜೆಡಿಎಸ್‌ ಡಿಗ್ಗಾವಿ ಅವರಿಗೆ ಗಾಳ ಹಾಕಿತು. ಅವರು ಜೆಡಿಎಸ್‌ ಸೇರಿ ಟಿಕೆಟನ್ನೂ ಗಿಟ್ಟಿಸಿಕೊಂಡರು. ಅದಕ್ಕೆ ಪದಾಧಿಕಾರಿಯೊಬ್ಬರು ಅಪಸ್ವರ ತೆಗೆದರಾದರೂ, ಅದು ಅಷ್ಟೇ ಬೇಗ ತಣ್ಣಗಾಯಿತು.

ಬಿಜೆಪಿ ಗೊಂದಲ: ಬಿಜೆಪಿ ಟಿಕೆಟ್‌ಗೆ ತೀವ್ರ ಸ್ಪರ್ಧೆಯೊಡ್ಡಿದ್ದ ಬಸವರಾಜ ಡಿಗ್ಗಾವಿ ಅವರು ಜೆಡಿಎಸ್‌ ಸೇರಿದ ನಂತರ ದತ್ತಾತ್ರೇಯ ಪಾಟೀಲ ರೇವೂರ ಅವರ ಹಾದಿ ಸುಗಮವಾಯಿತು ಎನ್ನುವಷ್ಟರಲ್ಲಿ ಹಿರಿಯ ಮುಖಂಡ ಲಿಂಗರಾಜಪ್ಪ ಅಪ್ಪ ಅವರ ಹೆಸರು ಮುನ್ನಲೆಗೆ ಬಂತು. ಈ ಬಗ್ಗೆ ತೀವ್ರ ಚರ್ಚೆಯೂ ನಡೆಯಿತು.

ಶಾಸಕರಿಗೆ ಟಿಕೆಟ್‌ ತತ್ವದ ಅಡಿಯಲ್ಲಿ ದತ್ತಾತ್ರೇಯ ಪಾಟೀಲರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಹೀಗಾಗಿ ಈಗ ಬಿಜೆಪಿಯಲ್ಲಿಯ ಗೊಂದಲಗಳಿಗೂ ತೆರೆ ಬಿದ್ದಿದೆ.

ಕಾಂಗ್ರೆಸ್‌ ಅನಿಶ್ಚಿತತೆ

ವಿಧಾನ ಪರಿಷತ್‌ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮೇಯರ್‌ ಶರಣಕುಮಾರ ಮೋದಿ, ಕಲಬುರ್ಗಿ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠರಾವ್‌ ಮೂಲಗೆ, ಫರಹತಾಬಾದ್‌ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ದಿಲೀಪ್‌ ಆರ್‌.ಪಾಟೀಲ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿವೆ. ಅಫಜಲಪುರ ಕ್ಷೇತ್ರದ ಕಾಂಗ್ರೆಸ್‌ ಪಕ್ಷದಲ್ಲಿನ ಬೆಳವಣಿಗೆ ಈ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಮೇಲೂ ಪರಿಣಾಮ ಬೀರಲಿದ್ದು, ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಪಕ್ಷದ ಕಾರ್ಯಕರ್ತರಲ್ಲಿದೆ.

**

ಜೆಡಿಎಸ್ ವರಿಷ್ಠರು ಸರ್ವಸಮ್ಮತ ಅಭ್ಯರ್ಥಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟಾಗಿ ಚುನಾವಣೆ ತಯಾರಿ ಆರಂಭಿಸಿದ್ದೇವೆ – ಬಸವರಾಜ ಡಿಗ್ಗಾವಿ, ಜೆಡಿಎಸ್ ಅಭ್ಯರ್ಥಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.