ADVERTISEMENT

ಕಸ ತೆರವಿಗೆ ಪಾಲಿಕೆ ಗಡಿಬಿಡಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 5:53 IST
Last Updated 22 ಅಕ್ಟೋಬರ್ 2017, 5:53 IST

ಕಲಬುರ್ಗಿ: ಮೂರು ದಿನಗಳಿಂದ ದೀಪಾವಳಿ ಹಬ್ಬದ ಸಡಗರದಲ್ಲಿದ್ದ ನಗರದ ಜನತೆಗೆ ಈಗ ಕಸದ ಸಮಸ್ಯೆ ಎದುರಾಗಿದೆ. ಇಲ್ಲಿನ ಮಾರ್ಕೆಟ್‌, ಚಪ್ಪಲ್‌ ಬಜಾರ್‌, ಕಿರಾಣಾ ಬಜಾರ್‌, ನೆಹರೂ ಗಂಜ್‌ ಪ್ರದೇಶದಲ್ಲಿ ಅಂಗಡಿಗಳ ಪೂಜೆಗೆ ಬಳಸಿದ ಬಾಳೆ ದಿಂಡು, ತೆಂಗಿನ ಗರಿಕೆ, ಹೂವಿನ ಹಾರ ಮತ್ತು ಪ್ಲಾಸ್ಟಿಕ್‌ ವಸ್ತುಗಳು ಕಸದ ತೊಟ್ಟಿಗಳಲ್ಲಿ ತುಂಬಿದೆ.

‘ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಬೆಳಿಗ್ಗೆಯಿಂದಲೇ ಪ್ರಮುಖ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದಾರೆ. ಆದರೆ, ಗುಡಿಸಿದ ಕಸ ವಿಲೇವಾರಿ ಮಾಡದೆ ಕಸದ ತೊಟ್ಟಿಯಲ್ಲಿ ತುಂಬಿದ್ದಾರೆ. ನಗರಪಾಲಿಕೆಯ ಕಸ ಪೂರೈಕೆ ವಾಹನಗಳ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಕಸದ ತೊಟ್ಟಿ ಖಾಲಿ ಮಾಡುವ ಕೆಲಸ ಆಮೆ ವೇಗದಲ್ಲಿ ಸಾಗಿದೆ’ ಎಂಬ ದೂರು ಕೇಳಿಬಂದಿವೆ.

‘ಕಳೆದ ಐದು ದಿಗಳಿಂದ ಮಾರುಕಟ್ಟೆ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಇಲ್ಲಿನ ಹನುಮಾನ ಮಂದಿರ ಪಕ್ಕದಲ್ಲಿ ಕಬ್ಬು, ಬಾಳೆ ವ್ಯಾಪಾರ ನಡೆದ ಸ್ಥಳದಲ್ಲಿ ಕಸ ತೆರವುಗೊಳಿಸಲಾಗಿದೆ. ಆದರೆ, ಅಂಗಡಿ ಪೂಜೆ, ಅಡತ್‌ ಪೂಜೆ ಮಾಡಿ ಬಳಸಿದ ವಸ್ತುಗಳನ್ನು ಕಸದ ತೊಟ್ಟಿಯಲ್ಲಿ ತುಂಬಿದ್ದಾರೆ.

ADVERTISEMENT

ಪಾಲಿಕೆ ಸಿಬ್ಬಂದಿ ವಾಹನಗಳ ಮೂಲಕ ಕಸ ತೆರವುಗೊಳಿಸಿದ್ದಾರೆ. ಹಬ್ಬದಲ್ಲಿ ಸಿಬ್ಬಂದಿ ಕೊರತೆ ಮಧ್ಯೆಯೂ ಗಡಿಬಿಡಿಯಲ್ಲಿ ಕಸ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಎರಡು ದಿನಗಳಲ್ಲಿ ಕಸದ ಸಮಸ್ಯೆ ಪರಿಹಾರವಾಗಲಿದೆ’ ಎನ್ನುತ್ತಾರೆ ಮಹಾನಗರ ಪಾಲಿಕೆ ಪರಿಸರ ಎಂಜಿನಿಯರ್‌ ಚೇತನ ನಾಯಕ್‌.

‘ದೀಪಾವಳಿ ಮುಗಿದಿದೆ. ಆದರೆ, ಕಡೆ ಪಂಚಮಿವರೆಗೂ ಅಂಗಡಿಗಳ ಪೂಜೆ ಇರುತ್ತದೆ. ನಗರಪಾಲಿಕೆ ಅಧಿಕಾರಿಗಳು ನೈರ್ಮಲ್ಯ ಕಾಪಾಡಲು ಅಗತ್ಯ ಸಿಬ್ಬಂದಿ ನಿಯೋಜಿಸಬೇಕು. ಎಸೆದ ಕಸವನ್ನು ಸರಿಯಾದ ಸಮಯಕ್ಕೆ ವಿಲೇವಾರಿ ಮಾಡದಿದ್ದರೆ ಕಸ ಕೊಳೆತು ನಾರುತ್ತದೆ. ಇದರಿಂದ ರೋಗ ಹರುಡುವ ಅಪಾಯವಿರುತ್ತದೆ. ಹೀಗಾಗಿ ಅಂದಿನ ಕಸವನ್ನು ಅಂದೇ ತೆರವುಗೊಳಿಸಬೇಕು. ಅಂದಾಗ ಕಸದ ಸಮಸ್ಯೆ ಎದುರಾಗುವುದಿಲ್ಲ’ ಎನ್ನುತ್ತಾರೆ ಹೂವಿನ ಅಂಗಡಿ ಮಾಲೀಕ ರಮೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.