ADVERTISEMENT

ಕಾಂಗ್ರೆಸ್‌ ಸೇರಿ ಐವರು ನಾಮಪತ್ರ ಸಲ್ಲಿಕೆ

ಆಳಂದ ವಿಧಾನಸಭೆ ರಂಗೇರಿದ ಚುನಾವಣೆ ಕಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 10:01 IST
Last Updated 24 ಏಪ್ರಿಲ್ 2018, 10:01 IST

ಆಳಂದ: ಆಳಂದ ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆ ಬಯಸಿ ಸೋಮವಾರ ಐವರು ವಿವಿಧ ಪಕ್ಷದ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಯು ಏ.17ರಿಂದ ಆರಂಭವಾದರೂ ಈವರೆಗೆ ಯಾವ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿರಲಿಲ್ಲ. ಆದರೆ, ಇಂದು ಎಲ್ಲ ಪ್ರಮುಖ ಪಕ್ಷದ ಅಭ್ಯರ್ಥಿಗಳು ಸರದಿಯಂತೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದು ವಿಶೇಷ.

ಬೆಳಿಗ್ಗೆ 11ಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಾಸಕ ಬಿ.ಆರ್.ಪಾಟೀಲ ಅವರು ತಹಶೀಲ್ದಾರ್‌ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಜಿ.ಎಸ್.ಗಡೆದವರ ಅವರಿಗೆ ನಾಮಪತ್ರ ಸಲ್ಲಿಸಿದರು. ಇವರೊಂದಿಗೆ ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ ಪಾಟೀಲ, ಮಲ್ಲೇಶಪ್ಪ ಬಿರಾದಾರ, ದರ್ಗಾ ಸಮಿತಿ ಅಧ್ಯಕ್ಷ ಹಮೀದ್ ಅನ್ಸಾರಿ, ವಿ.ಡಿ.ಪಾಟೀಲ ಇದ್ದರು.

ರಾಷ್ಟ್ರೀಯ ಸಮಾಜ ಪಕ್ಷದ ಅಭ್ಯರ್ಥಿಯಾಗಿ ದತ್ತಪ್ಪ ಕೃಷ್ಣಪ್ಪ ಕಂಕಟೆ ಅವರು 12.40ಕ್ಕೆ ನಾಮಪತ್ರ ಸಲ್ಲಿಸಿದರು. ಇವರೊಂದಿಗೆ ಮಹಾದೇವ ಮೋಘಾ, ಮಲ್ಲಿಕಾರ್ಜುನ ಇದ್ದರು.

ADVERTISEMENT

ನಂತರ ಜೆಡಿಯು ಅಭ್ಯರ್ಥಿ ಅರುಣಕುಮಾರ ಸಿ.ಪಾಟೀಲ ಹಳ್ಳಿಸಲಗರ ಅವರು ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ಚುನಾವಣಾಧಿಕಾರಿ ಕಚೇರಿಗೆ ಆಗಮಿಸಿ ಮಧ್ಯಾಹ್ನ 1ಕ್ಕೆ ಉಮೇದುವಾರಿಕೆ ಸಲ್ಲಿಸಿದರು.

ಅವರ ಜತೆ ಸಂತೋಷ ದುಪದ, ರಾಜುಗೌಡ ಪಾಟೀಲ, ಮಲ್ಲಿನಾಥ ನಿಂಬಾಳ, ಕಲ್ಯಾಣರಾವ ಪಾಟೀಲ ಇದ್ದರು.

ನಂತರ ಬಿಜೆಪಿ ಅಭ್ಯರ್ಥಿಯಾಗಿ ಸುಭಾಷ ಆರ್‌.ಗುತ್ತೆದಾರ ಅವರು ನಾಮಪತ್ರ ಸಲ್ಲಿಸಲು ತಮ್ಮ ಅಧಿಕ ಸಂಖ್ಯೆಯ ಬೆಂಬಲಿಗರೊಂದಿಗೆ ದರ್ಗಾ ಚೌಕ್‌ನಿಂದ ಪಾದಯಾತ್ರೆ ಹಮ್ಮಿಕೊಂಡರು.

ಬಸ್‌ ನಿಲ್ದಾಣ ಮಾರ್ಗವಾಗಿ ಶ್ರೀರಾಮ ಮಾರುಕಟ್ಟೆ, ಹನುಮಾನ ದೇವರ ದರ್ಶನ ಪಡೆದು ತಹಶೀಲ್ದಾರ್‌ ಕಚೇರಿಗೆ ಆಗಮಿಸಿ ಮಧ್ಯಾಹ್ನ 1.40ಕ್ಕೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಸದ ಭಗವಂತರಾವ ಖುಬಾ, ಜಿ.ಪಂ ಅಧ್ಯಕ್ಷ ಸುವರ್ಣಾ ಮಲಾಜಿ, ಮಲ್ಲಿಕಾರ್ಜುನ ಕಂದಗೂಳೆ, ವಿಜಯಲಕ್ಷ್ಮಿ ರಾಗಿ, ಹರ್ಷಾನಂದ ಗುತ್ತೇದಾರ ಇತರರು ಅವರ ಜತೆಗಿದ್ದರು.

ಇವರ ನಂತರ ಜೆಡಿಎಸ್‌ ಅಭ್ಯರ್ಥಿ ಸೂರ್ಯಕಾಂತ ಕೊರಳ್ಳಿ ಅವರು ಮಧ್ಯಾಹ್ನ 2ಕ್ಕೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಇವರೊಂದಿಗೆ ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ವಿ.ಚಕ್ರವರ್ತಿ, ರಾಜ್ಯ ಘಟಕದ ಉಪಾಧ್ಯಕ್ಷ ಜಾಫರ್‌ ಹುಸೇನ್, ಚಂದ್ರಕಾಂತ ಘೊಡಕೆ, ರಾಜಕುಮಾರ ಮುದಗಲೆ ಇದ್ದರು.

ತಹಶೀಲ್ದಾರ್‌ ಎಚ್‌.ಬಿ.ಫಿರ್ಜಾದೆ, ಡಾ.ಸಂಜಯ ರೆಡ್ಡಿ, ಮರೆಪ್ಪ ಸಿಂಧೆ ಮತ್ತಿತರ ಅಧಿಕಾರಿಗಳು ಇದ್ದರು. ತಹಶೀಲ್ದಾರ್‌ ಕಚೇರಿ ಸುತ್ತಲಿನ ಸಿದ್ದಾರ್ಥ ಚೌಕ್‌, ತಡಕಲ ರಸ್ತೆ ಹಾಗೂ ಮುಖ್ಯರಸ್ತೆಯ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಪುರಸಭೆ ಹಾಗೂ ಸುತ್ತಲಿನ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಡಿವೈಎಸ್‌ಪಿ ವಿಜಯಕುಮಾರ, ಸಿಪಿಐ ಎಚ್‌.ಬಿ.ಸಣ್ಣಮನಿ ನೇತೃತ್ವದಲ್ಲಿ ಸ್ಥಳೀಯ ಪೊಲೀಸರು, 50 ಜನ ಬಿಎಸ್‌ಎಫ್‌ ಯೋಧರ ಸೇವೆಯೊಂದಿಗೆ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.